ಗೋಮಾಳ ವಿವಾದ: ರಾಮಚಂದ್ರಪುರ ಮಠದ ವಾದ ಎತ್ತಿ ಹಿಡಿದ ಹೈಕೋರ್ಟ್‌; ಎಸಿಎಫ್‌ ಆದೇಶ ವಜಾ

ಅರಣ್ಯ ಕಾಯಿದೆ 1963ರ ಸೆಕ್ಷನ್‌ 64 ಎ (1)ರ ಅಡಿ 2015ರ ಜುಲೈ 25ರಂದು ಎಸಿಎಫ್‌ ಆದೇಶ ಹೊರಡಿಸಿದ್ದರು. ಅನಧಿಕೃತ ವ್ಯಕ್ತಿಗಳು ಅರಣ್ಯ ಭೂಮಿ ವಶಪಡಿಸಿಕೊಂಡಿರುವುದರಿಂದ ತೆರವು ಮಾಡುವ ಅಧಿಕಾರವನ್ನು ಸೆಕ್ಷನ್‌ 64ಎ ಒದಗಿಸುತ್ತದೆ.
ಗೋಮಾಳ ವಿವಾದ: ರಾಮಚಂದ್ರಪುರ ಮಠದ ವಾದ ಎತ್ತಿ ಹಿಡಿದ ಹೈಕೋರ್ಟ್‌; ಎಸಿಎಫ್‌ ಆದೇಶ ವಜಾ
Karnataka HC

ಅರಣ್ಯ ಇಲಾಖೆ ಮತ್ತು ರಾಮಚಂದ್ರಾಪುರ ಮಠದ ನಡುವೆ ಭೂ ವಿವಾದಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಅರವತ್ತು ಎಕರೆ ಭೂಪ್ರದೇಶವನ್ನು ಮೀಸಲು ಅರಣ್ಯ ಎಂದು ಆದೇಶಿಸಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಅವರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬದಿಗೆ ಸರಿಸಿದೆ. ಆಕ್ಷೇಪಾರ್ಹವಾದ ಭೂಮಿಯು ಗೋಮಾಳ ಎಂದು ವಾದಿಸಿ ಎಸಿಎಫ್‌ ಆದೇಶವನ್ನು ಶ್ರೀ ರಾಮಚಂದ್ರಾಪುರ ಮಠವು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

ಹೊಸನಗರ ತಾಲ್ಲೂಕಿನ ಸರ್ವೆ ನಂಬರ್‌ 7ರಲ್ಲಿರುವ 25 ಎಕರೆ ಗೋಮಾಳವನ್ನು ಮಂಜೂರು ಮಾಡುವಂತೆ ಮಠವು ಧರ್ಮ ಚಕ್ರ ಟ್ರಸ್ಟ್‌ ಮೂಲಕ ಮನವಿ ಮಾಡಿತ್ತು. ಹಲವು ಗೋಶಾಲೆಗಳನ್ನು ನಡೆಸುವ ಉದ್ದೇಶಕ್ಕಾಗಿ ಭೂಮಿ ಬೇಕು ಎಂದು ಮಠ ವಾದಿಸಿತ್ತು. ಇದನ್ನು ಆಧರಿಸಿ ಅರಣ್ಯ ಇಲಾಖೆ ದೂರು ದಾಖಲಿಸಿದ್ದು, ಎಸಿಎಫ್‌ ಅವರು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್‌ 64 ಎ (1)ರ ಅಡಿ 2015ರ ಜುಲೈ 25ರಂದು ಆದೇಶ ಹೊರಡಿಸಿದ್ದರು. ಸೆಕ್ಷನ್‌ 64 ಎ ಅನಧಿಕೃತ ವ್ಯಕ್ತಿಗಳು ಅರಣ್ಯ ಭೂಮಿಯನ್ನು ವಶಪಡಿಸಿಕೊಂಡಿರುವುದನ್ನು ತೆರವು ಮಾಡುವ ಅಧಿಕಾರ ಒದಗಿಸುತ್ತದೆ.

