ಮಾಂಸದ ಅಡುಗೆ ಕೆಡಿಸಿದ ಹೆಂಡತಿಯ ಕೊಲೆ: ಪತಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಮೊಟಕುಗೊಳಿಸಿದ ಬಾಂಬೆ ಹೈಕೋರ್ಟ್

ಪತಿಯು ಎಸಗಿರುವ ಕೊಲೆಯನ್ನು ಕೊಲೆಯಲ್ಲದ ದಂಡನಾತ್ಮಕ ಹತ್ಯೆಯಾಗಿ ಪರಿವರ್ತಿಸಿದ ನ್ಯಾಯಾಲಯವು ಘಟನೆಯು ಪೂರ್ವ ನಿಯೋಜಿತವಲ್ಲದೆ, ತಕ್ಷಣದ ಪ್ರತಿಕ್ರಿಯೆಯಾಗಿ ನಡೆದಿದೆ ಎಂದಿತು.
Bombay High Court Nagpur Bench
Bombay High Court Nagpur Bench

ಮಾಂಸವನ್ನು ಸರಿಯಾಗಿ ಬೇಯಿಸಿಲ್ಲ ಎಂಬ ಕಾರಣಕ್ಕೆ ತನ್ನ ಹೆಂಡತಿಯನ್ನು ಕೊಂದ ಅಪರಾಧಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳ ಸಜೆಯಾಗಿ ಬಾಂಬೆ ಹೈಕೋರ್ಟ್‌ ಮೊಟಕುಗೊಳಿಸಿದೆ [ಸುರೇಶ್ ಮಧುಕರ್ ಶೆಂದ್ರೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ರೋಹಿತ್ ದೇವ್ ಮತ್ತು ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ವಿಭಾಗೀಯ ಪೀಠವು, “ಮೇಲ್ಮನವಿದಾರ ಪತಿಯು ಕೋಲಿನಂತಹ ಮಾರಕ ಆಯುಧವನ್ನು ಬಳಸಿದ್ದಾನೆ ಮತ್ತು ತನ್ನಿಂದ ಉಂಟಾದ ಗಾಯಗಳು ಸಾವಿಗೆ ಕಾರಣವಾಗಬಹುದು ಎಂಬ ಅರಿವು ಆತನಿಗಿತ್ತು. ಆದರೆ, ಆತ ಕ್ರೂರವಾಗಿಯಾಗಲಿ, ಅಥವಾ ವಿಚಿತ್ರವಾಗಿಯಾಗಲಿ ವರ್ತಿಸಲಿಲ್ಲ” ಎಂದಿದೆ.

“ಆರೋಪಿಯು ಹಲ್ಲೆಗೆ ತಯಾರಿ ನಡೆಸಿರಲಿಲ್ಲ ಎಂಬುದನ್ನು ಗಮನಿಸಬೇಕು. ಮೃತಳು  ಊಟ ತಯಾರಿಸದೇ ಇರುವುದನ್ನು ಕಂಡು ಆಕೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಪ್ರಸ್ತುತ ಪ್ರಕರಣದಲ್ಲಿ ಬಳಸಿರುವ ಆಯುಧ ಕೋಲಿನಂತಹ ಮಾರಕ ಆಯುಧವಾಗಿದ್ದು, ಮೃತಳು ಸಾಯುವ ರೀತಿಯ ಗಾಯಗಳಾಗಬಹುದೆಂಬ ಅರಿವು ಆತನಿಗಿತ್ತು. ಆರೋಪಿಗೆ ಗಾಯಗೊಳಿಸುವ ಉದ್ದೇಶವಿತ್ತು. ಆದರೆ, ಆತ ಸನ್ನಿವೇಶದ ದುರುಪಯೋಗ ಪಡೆದಿಲ್ಲ ಅಥವಾ ಕ್ರೂರವಾಗಿ, ವಿಚಿತ್ರವಾಗಿ ವರ್ತಿಸಿಲ್ಲ," ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಸೆಕ್ಷನ್‌ 300ರ 4ನೇ ವಿನಾಯತಿಯಡಿ ಇದು ಬರುತ್ತದೆ ಎಂದು ಹೇಳಿದ ಪೀಠವು, ಇದು ಕೊಲೆಯನ್ನು ಕೊಲೆಯಲ್ಲದ ದಂಡನಾತ್ಮಕ ಹತ್ಯೆಯಾಗಿ ಪರಿವರ್ತಿಸುತ್ತದೆ. ಘಟನೆಯು ಪೂರ್ವ ನಿಯೋಜಿತವಲ್ಲದೆ, ತಕ್ಷಣದ ಪ್ರತಿಕ್ರಿಯೆಯಾಗಿ ನಡೆದಿದೆ ಎಂದು ವಿವರಿಸಿತು.

Also Read
ಅಪರಾಧಿಯು ಅತ್ಯಾಚಾರ ಸಂತ್ರಸ್ತೆಯ ಜೀವಂತ ಬಿಟ್ಟು ದಯೆ ತೋರಿದ್ದಾನೆ ಎಂದ ಮಧ್ಯಪ್ರದೇಶ ಹೈಕೋರ್ಟ್‌; ಆಜೀವ ಶಿಕ್ಷೆ ಮೊಟಕು

“ಅಂಕಿ ಅಂಶಗಳ ಪ್ರಕಾರ, ಕತ್ತಲಾದ ಬಳಿಕ ಕುಟುಂಬದ ತೆಕ್ಕೆಯಲ್ಲಿರುವುದಕ್ಕಿಂತಲೂ ಅಪರಿಚಿತರೊಂದಿಗೆ ಬೀದಿಗಳಲ್ಲಿರುವುದೇ ಸುರಕ್ಷಿತ, ಏಕೆಂದರೆ ಅಲ್ಲಿ (ಕುಟುಂಬದಲ್ಲಿ) ಅಪಘಾತ, ಕೊಲೆ ಮತ್ತು ಹಿಂಸಾಚಾರ ಸಂಭವಿಸುವ ಸಾಧ್ಯತೆ ಇರುತ್ತದೆ." ಎಂದು ʼವಾಯಲೆನ್ಸ್‌ ಇನ್‌ ಫ್ಯಾಮಿಲಿʼ ಕೃತಿಯಲ್ಲಿ ಪ್ರಖ್ಯಾತ ಮನೋವೈದ್ಯ ಸಿಡ್ನಿ ಬ್ರಾನ್‌ಡನ್‌ ಅವರು ಬರೆದಿರುವ ವಿಚಾರವನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಪ್ರಸ್ತುತ ಪ್ರಕರಣ ಅಂತಹ ಹಿಂಸಾಚಾರಕ್ಕೆ ಒಂದು ಉದಾಹರಣೆಯಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಹೆಂಡತಿ ಮಾಂಸದ ಅಡುಗೆಯನ್ನು ಸರಿಯಾಗಿ ತಯಾರಿಸಿಲ್ಲ ಎಂದು ಮದ್ಯವ್ಯಸನಿಯಾಗಿದ್ದ ಮೇಲ್ಮನವಿದಾರ ಸೆಪ್ಟೆಂಬರ್ 4, 2015 ರಂದು ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆ ನಡೆದಿದ್ದನ್ನು ನೆರೆ ಹೊರೆಯವರು ನೋಡಿದ್ದರು. ಮರುದಿನ ಬೆಳಿಗ್ಗೆ ಆತನ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ನಂತರ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಸೆಷನ್ಸ್‌ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಹಠಾತ್‌ ಜಗಳ ನಡೆದಿರುವುದು ಸಾಕ್ಷ್ಯಗಳಿಂದ ಸಾಬೀತಾಗಿದೆ. ಇದು ಮೊದಲೇ ಬಯಸಿ ನಡೆಸಿದ ಕೃತ್ಯವಲ್ಲ. ಆರೋಪಿ ಕ್ರೂರವಾಗಿ ವರ್ತಿಸಿರುವ ಬಗ್ಗೆ ಸಾಕ್ಷ್ಯಗಳಿಲ್ಲ ಎಂಬ ಕಾರಣ ನೀಡಿದ ಪೀಠ ಆತನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿತು.

Kannada Bar & Bench
kannada.barandbench.com