'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ' ಎಂದ ಹೈಕೋರ್ಟ್‌; ಅನಾರೋಗ್ಯ ಪೀಡಿತ ತಾಯಿ ನೋಡಲು ಕೈದಿಗೆ ಪೆರೋಲ್‌

ಅರ್ಜಿದಾರನಿಗೆ ತಾಯಿಯನ್ನು ಕಾಣುವ ಅವಕಾಶ ನಿರಾಕರಿಸಲು ಹಾಗೂ ಮಗನನ್ನು ನೋಡಬೇಕೆಂಬ ತಾಯಿಯ ಆಸೆಯನ್ನು ಕಸಿದುಕೊಳ್ಳಲು ನ್ಯಾಯಾಲಯಕ್ಕೆ ಯಾವುದೇ ಕಾರಣ ಕಂಡು ಬಂದಿಲ್ಲ ಎಂದು ಮೂರು ವಾರ ಪೆರೋಲ್‌ ನೀಡಿದ ನ್ಯಾಯಾಲಯ.
Justice Krishna S Dixit and Karnataka HC
Justice Krishna S Dixit and Karnataka HC

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಲು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗೆ ಮೂರು ವಾರ ಪೆರೋಲ್ ನೀಡಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಪೆರೋಲ್ ನೀಡಲು ನಿರಾಕರಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬಯಲು ಬಂಧೀಖಾನೆ ಅಧೀಕ್ಷಕರ ಕ್ರಮ ಪ್ರಶ್ನಿಸಿ ಕೈದಿ ಶಿವಪ್ಪ ಬೆಲ್ಲದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿದೆ.

ವಾಲ್ಮೀಕಿ ರಾಮಾಯಣದ ‘ಜನನಿ ಜನ್ಮಭೂಮಿಶ್ಚ; ಸ್ವರ್ಗಾದಪಿ ಗರೀಯಸಿ’ ಎಂಬ ಲೋಕೋಕ್ತಿಯನ್ನು ಉಲ್ಲೇಖಿಸಿ ಅರ್ಜಿದಾರನಿಗೆ ಪೆರೋಲ್ ನೀಡಿದೆ. ತಾಯಿ ಮತ್ತು ಆತೃಭೂಮಿ ಸ್ವರ್ಗಕ್ಕೂ ಮಿಗಿಲು ಎಂಬುದು ಇದರ ಅರ್ಥ.

ವಾದ-ಪ್ರತಿವಾದ ಆಲಿಸಿದ ಪೀಠವು “ಮನುಷ್ಯನ ಜೀವನ ಅತ್ಯಂತ ಅಲ್ಪವಧಿಯದ್ದಾಗಿದೆ. ತಾಯಿ ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಪರಿಗಣಿಸಿದರೆ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ಅರ್ಜಿದಾರನಿಗೆ ಪರೋಲ್ ನೀಡಬಹುದಾಗಿದೆ. ಅರ್ಜಿದಾರನ 75 ವರ್ಷದ ತಾಯಿ ಗಂಗವ್ವ, ವಯೋಸಹಜ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಸದ್ಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಜನನಿ ಜನ್ಮಭೂಮಿಶ್ಚ; ಸ್ವರ್ಗಾದಪಿ ಗರೀಯಸಿ' ಎಂಬುದಾಗಿ ರಾಮಾಯಣದಲ್ಲಿ ವಾಲ್ಮೀಕಿ ಹೇಳಿದ್ಧಾರೆ. ಇದರ ಅರ್ಥ, ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು. ಸಾವಿನ ಅಂಚಿನಲ್ಲಿರುವ ತಾಯಿಯನ್ನು ಕಾಣಲು ಮಕ್ಕಳ ಹಂಬಲ ಮತ್ತು ಮಕ್ಕಳನ್ನು ನೋಡಲು ತಾಯಿ ವ್ಯಕ್ತಪಡಿಸುವ ಹಂಬಲ ನ್ಯಾಯಸಮ್ಮತವಾಗಿರುತ್ತದೆ. ಆದ್ದರಿಂದ, ಈ ಪ್ರಕರಣದಲ್ಲಿ ಅರ್ಜಿದಾರನಿಗೆ ತಾಯಿಯನ್ನು ಕಾಣುವ ಅವಕಾಶ ನಿರಾಕರಿಸಲು ಹಾಗೂ ಮಗನನ್ನು ನೋಡಬೇಕೆಂಬ ತಾಯಿಯ ಆಸೆಯನ್ನು ಕಸಿದುಕೊಳ್ಳಲು ನ್ಯಾಯಾಲಯಕ್ಕೆ ಯಾವುದೇ ಕಾರಣ ಕಂಡು ಬಂದಿಲ್ಲ” ಎಂದು ಅಭಿಪ್ರಾಯಪಟ್ಟಿತು.

