ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ- 2008ರ (ಎನ್‌ಐಎ ಕಾಯಿದೆ) ಸೆಕ್ಷನ್ 21(5) (ಮನವಿ) ಅಡಿಯಲ್ಲಿ ನೀಡಲಾದ ಕಾಲಮಿತಿ ಮೀರಿ ಮೇಲ್ಮನವಿ ಸಲ್ಲಿಸಲು ವಿಳಂಬ ಮಾಡುವುದನ್ನು ಮನ್ನಿಸಲು ಹೈಕೋರ್ಟ್‌ಗಳಿಗೆ ಅಧಿಕಾರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಹೇಳಿದೆ [ಭಾರತ ಒಕ್ಕೂಟ ಮತ್ತಿತರರು ಹಾಗೂ ಅಬ್ದುಲ್ ರಜಾಕ್ ಇನ್ನಿತರರ ನಡುವಣ ಪ್ರಕರಣ].
ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿಳಂಬವಾಗಿದ್ದು ಅದನ್ನು ಮನ್ನಿಸುವಂತೆ ಎನ್‌ಐಎ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರಿದ್ದ ಪೀಠ ಈ ತೀರ್ಪು ನೀಡಿದೆ.
"ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ- 2008 ರ ಸೆಕ್ಷನ್ 21(5) ರ ಅಡಿಯಲ್ಲಿ ಇರುವ ಕಾಲಮಿತಿ ಮೀರಿ ವಿಳಂಬ ಉಂಟುಮಾಡುವುದನ್ನು ಕ್ಷಮಿಸಲು ಉಚ್ಚ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ನಾವು ಭಾವಿಸುತ್ತೇವೆ. ಪರಿಣಾಮವಾಗಿ, ಕ್ರಿಮಿನಲ್ ಮೇಲ್ಮನವಿಗಳನ್ನು ಕಾಲಮಿತಿಯ ಆಧಾರದ ಮೇಲೆ ವಜಾಗೊಳಿಸಲಾಗಿದೆ," ನ್ಯಾಯಾಲಯ ಹೇಳಿದೆ.
ಬುಹಾರಿ @ ಕಿಚನ್ ಬುಹಾರಿ ಮತ್ತು ಸರ್ಕಾರ ನಡವುಣ ಪ್ರಕರಣದಲ್ಲಿ ತಾನು ನೀಡಿದ್ದ ಈ ಹಿಂದಿನ ತೀರ್ಪು ಉತ್ತಮವಾಗಿಲ್ಲ ಎಂದು ಪೀಠ ಹೇಳಿದೆ.
ಬುಹಾರಿ ಪ್ರಕರಣದಲ್ಲಿ , ವಿಳಂಬ ಮನ್ನಿಸುವ ಸೌಲಭ್ಯವನ್ನು ಎನ್ಐಎ ಪ್ರಕರಣಗಳಲ್ಲಿ ಆರೋಪಿಗಳಿಗೆ ಮಾತ್ರ ನೀಡಲಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಎಂಬುದು ಆರೋಪಿತ ವ್ಯಕ್ತಿಯಿಂದ ಆಗಿದ್ದರೆ, ಅದನ್ನು ಕ್ಷಮಿಸಬೇಕೆಂದು ನ್ಯಾಯಾಲಯ ಹೇಳಿದೆ. ಆದರೆ, ಮೇಲ್ಮನವಿಯನ್ನು ಪ್ರಾಸಿಕ್ಯೂಷನ್ ವಿಳಂಬವಾಗಿ ಸಲ್ಲಿಸಿದ್ದರೆ, ವಿಳಂಬದ ಆಧಾರದ ಮೇಲೆ ಅದನ್ನು ವಜಾಗೊಳಿಸಲಾಗುತ್ತಿತ್ತು.
ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡುವ ಮತ್ತು ಪ್ರಭುತ್ವದ ಹಿತಾಸಕ್ತಿಗಳಿಗೆ ಧಕ್ಕೆ ಉಂಟುಮಾಡುವ ತಾರತಮ್ಯದ ವಿಧಾನವಾಗಿದೆ ಎಂದು ಎನ್ಐಎ ವಕೀಲರು ವಾದಿಸಿದರು. ವಿಳಂಬವನ್ನು ಮನ್ನಿಸಬೇಕಾದರೆ, ಆರೋಪಿಗೆ ಮಾತ್ರವಲ್ಲದೆ ಪ್ರಾಸಿಕ್ಯೂಷನ್‌ಗೂ ಸೌಲಭ್ಯ ವಿಸ್ತರಿಸಬೇಕು ಎಂದು ಎನ್‌ಐಎ ಪ್ರತಿಪಾದಿಸಿತ್ತು. ಆದರೆ ಇದಕ್ಕೆ ಸಮ್ಮತಿಸದ ನ್ಯಾಯಾಲಯ ವಿಳಂಬದ ಕಾರಣಕ್ಕೆ ಎನ್ಐಎ ಮೇಲ್ಮನವಿಗಳನ್ನು ವಜಾಗೊಳಿಸಿತು.