

ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳು ಘಟಿಸಿದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣದ ಸಂಬಂಧ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಜುಲೈ 11ರಂದು ನೀಡಿರುವ ವರದಿಯನ್ನು ರದ್ದುಗೊಳಿಸಲು ಕೋರಿ ಆರ್‌ಸಿಬಿ ವಿಜಯೋತ್ಸವದ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠವು ಆದೇಶ ಕಾಯ್ದಿರಿಸಿತು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಬಿ ಕೆ ಸಂಪತ್ ಕುಮಾರ್ ಅವರು “ಮಾಧ್ಯಮಗಳಲ್ಲಿ ಡಿಎನ್‌ಎ ಮತ್ತು ಅದರ ಪದಾಧಿಕಾರಿಗಳ ಹೆಸರು ಪ್ರಸ್ತಾಪಿಸಿ ಘನತೆಗೆ ಹಾನಿ ಮಾಡಲಾಗಿದೆ. ನ್ಯಾ. ಕುನ್ಹಾ ಆಯೋಗವು ವಿಚಾರಣೆಯ ವೇಲೆ ಪಾಟೀಸವಾಲಿಗೆ ಅವಕಾಶ ಮಾಡಿಕೊಟ್ಟಿಲ್ಲ” ಎಂದರು.
ಈ ಹಂತದಲ್ಲಿ ನ್ಯಾ. ಗಂಜು ಅವರು “ಅರ್ಜಿದಾರರಿಗೆ ಮಾನಹಾನಿಯಾಗಿದ್ದರೆ ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರವಿದೆ. ಅಲ್ಲಿ ನಷ್ಟ ತುಂಬಿಕೊಡಲು ಸಿವಿಲ್ ದಾವೆ ಹೂಡಬಹುದು” ಎಂದರು.
ನ್ಯಾ. ಸಿಂಗ್ ಅವರು “ನ್ಯಾ. ಕುನ್ಹಾ ವರದಿಯನ್ನು ವಜಾ ಮಾಡಿದರೂ ನಿಮಗೆ ಆಗಿದೆ ಎನ್ನಲಾದ ಹಾನಿಯನ್ನು ತುಂಬಿಕೊಡಲಾಗದು” ಎಂದರು.
ಅದಕ್ಕೆ ಸಂಪತ್ ಕುಮಾರ್ ಅವರು “ಸಂವಿಧಾನದ 21ನೇ ವಿಧಿಯಡಿ ಮಾನಹಾನಿಯಾದರೆ ರಿಟ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದುವರೆಗೂ ಸರ್ಕಾರವು ಸದನದಲ್ಲಿ ನ್ಯಾ. ಕುನ್ಹಾ ವರದಿಯನ್ನು ಮಂಡಿಸಿಲ್ಲ. ಈ ವರದಿಯಲ್ಲಿ ಸಾಕಷ್ಟು ದೋಷಗಳಿವೆ” ಎಂದು ಲಾಲ್ ಕೃಷ್ಣ ಅಡ್ವಾಣಿ ವರ್ಸಸ್ ಬಿಹಾರ ರಾಜ್ಯ ಸರ್ಕಾರ ಪ್ರಕರಣವನ್ನು ಉಲ್ಲೇಖಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ನೋಟಿಸ್ ನೀಡುವುದಾದರೆ ದೂರಿನ ಪ್ರತಿಯ ಜೊತೆಗೆ ನೋಟಿಸ್ ನೀಡಲಾಗುವುದು ಎಂದು ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿದ್ದಾರೆ. ಕ್ರಿಮಿನಲ್ ಪ್ರಕ್ರಿಯೆ ಸಂಬಂಧ ಸ್ವತಂತ್ರವಾಗಿ ಪೊಲೀಸರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಒಂದೊಮ್ಮೆ ನ್ಯಾ. ಕುನ್ಹಾ ವರದಿ ಆಧರಿಸಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ಗೆ ನೋಟಿಸ್ ನೀಡುವುದಾದರೆ ಅದನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗುವುದು” ಎಂದರು.
“ಜೂನ್ 5ರಂದು ಕಾಲ್ತುಳಿತ ಸಂಭವಿಸಿದ್ದು, ಜುಲೈ 11ರಂದು ನ್ಯಾ. ಕುನ್ಹಾ ಆಯೋಗ ವರದಿ ನೀಡಿದೆ. ಘಟನೆ ನಡೆದ ದಿನದಿಂದಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆಯೇ ವಿನಾ ಸರ್ಕಾರದಿಂದ ಆ ಕೆಲಸವಾಗಿಲ್ಲ. ಅದಾಗ್ಯೂ, ಮಾಧ್ಯಮ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ರಿಟ್ ಅರ್ಜಿ ಸಲ್ಲಿಸಲಾಗದು” ಎಂದರು.
ಆಗ ಪೀಠವು “ಅರ್ಜಿದಾರರ ಘನತೆಗೆ ಹಾನಿಯಾಗಿದ್ದರೆ ಬೇರೊಂದು ದಾವೆಯ ಮೂಲಕ ಪ್ರಕ್ರಿಯೆ ನಡೆಸಬಹುದಾಗಿದೆ” ಎಂದು ಹೇಳಿ, ಆದೇಶ ಕಾಯ್ದಿರಿಸಿತು.