ರಾಜ್ಯ ಸರ್ಕಾರವು ಆಕ್ಷೇಪಾರ್ಹವಾದ ಭೂಮಿಯನ್ನು ಗೋಮಾಳ ಎಂದು ನಿರ್ಧರಿಸಿದೆ. ಘೋಷಣಾದೇಶ (ಪ್ರೊಕ್ಲೈಮೇಷನ್‌ ಆರ್ಡರ್‌) ಮತ್ತು ಆ ಬಳಿಕ 2005ರ ಮಾರ್ಚ್‌ 28ರಂದು ಹೊರಡಿಸಲಾದ ಗೆಜೆಟ್‌ ಅಧಿಸೂಚನೆಯಲ್ಲಿ 160 ಎಕರೆ ಭೂಮಿಯನ್ನು ಮೀಸಲು ಅರಣ್ಯ ಎಂದು ಹೇಳಲಾಗಿದ್ದು, ಇದರಲ್ಲಿ 60 ಎಕರೆ ಗೋಮಾಳವನ್ನು ಕೈಬಿಡಲಾಗಿದೆ. ಘೋಷಣಾದೇಶ ಮತ್ತು ಅಧಿಸೂಚನೆಯನ್ನು ಪ್ರಶ್ನಿಸಲಾಗಿಲ್ಲ ಎಂದು ಮಠದ ಪರ ವಕೀಲರು ತಿಳಿಸಿದರು.

ಮಠ ಮನವಿ ಸಲ್ಲಿಸಿದ ಬಳಿಕ 2012ರ ನವೆಂಬರ್‌ 21ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಭೂಮಿಯು ಗೋಮಾಳವಾಗಿದೆ ಎಂದು ಹೇಳಿದ್ದನ್ನು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಪರಿಗಣನೆಗೆ ತೆಗೆದುಕೊಂಡಿದೆ.

Also Read
ಗೋ ಹತ್ಯೆ ನಿಷೇಧ ಕಾಯಿದೆ: ನವೆಂಬರ್‌ 15ಕ್ಕೆ ಅಂತಿಮ ವಿಚಾರಣೆ ನಿಗದಿಪಡಿಸಿದ ಕರ್ನಾಟಕ ಹೈಕೋರ್ಟ್‌

“ಆಕ್ಷೇಪಾರ್ಹವಾದ ಭೂಮಿಯನ್ನು ಗೋಮಾಳ ಎಂದೇ ಪರಿಗಣಿಸಿ ಅರ್ಜಿದಾರ ಮಠದ ಗೋವುಗಳು ಇತರೆ ಕೃಷಿಕರ ಅನುಭೋಗಕ್ಕೆ ಅವಕಾಶ ಮಾಡಿಕೊಡಬೇಕು; ಆಕ್ಷೇಪಾರ್ಹವಾದ ಆದೇಶದ ಹಿನ್ನೆಲೆಯಲ್ಲಿ ಭೂ ದಾಖಲೆಗಳಲ್ಲಿ ಬದಲಾವಣೆ ಮಾಡಿದ್ದರೆ ಅದನ್ನು ಮೊದಲಿನ ಸ್ಥಿತಿಗೆ ವರ್ಗಾಯಿಸಬೇಕು. ಈ ಕೆಲಸವನ್ನು ಸಂಬಂಧಪಟ್ಟ ತಹಶೀಲ್ದಾರ್‌ ಎರಡು ತಿಂಗಳ ಒಳಗೆ ಪೂರೈಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಗೋಮಾಳದ ಭೂಮಿಯ ಮಂಜೂರಾತಿಗೆ ಸಂಬಂಧಿಸಿದಂತೆ ಎರಡನೇ ಪ್ರತಿವಾದಿಯು (ಕಂದಾಯ ಇಲಾಖೆ) ವಾದಿಯ (ರಾಮಚಂದ್ರಾಪುರ ಮಠ) ಮನವಿಯನ್ನು ಕಾನೂನಿನ ಅನುಸಾರ ಹಂಚಿಕೆಗೆ ಪರಿಗಣಿಸಬೇಕು ಮತ್ತು ಇದರ ಫಲಿತಾಂಶವನ್ನು ಆರು ತಿಂಗಳೊಳಗೆ ತಿಳಿಸಬೇಕು ಎಂದು ನ್ಯಾಯಾಲಯವು ಸೂಚಿಸಿತು. ಅಲ್ಲದೆ, ಮಠದ ಮನವಿಯನ್ನು ಪರಿಗಣಿಸುವ ಸಂಬಂಧ ಅಗತ್ಯವಿರುವ ದಾಖಲೆಗಳನ್ನು ಮಠದಿಂದ ಕೋರಬಹುದಾದರೂ ಇದನ್ನು ಬಳಸಿಕೊಂಡು ಪ್ರಕ್ರಿಯೆಯನ್ನು ವಿಳಂಬಗೊಳಿಸುವಂತಿಲ್ಲ ಎಂದೂ ಪೀಠವು ಎಚ್ಚರಿಸಿತು.

Related Stories

No stories found.
Kannada Bar & Bench
kannada.barandbench.com