

ಹುಡುಗಿಯರೊಂದಿಗೆ ದುರ್ವರ್ತನೆ ತೋರುವುದಿಲ್ಲ ಎಂಬ ಫಲಕವನ್ನು ಹಿಡಿದು ವಿಶ್ವವಿದ್ಯಾಲಯದ ಗೇಟ್ ಬಳಿ ಪ್ರತಿದಿನ 30 ನಿಮಿಷಗಳ ಕಾಲ ಒಂದು ತಿಂಗಳು ನಿಲ್ಲುವಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ನೀಡಿದ್ದ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ [ಹರ್ಷ್ ಅವಾನಾ ಮತ್ತು ಯುಜಿಸಿ ಅಧ್ಯಕ್ಷರು ಬಹದೂರ್‌ಶಾ ಜಾಫರ್ ರಸ್ತೆ ಇನ್ನಿತರರ ನಡುವಣ ಪ್ರಕರಣ].
ಇಂತಹ ಷರತ್ತು ನ್ಯಾಯಸಮ್ಮತವಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಅರುಣ್ ಭನ್ಸಾಲಿ ಮತ್ತು ನ್ಯಾಯಮೂರ್ತಿ ಕ್ಷಿತಿಜ್ ಶೈಲೆಂದ್ರ ಅವರನ್ನು ಒಳಗೊಂಡ ಪೀಠ ಅದನ್ನು ರದ್ದುಗೊಳಿಸಲು ಆದೇಶಿಸಿದ್ದು ಉಳಿದ ಶಿಸ್ತು ನಿರ್ದೇಶನಗಳು ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿತು.
ಏಕಸದಸ್ಯ ಪೀಠ ನೀಡಿದ ನಿರ್ದೇಶನ ಕೇವಲ ಅವಮಾನಕಾರಿಯಷ್ಟೇ ಅಲ್ಲ, ಅದು ಅಪೀಲುದಾರನ ವ್ಯಕ್ತಿತ್ವದ ಮೇಲೆ ಶಾಶ್ವತವಾದ ಕಲೆ ಉಳಿಸುವಂತಹದ್ದು. ಇಂತಹ ಪ್ರಕರಣಗಳಲ್ಲಿ ಈ ಬಗೆಯ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂಬುದಾಗಿ ಅದು ತಿಳಿಸಿದೆ.
ವಿಶ್ವವಿದ್ಯಾಲಯ ತನ್ನನ್ನು ಕಾಲೇಜಿನಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ವಿದ್ಯಾರ್ಥಿ ಅರ್ಜಿ ಸಲ್ಲಿಸಿದ್ದ. ವಿಶ್ವವಿದ್ಯಾಲಯದ ವಜಾ ಆದೇಶ ರದ್ದುಗೊಳಿಸಿದ್ದ ಏಕಸದಸ್ಯ ಪೀಠ ಅವನ ತಂದೆ ಬಡ ರೈತನಾಗಿದ್ದು, ಮಗನ ಶಿಕ್ಷಣಕ್ಕಾಗಿ ಬಹಳಷ್ಟು ಶ್ರಮ ಪಟ್ಟಿದ್ದಾರೆ ಎಂದಿತ್ತು.
ಆದರೆ ಇದೇ ವೇಳೆ ಅದು ವಿದ್ಯಾರ್ಥಿಗೆ ಹಲವು ಷರತ್ತುಗಳನ್ನು ವಿಧಿಸಿತ್ತು. ತರಗತಿಗಳಿಗೆ ವಿದ್ಯಾರ್ಥಿಯ ಶೇ 95ರಷ್ಟು ಹಾಜರಾತಿ ಇರಬೇಕು. ಗೈರಾಗುವ ಮುನ್ನ ರಜೆ ಕೋರಿ ಅರ್ಜಿ ಸಲ್ಲಿಸಬೇಕು. ತರಗತಿ ನಡೆಯುವಾಗ ವಿವಿ ಆವರಣ ತೊರೆಯಬಾರದು. 72 ಗಂಟೆಗಳ ಒಳಗೆ ಘಟನೆ ಸಂಬಂಧ ಲಿಖಿತ ಕ್ಷಮಾಪಣಾ ಪತ್ರ ಸಲ್ಲಿಸಬೇಕು ಎಂಬ ಷರತ್ತುಗಳ ಜೊತೆಗೆ ವಿವಾದಾತ್ಮಕ ʼಫಲಕ ಹಿಡಿಯುವʼ ಷರತ್ತನ್ನೂ ವಿಧಿಸಲಾಗಿತ್ತು.
