ಲೀಲಾವತಿ ಟ್ರಸ್ಟ್ ಹೂಡಿರುವ ಎಫ್ಐಆರ್ ರದ್ದತಿ ಕೋರಿ ಸುಪ್ರೀಂ ಮೆಟ್ಟಿಲೇರಿದ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ

ಲೀಲಾವತಿ ಟ್ರಸ್ಟ್ ಸಲ್ಲಿಸಿರುವ ಪ್ರಕರಣ ಕ್ಷುಲ್ಲಕವಾಗಿದ್ದು, ಇದು ಒತ್ತಡ ಹೇರುವ ತಂತ್ರ ಎಂದು ಎಚ್‌ಡಿಎಫ್‌ಸಿ ಮುಖ್ಯಸ್ಥರ ಪರ ವಕೀಲರು ವಾದಿಸಿದರು.
Supreme Court, HDFC Bank
Supreme Court, HDFC Bank
Published on

ತಮ್ಮ ವಿರುದ್ಧ ಮುಂಬೈನ ಪ್ರಸಿದ್ಧ ಲೀಲಾವತಿ ಆಸ್ಪತ್ರೆಯ ಮಾಲೀಕತ್ವ ಹೊಂದಿರುವ ಲೀಲಾವತಿ ಕೀರ್ತಿಲಾಲ್ ಮೆಹ್ತಾ ವೈದ್ಯಕೀಯ ಟ್ರಸ್ಟ್ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಜಗದೀಶನ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ವಿನೋದ್ ಚಂದ್ರನ್ ಅವರಿದ್ದ ಪೀಠದೆದುರು ಇಂದು (ಗುರುವಾರ) ಬೆಳಿಗ್ಗೆ ಪ್ರಕರಣ ಪ್ರಸ್ತಾಪಿಸಲಾಯಿತು.

Also Read
ಎಫ್ಐಆರ್ ಹೂಡಿದ ಲೀಲಾವತಿ ಟ್ರಸ್ಟ್: ಬಾಂಬೆ ಹೈಕೋರ್ಟ್‌ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶ್ ಮೊರೆ

ಎಚ್‌ಡಿಎಫ್‌ಸಿ ಮುಖ್ಯಸ್ಥರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಇದು ತಮ್ಮ ಕಕ್ಷಿದಾರ ಶಶಿಧರ್‌ ಅವರನ್ನು ಹತ್ತಿಕ್ಕುವ ಕ್ಷುಲ್ಲಕ ಪ್ರಕರಣ. ಲೀಲಾವತಿ ಟ್ರಸ್ಟ್‌ನಿಂದ ಬ್ಯಾಂಕ್‌ ಹಣ ವಸೂಲಿ ಮಾಡಬೇಕಿದ್ದರಿಂದ ಹೀಗೆ ಮಾಡಲಾಗಿದೆ. ಬಾಂಬೆ ಹೈಕೋರ್ಟ್‌ನ ಮೂರು ಪೀಠಗಳು ಪ್ರಕರಣವನ್ನು ಆಲಿಸಿಲ್ಲ ಎಂದರು.  ಪ್ರಕರಣವನ್ನು ನಾಳೆ ವಿಚಾರಣೆಗೆ ಪಟ್ಟಿಮಾಡಲಾಗುವುದು ಎಂದು ನ್ಯಾಯಾಲಯ ಈ ಹಂತದಲ್ಲಿ ತಿಳಿಸಿತು.

Also Read
ಲೀಲಾವತಿ ಟ್ರಸ್ಟ್ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಬಾಂಬೆ ಹೈಕೋರ್ಟ್‌ನ 10ಕ್ಕೂ ಅಧಿಕ ನ್ಯಾಯಮೂರ್ತಿಗಳು

ಲೀಲಾವತಿ ಟ್ರಸ್ಟ್ ಮೇಲೆ ಅಕ್ರಮ ಹಿಡಿತ ಮುಂದುವರೆಸುವುದಕ್ಕಾಗಿ  ಚೇತನ್ ಮೆಹ್ತಾ ಸಮೂಹಕ್ಕೆ ಸಹಾಯ ಮಾಡಲು ಶಶಿಧರ್‌  ₹2.05 ಕೋಟಿ ಲಂಚ ಸ್ವೀಕರಿಸಿದ್ದಾರೆ. ಶಶಿಧರ್‌ ಅವರು ಪ್ರಮುಖ ಖಾಸಗಿ ಬ್ಯಾಂಕಿನ ಮುಖ್ಯಸ್ಥ ಹುದ್ದೆ ದುರುಪಯೋಗಪಡಿಸಿಕೊಂಡು ದತ್ತಿ ಸಂಸ್ಥೆಯ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಟ್ರಸ್ಟ್‌ ದೂರಿತ್ತು.

