
ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಜಿಲ್ಲಾ ನ್ಯಾಯಾಂಗದ 452 ನ್ಯಾಯಾಧೀಶರನ್ನು ಕರ್ನಾಟಕ ಹೈಕೋರ್ಟ್ ರಾಜ್ಯದ ವಿವಿಧೆಡೆಗೆ ವರ್ಗಾಯಿಸಿದ್ದು, ಜೂನ್ 2ಕ್ಕೆ ವರ್ಗಾವಣೆ ಅನ್ವಯಿಸಲಿದೆ.
ವರ್ಗಾವಣೆಗೊಂಡಿರುವವರ ಪೈಕಿ 119 ಮಂದಿ ಜಿಲ್ಲಾ ನ್ಯಾಯಾಧೀಶರು, ನಾಲ್ವರು ತಾತ್ಕಾಲಿಕ ಜಿಲ್ಲಾ ನ್ಯಾಯಾಧೀಶರು, 113 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು 216 ಸಿವಿಲ್ ನ್ಯಾಯಾಧೀಶರು ಸೇರಿದ್ದಾರೆ.
ವರ್ಗಾವಣೆಯಾದವರಲ್ಲಿ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ್ ಮತ್ತು ಸಿಬಿಐ ಪ್ರಕರಣಗಳ ವಿಚಾರಣೆಗೆ ನೇಮಕವಾಗಿರುವ ವಿಶೇಷ ನ್ಯಾಯಾಧೀಶ ಎಚ್ ಎ ಮೋಹನ್ ಅವರು ಸೇರಿದ್ದಾರೆ. ನ್ಯಾ. ಗಂಗಾಧರ್ ಅವರ ಹುದ್ದೆಗೆ 55ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಕೆಂಪರಾಜು ಅವರನ್ನು ವರ್ಗಾಯಿಸಲಾಗಿದೆ. ಗಂಗಾಧರ್ ಅವರನ್ನು ಗದಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ವರ್ಗಾಯಿಸಲಾಗಿದೆ.
32ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಸಿಬಿಐ ಪ್ರಕರಣಗಳ ವಿಚಾರಣೆಗೆ ನೇಮಕವಾಗಿದ್ದ ವಿಶೇಷ ನ್ಯಾಯಾಧೀಶ ಎಚ್ ಎ ಮೋಹನ್ ಅವರನ್ನು ವಿಜಯಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ವರ್ಗಾಯಿಸಲಾಗಿದೆ. ಆ ಹುದ್ದೆಗೆ ಮೈಸೂರಿನ ಕೈಗಾರಿಕಾ ನ್ಯಾಯಾಧಿಕರಣದ ಮೇಲ್ವಿಚಾರಣಾ ಅಧಿಕಾರಿ ರುಡಾಲ್ಫ್ ಪೆರೇರಾ ಅವರನ್ನು ವರ್ಗಾಯಿಸಲಾಗಿದೆ.
ಉಳಿದಂತೆ ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ ಎಸ್ ಭಾರತಿ ಅವರನ್ನು ಧಾರವಾಡಕ್ಕೆ ಅದೇ ಹುದ್ದೆಗೆ, ಬೆಂಗಳೂರಿನ ಸ್ಮಾಲ್ ಕಾಸಸ್‌ನ ಪ್ರಧಾನ ನ್ಯಾಯಾಧೀಶ ಜೆ ಎನ್ ಸುಬ್ರಮಣ್ಯ ಅವರನ್ನು ಮಂಡ್ಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾಯಿಸಲಾಗಿದೆ.
ಗದಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಅವರನ್ನು ಮಂಗಳೂರಿನ ಅದೇ ಹುದ್ದೆಗೆ, ಯಾದಗಿರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ ಎಸ್ ರೇಖಾರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಹುದ್ದೆಗೆ, ಮಂಡ್ಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ ಭೃಂಗೇಶ್ ಅವರನ್ನು ಬೆಂಗಳೂರು ನಗರದ ಸ್ಮಾಲ್ ಕಾಸಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ಹುದ್ದೆಗೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ ಪ್ರಭಾವತಿ ಅವರನ್ನು ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಗದಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಯನ್ನಾಗಿ ಚಿಕ್ಕಬಳ್ಳಾಪುರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನಾಗವೇಣಿ ಅವರನ್ನು, ಯಾದಗಿರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್ ಜೆ ಮರುಳಸಿದ್ಧಾರಾಧ್ಯ ಅವರನ್ನು ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ಬೆಂಗಳೂರು ನಗರದ 27ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎ ಹರೀಶ ಅವರನ್ನು ವರ್ಗಾಯಿಸಲಾಗಿದೆ.
ನಿವೃತ್ತಿ: ಇನ್ನು ಈ ಹಿಂದೆ ಎನ್‌ಐಎ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆಪ್ತ ಕಾರ್ಯದರ್ಶಿಯಾಗಿದ್ದ, ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಾ. ಕಸನಪ್ಪ ನಾಯ್ಕ್, ಧಾರವಾಡ ಹಾಗೂ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ ಜಿ ರಮಾ ಹಾಗೂ ರವೀಂದ್ರ ಎಂ. ಜೋಶಿ ಅವರು 31.05.2025ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.