
ಬೆಂಗಳೂರು ಕೇಂದ್ರ ಮತ್ತಿತರ ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಪಟ್ಟಿ ತಿರುಚಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕುರಿತಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಮತದಾರರ ಪಟ್ಟಿಯ ತಯಾರಿಕೆ, ನಿರ್ವಹಣೆ ಮತ್ತು ಪ್ರಕಟಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮಗ್ರತೆಗಾಗಿ ನಿಯಮ ರೂಪಿಸಲು ನಿರ್ದೇಶನ ನೀಡುವಂತೆ ಮತ್ತು ನಕಲಿ ಅಥವಾ ಕಾಲ್ಪನಿಕ ಮತದಾರರಿಗೆ ಕಡಿವಾಣ ಹಾಕುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಮಾರ್ಗಸೂಚಿಗಳನ್ನು ನೀಡುವಂತೆ ಅರ್ಜಿ ಕೋರಿದೆ.
ಮತದಾರರ ಪಟ್ಟಿಯನ್ನು ಸುಲಭವಾಗಿ ಪರಿಶೀಲಿಸಲು ಅನುವಾಗುವಂತೆ ಕಂಪ್ಯೂಟರ್ ಗ್ರಹಿಸಬಲ್ಲ ಮತ್ತು ಒಸಿಆರ್- ದೂರು ಸ್ವರೂಪಗಳಲ್ಲಿ ಪ್ರಕಟಿಸಲು ಇಸಿಐಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 7ರಂದು ರಾಹುಲ್ ಗಾಂಧಿ ಅವರು ನಡೆಸಿದ್ದ ಪತ್ರಿಕಾಗೋಷ್ಠಿ ಆಧರಿಸಿ ವಕೀಲ ರೋಹಿತ್ ಪಾಂಡೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ಪ್ರಮುಖಾಂಶಗಳು
ಘಟನೆ ನಡೆದಿರುವುದು ನಿಜವೇ ಆಗಿದ್ದರೆ, ಸಂವಿಧಾನದ 325 ಮತ್ತು 326 ನೇ ವಿಧಿಗಳ ಅಡಿಯಲ್ಲಿ ಪ್ರತಿಪಾದಿಸಲಾದ ಒಬ್ಬರಿಂದ ಒಂದೇ ಮತ ಎಂಬ ಮೂಲತತ್ವಕ್ಕೆ ಧಕ್ಕೆಯಾಗುತ್ತದೆ.
ಸಾರ್ವಜನಿಕವಾಗಿ ಲಭ್ಯವಿರುವ ಸರ್ಕಾರಿ ದತ್ತಾಂಶಗಳ ಮೂಲಕ ಈ ವರದಿಗಳ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಿದ ನಂತರ, ಆರೋಪಗಳು ನ್ಯಾಯಸಮ್ಮತ ರೀತಿಯಲ್ಲಿ ಮತಗಳನ್ನು ಪಡೆಯುವುದನ್ನು ದುರ್ಬಲಗೊಳಿಸುವ ವ್ಯವಸ್ಥಿತ ಪ್ರಯತ್ನವನ್ನು ಹೇಳುತ್ತವೆ. ಹೀಗಾಗಿ ಸುಪ್ರೀಂ ಕೋರ್ಟ್ ತುರ್ತು ಹಸ್ತಕ್ಷೇಪ ಮಾಡಬೇಕಿದೆ.
ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು.
ಕರ್ನಾಟಕದಲ್ಲಿ ಒಂದೇ ರೀತಿಯ ವಿಳಾಸ ಮತ್ತು ತಂದೆಯ ಹೆಸರಿನ ಸುಮಾರು 40,000–50,000 ಮತದಾರರು ಮತ್ತು ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಒಂದೇ ವಿಳಾಸದಲ್ಲಿ ನೋಂದಾಯಿಸಲಾದ ಸುಮಾರು 80 ಮತದಾರರು ಸೇರಿದಂತೆ ಅಕ್ರಮಗಳು ನಡೆದಿವೆ ಎನ್ನಲಾಗಿದ್ದು ಅದರ ವಿವರಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ.
ಪ್ರಕರಣ ಪ್ರಜಾಪ್ರಭುತ್ವ ಪ್ರಕ್ರಿಯೆಯ ಬುನಾದಿಗೆ ಸಂಬಂಧಿಸಿದ್ದಾಗಿದೆ.
ಸ್ವತಂತ್ರ ತನಿಖೆ ನಡೆಯುವವರೆಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವುದನ್ನು ಸ್ಥಗಿತಗೊಳಿಸುವಂತೆ ಇಸಿಐಗೆ ಸೂಚನೆ ನೀಡಬೇಕು.
ಮತದಾರರ ಪಟ್ಟಿಯ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪ್ರಾಮಾಣಿಕತೆ ಕಾಯ್ದುಕೊಳ್ಳಲು ಮಾರ್ಗಸೂಚಿ ರೂಪಿಸಬೇಕು.