ನಂತರ ವಿಭಾಗೀಯ ಪೀಠದ ಮೊರೆ ಹೋಗಿದ್ದ ವಿದ್ಯಾರ್ಥಿ ಫಲಕ ಹಿಡಿಯುವ ಶಿಕ್ಷೆ ಅಪಮಾನಕಾರಿಯಾಗಿದ್ದು ತನ್ನ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದ.
ವಿಶ್ವವಿದ್ಯಾಲಯ ಏಕಸದಸ್ಯ ನ್ಯಾಯಮೂರ್ತಿಯ ಆದೇಶವನ್ನು ಸಮರ್ಥಿಸಿಕೊಂಡಿತ್ತು. ಮೂಲ ಅರ್ಜಿಯನ್ನೇ ಪರಿಗಣಿಸಬಾರಿತ್ತು ಹಾಗೂ ವಿಧಿಸಲಾದ ಷರತ್ತುಗಳು ತಿದ್ದುಪಡಿ ಹಾಗೂ ಮಾನವೀಯ ಉದ್ದೇಶದಿಂದಲೇ ಇದ್ದವು ಎಂದು ವಾದಿಸಿತು.
ವಿದ್ಯಾರ್ಥಿಯ ವರ್ತನೆ ಹಾಗೂ ಹಿಂದಿನ ಹಾಜರಾತಿ ದಾಖಲೆಯನ್ನು ಗಮನಿಸಿದರೆ, ಹಾಜರಾತಿ, ಲಿಖಿತ ಕ್ಷಮಾಪಣೆ ಮತ್ತು ಪೊಲೀಸ್ ನಿಯೋಜನೆಗೆ ಸಂಬಂಧಿಸಿದ ನಿರ್ದೇಶನಗಳು ನ್ಯಾಯಸಮ್ಮತವಾಗಿವೆ ಎಂದು ಫೆಬ್ರವರಿ 4ರಂದು ನೀಡಿದ ತೀರ್ಪಿನಲ್ಲಿ ವಿಭಾಗೀಯ ಪೀಠ ತಿಳಿಸಿದೆ.
ಆದರೆ, ಸಾರ್ವಜನಿಕವಾಗಿ ಫಲಕ ಹಿಡಿದು ಪ್ರದರ್ಶನ ಮಾಡುವಂತೆ ವಿದ್ಯಾರ್ಥಿಯನ್ನು ಬಲವಂತಗೊಳಿಸುವುದು ಯಾವುದೇ ಪರಿಸ್ಥಿತಿಯಲ್ಲೂ ಸ್ವೀಕಾರಾರ್ಹವಲ್ಲ ಹಾಗೂ ಅದನ್ನು ಅನುಮತಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಆದ್ದರಿಂದ, ಫಲಕ ಹಿಡಿಯುವ ಷರತ್ತನ್ನು ನ್ಯಾಯಾಲಯ ರದ್ದುಪಡಿಸಿತು. ಕೇವಲ ಆ ಷರತ್ತನ್ನು ಪಾಲಿಸಲು ನಿರಾಕರಿಸಿದ್ದ ಕಾರಣಕ್ಕಷ್ಟೇ ವಿದ್ಯಾರ್ಥಿಗೆ ಮತ್ತೆ ಕಾಲೇಜಿನಿಂದ ವಜಾಗೊಳಿಸುವ ಆದೇಶ ನೀಡಿದ್ದರೆ, ಅವನಿಗೆ ಲಿಖಿತ ಕ್ಷಮಾಪಣೆ ಸಲ್ಲಿಸಲು ಹೊಸ ಅವಕಾಶ ನೀಡಬೇಕು ಎಂದು ನಿರ್ದೇಶಿಸಿತು.
ಅದನ್ನು ಆತ ಪಾಲಿಸಿದ ಬಳಿಕ, ವಜಾ ಆದೇಶ ರದ್ದುಪಡಿಸಬೇಕು. ಜೊತೆಗ ನ್ಯಾಯಾಲಯ ವಿಧಿಸಿದ ಹಾಜರಾತಿ ಸಂಬಂಧಿತ ನಿಯಮಗಳನ್ನು ವಿದ್ಯಾರ್ಥಿ ಅನುಸರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
[ಆದೇಶದ ಪ್ರತಿ]