ಪಕ್ಷಕಾರರ ನಡುವೆ ರಾಜಿ ಏರ್ಪಟ್ಟರೂ ಕೂಡ, ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಅಂತರ್ಗತ ಅಧಿಕಾರ ಚಲಾಯಿಸುವ ಮೂಲಕ ಅತ್ಯಾಚಾರದಂತಹ ಘೋರ ಅಪರಾಧಗಳಲ್ಲಿ ದಾಖಲಿಸಿದ ಪ್ರಕರಣಗಳನ್ನು ರದ್ದುಗೊಳಿಸಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ (ದಿನೇಶ್ ಶರ್ಮಾ ಮತ್ತುವಿ. ಸರ್ಕಾರ ಹಾಗೂ ಇತರರ ನಡುವಣ ಪ್ರಕರಣ).
ಅರ್ಜಿದಾರರ ವಿರುದ್ಧ 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೊಕ್ಸೊ ಕಾಯಿದೆ) ಅಡಿ ಮಾಡಲಾದ ಆರೋಪಗಳನ್ನು ರದ್ದುಗೊಳಿಸಲು ಸೆಕ್ಷನ್ 482 ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ನ್ಯಾ. ಸುಬ್ರಮೊಣಿಯನ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ಸೆಕ್ಷನ್ 482ರಲ್ಲಿ ಅಂತರ್ಗತವಾಗಿರುವ ಅಧಿಕಾರವನ್ನು ಬಳಸಿ ಅತ್ಯಾಚಾರದಂತಹ ಘೋರ ಪ್ರಕರಣಗಳ ವಿಚಾರಣೆಯನ್ನು ರದ್ದುಗೊಳಿಸಲಾಗದು ಎಂದು ಸುಪ್ರೀಂಕೋರ್ಟ್ ಈಗಾಗಲೇ ತೀರ್ಮಾನಿಸಿದೆ. ಸಂವಿಧಾನದ 141 ನೇ ವಿಧಿ ಅನ್ವಯ ಸುಪ್ರೀಂ ಕೋರ್ಟ್ ಆದೇಶ ಅನುಸರಿಸಲು ತಾನು ಬದ್ಧ ಎಂದು ನ್ಯಾಯಾಲಯ ಹೇಳಿದೆ.
"… ಸಂತ್ರಸ್ತೆ ಮತ್ತು ಆರೋಪಿ ನಡುವೆ ರಾಜಿ ಏರ್ಪಟ್ಟರೂ ಕೂಡ ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಅಧಿಕಾರ ಚಲಾಯಿಸುವ ಮೂಲಕ ಅತ್ಯಾಚಾರದಂತಹ ಘೋರ ಅಪರಾಧಗಳನ್ನು ಹೈಕೋರ್ಟ್ ರದ್ದುಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ತೀರ್ಪುಗಳು ಸಂವಿಧಾನದ 141ನೇ ವಿಧಿ ಅನ್ವಯ ನ್ಯಾಯಾಂಗಕ್ಕೆ ಬದ್ಧವಾಗಿವೆ. ಪೋಕ್ಸೊ ಕಾಯಿದೆಯಡಿ ಅಪರಾಧ ಎಸಗಿದ ಆರೋಪ ಅರ್ಜಿದಾರರ ಮೇಲಿದೆ," ಎಂದು ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸುತ್ತಾ ಹೇಳಿತು.
ಪೋಕ್ಸೊ ಕಾಯಿದೆಯನ್ನು ಜಾರಿಗೆ ತರುವ ಶಾಸಕಾಂಗದ ಉದ್ದೇಶ ಮಕ್ಕಳ ಹಿತ ಕಾಪಾಡುವುದಾಗಿದ್ದು ಕಾಯಿದೆಯಡಿಯ ವಿಚಾರಣೆ ರದ್ದುಗೊಳಿಸುವುದು ಶಾಸನ ರೂಪಿಸಿದವರ ಉದ್ದೇಶಕ್ಕೆ ವಿರುದ್ಧವಾದ ಕೆಲಸವಾಗುತ್ತದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಭಾರತೀಯ ದಂಡ ಸಂಹಿತೆ ಸೆಕ್ಷನ್ 34, 354, 354D, 506, 509 ಹಾಗೂ ಪೊಕ್ಸೊ ಕಾಯಿದೆಯ ಸೆಕ್ಷನ್ 10ರ ಪ್ರಕಾರ ಆರೋಪಿ ದಿನೇಶ್ ಶರ್ಮಾ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿ ದಿನೇಶ್ ಶರ್ಮಾ ಸಂತ್ರಸ್ತೆಯ ದೂರದ ಸಂಬಂಧಿ. ಕೆಲಸ ಅರಸಿ ಹೋದ ಶರ್ಮ ಸಂತ್ರಸ್ತೆಯ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸಂತ್ರಸ್ತೆಯ ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಆಕೆಗೆ ಕಿರುಕುಳ ನೀಡತೊಡಗಿದ. ಇದು ಕುಟುಂಬದವರಿಗೆ ತಿಳಿದು ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು. 2017ರ ಫೆಬ್ರುವರಿಯಲ್ಲಿ ಜಲಂಧರ್‌ಗೆ ಸಂತ್ರಸ್ತೆಯೊಂದಿಗೆ ಮದುವೆಗೆಂದು ಹೋದ ಕುಟುಂಬ ಅಲ್ಲಿ ದಿನೇಶ್ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಆತನ ಇಬ್ಬರು ಸಂಬಂಧಿಕರನ್ನು ಭೇಟಿಯಾಯಿತು. ಮದುವೆ ವೇಳೆ ದಿನೇಶನ ಇಬ್ಬರು ಸಂಬಂಧಿಕರು ನಮ್ಮ ಸ್ನೇಹವನ್ನು ಒಪ್ಪದಿದ್ದರೆ ನಿನ್ನ ನಗ್ನ ಚಿತ್ರಗಳನ್ನು ಅಂತರ್ಜಾಲದಲ್ಲಿ ಹರಿಯಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದರು. ಆಗ ಪೊಲೀಸರಿಗೆ ದೂರು ನೀಡಲಾಯಿತು.