

ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಅನುಮತಿ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಏಕಸದಸ್ಯ ಪೀಠ ನೀಡಿದ್ದ ನಿರ್ದೇಶನಕ್ಕೆ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ತಡೆ ಹಿಡಿದಿದೆ [ಸಿಬಿಎಫ್‌ಸಿ ಮತ್ತು ಕೆಎಸ್‌ವಿಎನ್ ಪ್ರೊಡಕ್ಷನ್ಸ್ ನಡುವಣ ಪ್ರಕರಣ].
ನಿರ್ಮಾಪಕರ ಮನವಿ ಪುರಸ್ಕರಿಸಿದ್ದ ನ್ಯಾ. ಪಿ ಟಿ ಆಶಾ ಅವರಿದ್ದ ಏಕಸದಸ್ಯ ಪೀಠ ಚಿತ್ರಕ್ಕೆ ಯು/ಎ 16 ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ಆದೇಶಿಸಿದ ಕೆಲವೇ ಗಂಟೆಗಳ ನಂತರ ಈ ತಡೆಯಾಜ್ಞೆ ನೀಡಲಾಗಿದೆ.
ಸಿಬಿಎಫ್‌ಸಿ ಸಲ್ಲಿಸಿದ್ದ ತುರ್ತು ಮೇಲ್ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಅರುಲ್ ಮುರುಗನ್ ಅವರನ್ನೊಳಗೊಂಡ ಪೀಠ, ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂಬ ಕಾರಣ ಆಧರಿಸಿ ತಡೆ ನೀಡಿದೆ.
ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಚಿತ್ರಕ್ಕೆ ಯು/ಎ16 ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ನ್ಯಾ. ಪಿ ಟಿ ಆಶಾ ಇಂದು ಬೆಳಿಗ್ಗೆ ಆದೇಶಿಸಿದ್ದರು. ಚಿತ್ರ ನಿರ್ಮಾಪಕರು ಈಗಾಗಲೇ ಸಿಬಿಎಫ್‌ಸಿ ಸೂಚಿಸಿದಂತೆ ಕೆಲ ದೃಶ್ಯಗಳನ್ನು ತೆಗೆದು ಹಾಕಿರುವುದರಿಂದ ನ್ಯಾಯಾಲಯ ಸಿಬಿಎಫ್‌ಸಿಗೆ ಯು/ಎ 16 ಪ್ರಮಾಣಪತ್ರವನ್ನು ತಕ್ಷಣವೇ ನೀಡುವಂತೆ ಅವರು ಸೂಚಿಸಿದ್ದರು.
ಚಿತ್ರ ಇಂದು (ಶುಕ್ರವಾರ ಜನವರಿ 9) ತೆರೆ ಕಾಣಬೇಕಿತ್ತು.ಆದರೆ ಸಿಬಿಎಫ್‌ಸಿ ಚಿತ್ರ ಬಿಡುಗಡೆಗೆ ಅಂತಿಮ ಪ್ರಮಾಣಪತ್ರ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ನಿರ್ಮಾಪಕರು ಅಂತಿಮ ಸೆನ್ಸಾರ್ ಪ್ರಮಾಣಪತ್ರ ನೀಡುವಲ್ಲಿ ಸಿಬಿಎಫ್‌ಸಿ ವಿಳಂಬ ಮಾಡಿದೆ ಎಂದು ದೂರಿದ್ದರು. ವಿಜಯ್ ಅವರು ತಾವು ಈಚೆಗೆ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಹಿನ್ನೆಲೆಯಲ್ಲಿ 'ಜನ ನಾಯಗನ್' ಅವರ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ.