ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಇರುವ ಗೇಣಿದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿ ಗೇಣಿದಾರರಿಗೆ ಮಾಲೀಕತ್ವ ಪ್ರಧಾನ ಮಾಡುವ ಅಧಿನಿಯಮ-2011ರ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.
ಉಡುಪಿಯ ಅದಮೂರು ಮಠ, ಗಣೇಶ್ ಪೈ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಉದಯ್ ಹೊಳ್ಳ ಮತ್ತು ರವೀಂದ್ರನಾಥ್ ಕಾಮತ್ ಅವರು “ಯೋಗ್ಯ ಬೆಲೆ ಪಾವತಿಸಿ ಜಮೀನು ವಶಪಡಿಸಿಕೊಳ್ಳುವುದಕ್ಕೆ ವಿರುದ್ಧವಾಗಿ ಕನಿಷ್ಠ ಬೆಲೆ ಪಾವತಿಸುವ ಮೂಲಕ ಭೂಮಿ ವಶಕ್ಕೆ ಪಡೆಯುತ್ತಿರುವುದು ಸಂವಿಧಾನಬಾಹಿರ. ಇದರಿಂದ ಮೂಲಗಾರರು ಅಥವಾ ಭೂ ಮಾಲೀಕರರಿಗೆ ಅನ್ಯಾಯ ಮಾಡಿದಂತಾಗುತ್ತದೆ” ಎಂದು ವಾದಿಸಿದ್ದರು.
ಗೇಣಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಬಿ ವಿ ಆಚಾರ್ಯ ಮತ್ತು ಎ ಜಿ ಹೊಳ್ಳ ಅವರು “ಮೂಲಗೇಣಿದಾರರು ತಲೆತಲಾಂತರಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಾ ಬಂದಿದ್ದು, ಅವರಿಗೆ ಭೂಮಿಯ ಹಕ್ಕು ನೀಡುವುದು ನ್ಯಾಯೋಚಿತ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಕಾಯಿದೆ ಸಿಂಧುವಾಗಿದೆ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಬ್ರಿಟಿಷರ ಕಾಲದಲ್ಲಿ ಭೂಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಸ್ಥಳೀಯವಾಗಿ ಶ್ರೀಮಂತರು, ಮಠ, ಮಂದಿರ, ಮಸೀದಿ ಮತ್ತು ಚರ್ಚುಗಳಿಗೆ ನೀಡಲಾಗಿತ್ತು. ಕಾಲಾನಂತರದಲ್ಲಿ ಆ ಭೂಮಿಯ ಕಂದಾಯ ವಸೂಲಿ ಮಾಡಿ, ಮೇಲುಸ್ತುವಾರಿ ನೋಡಿಕೊಳ್ಳುವವರು ಮೂಲದಾರರು/ಭೂ ಮಾಲೀಕರು ಎನಿಸಿಕೊಂಡಿದ್ದರು. ಕಾಲಾನಂತರದಲ್ಲಿ ಇದೇ ಭೂಮಿಯನ್ನು ತಲೆತಲಾಂತರಗಳಿಂದ ವಾಸ್ತವಿಕವಾಗಿ ಅನುಭವಿಸಿಕೊಂಡು ಬಂದವರು ಮೂಲಗೇಣಿದಾರರು ಎಂದು ಭೂಮಿಯ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿತ್ತು.
ಭೂಮಿ ಸ್ವಾಧೀನದಲ್ಲಿದ್ದರೂ ಒಡೆತನವಿಲ್ಲದ ಕಾರಣ ಜಾಗವನ್ನು ಅಭಿವೃದ್ಧಿಪಡಿಸುವುದು ಮೂಲಗೇಣಿದಾರರಿಗೆ ಕಷ್ಟವಾಗಿತ್ತು. ಬ್ಯಾಂಕ್‌ನಿಂದ ಸಾಲ-ಸೌಲಭ್ಯ ದೊರೆಯುತ್ತಿರಲಿಲ್ಲ. ಹೀಗಾಗಿ, ಅದನ್ನು ಮಾರಾಟ ಮಾಡುವ ಹಕ್ಕೂ ಮೂಲಗೇಣಿದಾರರಿಗೆ ಇಲ್ಲವಾಗಿತ್ತು. ಸಾಕಷ್ಟು ಹೋರಾಟದ ಬಳಿಕ ಮೂಲಗೇಣಿದಾರರಿಗೆ ಜಮೀನಿನ ಪೂರ್ಣ ಮಾಲೀಕತ್ವ ಮತ್ತು ಮೂಲದಾರರಿಗೆ ನ್ಯಾಯಯುತ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಕಾಯಿದೆ ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಈಗ ನ್ಯಾಯಾಲಯ ವಜಾ ಮಾಡಿದೆ.