ಪತ್ನಿಯನ್ನು ಕೆಲಸ ಬಿಡುವಂತೆ ಪತಿ ಒತ್ತಾಯಿಸುವುದು ಕ್ರೌರ್ಯ: ಮಧ್ಯಪ್ರದೇಶ ಹೈಕೋರ್ಟ್

ತಮ್ಮ ವೈಯಕ್ತಿಕ ಆದ್ಯತೆಗಳ ಆಧಾರದಲ್ಲಿ ತಮ್ಮ ಸಂಗಾತಿ ಉದ್ಯೋಗ ಪಡೆಯಬೇಕು ಇಲ್ಲವೇ ತ್ಯಜಿಸಬೇಕು ಎಂದು ಒತ್ತಾಯಿಸುವ ಹಕ್ಕು ಪತಿಗಾಗಲೀ ಇಲ್ಲವೇ ಪತ್ನಿಗಾಗಲೀ ಇರುವುದಿಲ್ಲ ಎಂದಿದೆ ನ್ಯಾಯಾಲಯ.
Madhya Pradesh High Court
Madhya Pradesh High Court
Published on

ಕೆಲಸ ತ್ಯಜಿಸಿ ತನ್ನ ಆದ್ಯತೆ ಮತ್ತು ಜೀವನಶೈಲಿಗೆ ಅನುಗುಣವಾಗಿ ಬದುಕಬೇಕು ಎಂದು ಹೆಂಡತಿಯನ್ನು ಒತ್ತಾಯಿಸುವುದು (ವಿಚ್ಛೇದನ ನೀಡಲು ಆಧಾರವಾಗುವಂತಹ) ಕ್ರೌರ್ಯವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ತಮ್ಮ ವೈಯಕ್ತಿಕ ಆದ್ಯತೆಗಳ ಆಧಾರದಲ್ಲಿ ತಮ್ಮ ಸಂಗಾತಿ ಉದ್ಯೋಗ ಪಡೆಯಬೇಕು ಇಲ್ಲವೇ ತ್ಯಜಿಸಬೇಕು ಎಂದು ಒತ್ತಾಯಿಸುವ ಹಕ್ಕು ಪತಿಗಾಗಲೀ ಇಲ್ಲವೇ ಪತ್ನಿಗಾಗಲೀ ಇರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ಸುಶ್ರೂರ್ ಧರ್ಮಾಧಿಕಾರಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಒಟ್ಟಿಗೆ ವಾಸಿಸುವ ನಿರ್ಧಾರ ಸಂಗಾತಿಗಳ ನಡುವಿನ ಪರಸ್ಪರ ಆಯ್ಕೆಯ ವಿಷಯವಾಗಿದೆ ಎಂದು ಪೀಠ ಹೇಳಿದೆ. ತನ್ನ ಆಯ್ಕೆಯಂತೆ ಯಾವುದೇ ಉದ್ಯೋಗ ಮಾಡಬೇಕು ಇಲ್ಲವೇ ಮಾಡಬಾರದು ಎಂದು ಪತಿ ಅಥವಾ ಪತ್ನಿ ಒತ್ತಾಯಿಸುವಂತಿಲ್ಲ. ಪ್ರಸ್ತುತ ಪ್ರಕರಣದಲ್ಲಿ ತನಗೆ ಕೆಲಸ ಸಿಗುವವರೆಗೂ ಸರ್ಕಾರಿ ಕೆಲಸ ತೊರೆಯುವಂತೆ ಪತ್ನಿಗೆ ಪತಿ ಒತ್ತಾಯಿಸಿದ್ದಾನೆ. ಈ ರೀತಿ ಹೆಂಡತಿ ಕೆಲಸ ಬಿಟ್ಟು ತನ್ನ ಇಚ್ಚೆ ಮತ್ತು ಶೈಲಿಯಂತೆ ಬದುಕಲು ಒತ್ತಾಯಿಸುವುದು ಕ್ರೌರ್ಯಕ್ಕೆ ಸಮವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.  

ಗಂಡನಾಗಲಿ, ಹೆಂಡತಿಯಾಗಲಿ ತನ್ನ ಸಂಗಾತಿಗೆ ಇಂತಹ ಕೆಲಸ ಮಾಡಿ, ಇಲ್ಲವೇ ಮಾಡಬೇಡಿ ಎಂದು ಒತ್ತಾಯಿಸುವಂತಿಲ್ಲ.
ಮಧ್ಯಪ್ರದೇಶ ಹೈಕೋರ್ಟ್

ಪೊಲೀಸ್ ದೂರು ಇಲ್ಲದಿರುವುದು, ದೃಢೀಕರಿಸುವಂತಹ ಸಾಕ್ಷಿಗಳ ಕೊರತೆ ಹಾಗೂ ಕ್ರೌರ್ಯದ ಆರೋಪ ಸಾಬೀತುಪಡಿಸುವಂತಹ ಸಾಕ್ಷ್ಯಾಧಾರಗಳು ಇಲ್ಲದಿರುವ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಇಂದೋರ್‌ನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪತಿ ತಾನು ಮಾಡುತ್ತಿರುವ ಕೆಲಸ ತೊರೆದು ತನ್ನೊಂದಿಗೆ ಇರುವಂತೆ ಒತ್ತಾಯಿಸಿದ್ದರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ನಿರ್ದಿಷ್ಟವಾಗಿ ಪತ್ನಿ ಹೇಳಿರುವ ಅಂಶ ಪರಿಗಣಿಸಲು ಕೌಟುಂಬಿಕ ನ್ಯಾಯಾಲಯ ವಿಫಲವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಹೊಂದಾಣಿಕೆಯ ಸಮಸ್ಯೆ ಇರುವುದರಿಂದ  ಪತ್ನಿ ತನ್ನ ಪತಿಯಿಂದ ವಿಚ್ಛೇದನ ಕೋರಿ ಈ ಹಿಂದೆ ನೋಟಿಸ್ ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯ ಸ್ಪಷ್ಟ ಉದ್ದೇಶಗಳ ಹೊರತಾಗಿಯೂ ಪತಿ ವಿಚ್ಛೇದನಕ್ಕೆ ಒಪ್ಪದಿರುವುದೇ ಕ್ರೌರ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ವಿವಾಹ ವಿಸರ್ಜಿಸಿ, ಮಹಿಳೆಯ ವಿಚ್ಛೇದನಕ್ಕೆ ನವೆಂಬರ್13ರಂದು ಅನುಮತಿ ನೀಡಿತು. ಆ ಮೂಲಕ ಕೌಟುಂಬಿಕ ನ್ಯಾಯಾಲಯ 2022ರಲ್ಲಿ ನೀಡಿದ್ದ ಆದೇಶ ರದ್ದುಗೊಳಿಸಿತು.

Kannada Bar & Bench
kannada.barandbench.com