ಪ್ರಕರಣವನ್ನು ರದ್ದುಗೊಳಿಸುವಂತೆ ಶಶಿಧರ್‌ ಅವರು ಈ ಹಿಂದೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹತ್ತಕ್ಕೂ ಹೆಚ್ಚು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದರು. ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಜೂನ್ 30 ರಂದು ಶಶಿಧರ್‌ ಅವರು ಕೋರಿದ್ದರಾದರೂ ಹೈಕೋರ್ಟ್‌ ಅದಕ್ಕೆ ಒಲವು ತೋರಿರಲಿಲ್ಲ. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹಿನ್ನೆಲೆ: ಲೀಲಾವತಿ ಟ್ರಸ್ಟ್ ಸಲ್ಲಿಸಿದ ದೂರಿನಲ್ಲಿ, ಚೇತನ್ ಮೆಹ್ತಾ ಸಮೂಹವು ಲೀಲಾವತಿ ಟ್ರಸ್ಟ್‌ನ ಆಡಳಿತದ ಮೇಲೆ ಕಾನೂನುಬಾಹಿರ ನಿಯಂತ್ರಣವನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಸಹಾಯ ಮಾಡಲು ಸಲಹೆಯನ್ನು ನೀಡುವ ಸಲುವಾಗಿ ಜಗದಿಶನ್ ಅವರು ₹2.05 ಕೋಟಿ ಲಂಚವನ್ನು ಮೆಹ್ತಾ ಸಮೂಹದಿಂದ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಮುಖ ಖಾಸಗಿ ಬ್ಯಾಂಕಿನ ಮುಖ್ಯಸ್ಥರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ದತ್ತಿ ಸಂಸ್ಥೆಯ ಆಂತರಿಕ ವ್ಯವಹಾರಗಳಲ್ಲಿ ಜಗದೀಶನ್‌ ಅವರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಟ್ರಸ್ಟ್ ಆರೋಪಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಇಒ ಆದ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಅಲ್ಲದೆ, ಜಗದೀಶನ್ ಮತ್ತು ಅವರ ಕುಟುಂಬವು ಲೀಲಾವತಿ ಆಸ್ಪತ್ರೆಯಿಂದ "ಉಚಿತ ವೈದ್ಯಕೀಯ ಚಿಕಿತ್ಸೆ" ಪಡೆದುಕೊಂಡಿದ್ದಾರೆ ಎಂದು ಟ್ರಸ್ಟ್ ಆಪಾದಿಸಿದೆ.

ಮುಂದುವರೆದು, ತಾನು 2022ರ ಆರ್ಥಿಕ ವರ್ಷದಿಂದ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಒಟ್ಟು ₹48 ಕೋಟಿ ಠೇವಣಿ ಮತ್ತು ಹೂಡಿಕೆಗಳನ್ನು ಇರಿಸಿದ್ದು, ಪ್ರಸಕ್ತ ಬೆಳವಣಿಗೆಗಳು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಟ್ರಸ್ಟ್‌ನ ಆಂತರಿಕ ವಿವಾದಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಮಾಡಲು ಮತ್ತು ನಕಲು ಮಾಡಲು ಅನುಕೂಲವಾಗುವಂತೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯ ನೆಪದಲ್ಲಿ ಜಗದೀಶ್ ಅವರು ₹1.5 ಕೋಟಿ ಹಣವನ್ನು ನೀಡಲು ಮುಂದಾಗಿದ್ದರು ಎಂದೂ ಟ್ರಸ್ಟ್‌ ಆರೋಪಿಸಿದೆ.

Kannada Bar & Bench
kannada.barandbench.com