ತಿಮರೋಡಿ ವಿರುದ್ಧದ ಜೀವ ಬೆದರಿಕೆ ಆರೋಪದ ತನಿಖೆಗೆ ಹೈಕೋರ್ಟ್‌ ಅಸ್ತು; ಸುಳ್ಳು ಸಾಕ್ಷ್ಯ ಒತ್ತಾಯ ಆರೋಪಕ್ಕೆ ತಡೆ

ಸತೀಶ್ ಕುಮಾರ್ ರೈ ಎಂಬವರು ಕರೆ ಮಾಡಿ ತಿಮರೋಡಿಯನ್ನು ಸಮರ್ಥಿಸಿ, ನನಗೆ ಅವಮಾನವಾಗುವಂತೆ ಮಾತನಾಡಿ ಬೆದರಿಸಿದರು. ತಿಮರೋಡಿ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುವಂತೆ & ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
Mahesh Shetty Thimarodi
Mahesh Shetty Thimarodi
Published on

ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಜೀವ ಬೆದರಿಕೆ ಪ್ರಕರಣದ ತನಿಖೆ ಮುಂದುವರಿಕೆಗೆ ಮಂಗಳವಾರ ಅನುಮತಿಸಿರುವ ಕರ್ನಾಟಕ ಹೈಕೋರ್ಟ್, ಇದೇ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ‌ ಆರೋಪದ ತನಿಖೆಗೆ ತಡೆ ನೀಡಿದೆ.

ಜೀವ ಬೆದರಿಕೆ ಹಾಕಿದ ಮತ್ತು ಸುಳ್ಳು ಸಾಕ್ಷ್ಯ ಹೇಳಲು ಬಲವಂತಪಡಿಸಿದ ಆರೋಪದ ಮೇಲೆ ಪುತ್ತೂರು ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು. ತನಿಖೆಗೆ ತಿಮರೋಡಿ ಪೊಲೀಸರಿಗೆ ಸಹಕರಿಸಬೇಕು ಎಂದು ನಿರ್ದೇಶಿಸಿತು.

ತಿಮರೋಡಿ ಪರ ವಕೀಲ ಎಂ ಆರ್ ಬಾಲಕೃಷ್ಣ ಅವರು, ಅರ್ಜಿದಾರರು ಪ್ರಕರಣದಲ್ಲಿ ಮೊದಲನೆ ಆರೋಪಿಯಾಗಿದ್ದಾರೆ. ಪ್ರಕರಣದ ದೂರುದಾರರಿಗೆ,‌ ಎರಡನೇ ಆರೋಪಿಯು ಫೋನ್ ಮಾಡಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ. ಅರ್ಜಿದಾರರನ್ನು ಅಪರಾಧಿಯನ್ನಾಗಿಸಲು ಅಗತ್ಯವಾದ ಅಂಶಗಳು ದೂರಿನಲ್ಲಿ‌ ಇಲ್ಲ. ಈ ಆರೋಪಗಳು ಅರ್ಜಿದಾರಿಗೆ ಅನ್ವಯವಾಗದು. ಘಟನೆ ನಡೆದ 16 ದಿನಗಳ‌ ನಂತರ ದೂರು ದಾಖಲಿಸಲಾಗಿದೆ. ದುರುದ್ದೇಶದಿಂದ ತಿಮರೋಡಿ ಮೇಲೆ ದೂರು ದಾಖಲಿಸಲಾಗಿದೆ” ಎಂದರು.

ದೂರುದಾರರಾದ ಸತೀಶ್ ಕುಮಾರ್ ರೈ ಅವರ ಪರ ವಕೀಲರು ಎಸ್‌ ರಾಜಶೇಖರ್ ಅವರು “ಫೋನ್ ಸಂಭಾಷಣೆ‌ಯ ವಿವರ ಒಳಗೊಂಡ ಪೆನ್ ಡ್ರೈವ್ ಹಾಗೂ ಸಂಭಾಷಣೆಯ ವಿವರ ಸಲ್ಲಿಸಲಾಗಿದೆ.‌ ಅರ್ಜಿದಾರರ ವಿರುದ್ಧ ಹಿಂದೆ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ದೂರುದಾರನ್ನು ಬೆದರಿಸಲಾಗಿದೆ‌” ಎಂದು ತಿಳಿಸಿರು.