ಅಂತಿಮವಾಗಿ ಅರ್ಜಿದಾರನಿಗೆ 2023ರ ಮೇ 24ರಿಂದ ಜೂನ್ 14ರವರೆಗೆ ಷರತ್ತುಬದ್ಧ ತುರ್ತು ಪೆರೋಲ್ ನೀಡುವಂತೆ ದೇವನಹಳ್ಳಿ ಬಯಲು ಬಂಧೀಖಾನೆಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿದಾರರ ಪರ ವಕೀಲರು, ಕೊಲೆ ಪ್ರಕರಣವೊಂದರಲ್ಲಿ ಅರ್ಜಿದಾರ ಶಿವಪ್ಪ ಬೆಲ್ಲದ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಈಗಾಗಲೇ ಏಳು ವರ್ಷ ಶಿಕ್ಷೆ ಪೂರೈಸಿದ್ದಾನೆ. ಈ ಅವಧಿಯಲ್ಲಿ ಸನ್ನಡತೆ ತೋರಿದ್ದಾನೆ. ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಆತನ 75 ವರ್ಷದ ತಾಯಿ ವಯೋಸಹಜ ಅನಾರೋಗ್ಯಕ್ಕೆ ಈಡಾಗಿದ್ದರು. ತಾಯಿಯನ್ನು ನೋಡಲು ಪೆರೋಲ್ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು 2022ರ ನವೆಂಬರ್‌ 10ರಂದು ತಿರಸ್ಕರಿಸಿರುವ ದೇವನಹಳ್ಳಿ ಬಯಲು ಬಂಧೀಖಾನೆ ಅಧೀಕ್ಷಕರು ಹಿಂಬರಹ ನೀಡಿದ್ದರು. ಅರ್ಜಿದಾರನ ತಾಯಿಯ ಆರೋಗ್ಯ ಕ್ಷೀಣಿಸುತ್ತಿದೆ. ಹೀಗಿದ್ದರೂ ಪೆರೋಲ್ ನಿರಾಕರಿಸಲಾಗಿದೆ. ಪೆರೋಲ್ ವಿಸ್ತರಣೆಗೆ ಪದೇ ಪದೇ ಕೋರುವುದಿಲ್ಲ ಎಂಬುದಾಗಿ ಅರ್ಜಿದಾರ ಭರವಸೆ ನೀಡಿದ್ದಾರೆ ಎಂದು ವಾದಿಸಿದ್ದರು.

ಸರ್ಕಾರಿ ವಕೀಲರು, ಪರೋಲ್ ಎನ್ನುವುದು ಕೈದಿಗಳ ಹಕ್ಕಲ್ಲ. ಆದರೆ, ಕೈದಿಯಾಗಿರುವ ಅರ್ಜಿದಾರ ಸನ್ನಡತೆ ತೋರಿದ್ದಾನೆ ಎಂದು ತಿಳಿಸಿದ್ದರು.

Attachment
PDF
Shivappa Bellad Vs Superintendent of Open Air Prison.pdf
Preview

Related Stories

No stories found.
Kannada Bar & Bench
kannada.barandbench.com