ವಾದ- ಪ್ರತಿವಾದ ಆಲಿಸಿದ ಪೀಠವು ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಆರೋಪಿಸಲಾಗಿರುವ ಸುಳ್ಳು ಸಾಕ್ಷ್ಯ ನೀಡುವಂತೆ ಬಲವಂತಪಡಿಸಿದ (ಬಿಎನ್ ಎಸ್ ಸೆಕ್ಷನ್ 232) ಅಪರಾಧ ಸಂಬಂಧ ತನಿಖೆ ನಡೆಸುವುದಕ್ಕೆ ತಡೆ ನೀಡಿತು. ಆದರೆ, ಜೀವ ಬೆದರಿಕೆ ಹಾಕಿದ (ಬಿಎನ್ ಎಸ್ ಸೆಕ್ಷಮ್ 351(2) ಅಪರಾಧ ಸಂಬಂಧ ಪೊಲೀಸರು ತನಿಖೆ ಮುಂದುವರಿಸಬಹುದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಆದೇಶ ಮಾಡಿ ಅರ್ಜಿ ವಿಚಾರಣೆ ಮುಂದೂಡಿತು.

Also Read
ʼಧರ್ಮಸ್ಥಳ ಕಾನೂನಿಗಿಂತ ಮಿಗಿಲಲ್ಲ, ಅದು ರಾಜ್ಯದಲ್ಲೇ ಇದೆʼ: ಮಹೇಶ್‌ ತಿಮರೋಡಿ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಸುಂದರ ರೈ ಮಂದಾರ ಅವರು ಮೇ 7ರಂದು ಪುತ್ತೂರು ಗ್ರಾಮೀಣ ಠಾಣಾ‌ ಪೊಲೀಸರಿಗೆ ದೂರು ನೀಡಿದ್ದರು. ನಾನು ಏ.15ರಂದು ಮಹೇಶ್ ಶೆಟ್ಟಿ ತಿಮರೋಡಿ  ವಿರುದ್ಧ ದೂರು ದಾಖಲಿಸಿದ್ದೆ. ಸತೀಶ್ ಕುಮಾರ್ ರೈ ಪಡುಮಲೆ ಎಂಬುವವರು ನನಗೆ ಕರೆ ಮಾಡಿ ತಿಮರೋಡಿ ಅವರನ್ನು ಸಮರ್ಥಿಸಿಕೊಂಡು, ನನಗೆ ಅವಮಾನವಾಗುವಂತೆ ಮಾತನಾಡಿ ಹೆದರಿಸಿ- ಬೆದರಿಸಿದರು. ತಿಮರೋಡಿ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುವಂತೆ ಮತ್ತು ಅವರ ಪರ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು.

 ಪುತ್ತೂರು ಗ್ರಾಮೀಣ ಠಾಣಾ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ಬಿಎನ್ ಎಸ್ ಸೆಕ್ಷನ್ 351(2) ಅಡಿಯಲ್ಲಿ ಜೀವ ಬೆದರಿಕೆ ಮತ್ತು ಸೆಕ್ಷನ್ 232 ಅಡಿಯಲ್ಲಿ ಬೆದರಿಕೆ ಹಾಕಿ ವ್ಯಕ್ತಿಯ ಘನತೆಗೆ ಹಾನಿ ಉಂಟು ಮಾಡಿದ ಮತ್ತು ಸುಳ್ಳು ಸಾಕ್ಷ್ಯ ನೀಡಲು ಒತ್ತಾಯಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

Kannada Bar & Bench
kannada.barandbench.com