ಯಾರನ್ನಾದರೂ ನೋಯಿಸಿದ್ದರೆ ಕ್ಷಮಿಸಿ: ಕೊನೆಯ ಕರ್ತವ್ಯದ ದಿನ ಸಿಜೆಐ ಡಿ ವೈ ಚಂದ್ರಚೂಡ್ ಭಾವುಕ ನುಡಿ

ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿರುವ ಡಿ ವೈ ಚಂದ್ರಚೂಡ್ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದು ಮೇ 13, 2016ರಂದು. ಸುದೀರ್ಘ ಕಾಲ ಸಿಜೆಐ ಆಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅವರ ದಿವಂಗತ ತಂದೆ ವೈ ವಿ ಚಂದ್ರಚೂಡ್ ಅವರದ್ದಾಗಿದೆ.
Supreme Court
Supreme Court
Published on

ತಮ್ಮ ಕೊನೆಯ ಕರ್ತವ್ಯದ ದಿನವಾದ ಶುಕ್ರವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಆಸೀನರಾಗಿದ್ದ ಔಪಚಾರಿಕ ಪೀಠ ಭಾವಪೂರ್ಣ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ನಿಯೋಜಿತ ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರೊಂದಿಗೆ ಪೀಠ ಹಂಚಿಕೊಂಡಿದ್ದ ಚಂದ್ರಚೂಡ್ ಅವರು ಕಂಬನಿ ಮಿಡಿದು ಸುಪ್ರೀಂ ಕೋರ್ಟ್‌ನಿಂದ ನಿರ್ಗಮಿಸಿದರು. "ನಿಮ್ಮಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿ. ಹಾಗೆ ಹೇಳುವ ಅಥವಾ ನೋವುಂಟು ಮಾಡುವ ಉದ್ದೇಶ ನನಗೆ ಇರಲಿಲ್ಲ” ಎಂದು ಅವರು ನುಡಿದರು.

ಅಂತೆಯೇ ಔಪಚಾರಿಕ ಪೀಠದಲ್ಲಿ ವಿದಾಯದ ಮಾತುಗಳು ಅನುರಣಿಸಿದವು. ತಿಳಿ ಹಾಸ್ಯದೊಂದಿಗೆ ಮಾತು ಆರಂಭಿಸಿದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಸಮ್ಮೇಳನವೊಂದನ್ನು ಪ್ರಸ್ತಾಪಿಸಿದರು.

“ಅಲ್ಲಿ ಕಾರ್ಯಕ್ರಮದ ನಂತರ ನೃತ್ಯ ಮಾಡುತ್ತಾರೆ. ನಿಮ್ಮ ನಿವೃತ್ತಿ ನಂತರ ನಾನು ಇಲ್ಲಿ ಎಲ್ಲರನ್ನೂ ನರ್ತಿಸಲು ಹೇಳಿದರೆ ಹೆಚ್ಚಿನವರು ನನ್ನ ಪರವಾಗಿ ಮತ ಹಾಕುತ್ತಾರೆ ಎಂಬ ಖಾತ್ರಿ ಇದೆ!” ಎಂದು ಚಟಾಕಿ ಹಾರಿಸಿದರು.

Also Read
ನನ್ನ ಅಧಿಕಾರಾವಧಿಯನ್ನು ಚರಿತ್ರೆ ಹೇಗೆ ನಿರ್ಣಯಿಸುತ್ತದೆ ಎಂಬ ಆತಂಕವಿದೆ: ನಿವೃತ್ತಿ ಹೊಸ್ತಿಲಲ್ಲಿ ಸಿಜೆಐ ಚಂದ್ರಚೂಡ್

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಚಂದ್ರಚೂಡ್ ಅವರ ನಿಷ್ಪಕ್ಷಪಾತ ಬದ್ಧತೆಯನ್ನು ಶ್ಲಾಘಿಸಿದರು, ಸರ್ಕಾರವು ಅವರ ಮುಂದೆ "ಕೆಲವು ಬಾರಿ ಗೆದ್ದಿದೆ, ಹಲವು ಸೋತಿದೆಯಾದರೂ, ಅವುಗಳಿಗೆ ನ್ಯಾಯ ದೊರೆತಿದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.

ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಸಿಜೆಐ ಡಿ ವೈ ಚಂದ್ರಚೂಡ್ ಅವರ ತಂದೆ, ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ ವಿ ಚಂದ್ರಚೂಡ್ ಅವರನ್ನು ನೆನೆದರು.  ಚಂದ್ರಚೂಡ್ ಅವರನ್ನು "ಅಸಾಧಾರಣ ತಂದೆಯ ಅಸಾಧಾರಣ ಪುತ್ರ " ಎಂದು ಕೊಂಡಾಡಿದರು. ಸಿಜೆಐ ಚಂದ್ರಚೂಡ್ ಅವರ ನಡೆ ದೇಶದೆಲ್ಲೆಡೆಯ ಸಮುದಾಯಗಳಿಗೆ ಘನತೆ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.

“ನ್ಯಾಯಾಲಯ ಗೊಂದಲದಲ್ಲಿದ್ದಾಗ ನಿಮ್ಮ ತಂದೆ ಅದರ ಚುಕ್ಕಾಣಿ ಹಿಡಿದಿದ್ದರು. ಪ್ರಕರಣಗಳು ಗೊಂದಲಮಯವಾಗಿದ್ದಾಗ ನೀವು ಅಧಿಕಾರದಲ್ಲಿದ್ದಿರಿ. ನಿಮ್ಮಂತೆ ಆ ಪೀಠವನ್ನು ಮತ್ತೆ ಅಲಂಕರಿಸುವವರು ಯಾರೂ ಇರುವುದಿಲ್ಲ ಎಂದರು.

Also Read
ಸಿಜೆಐ ನಿವಾಸದಲ್ಲಿ ಪ್ರಧಾನಿ ಮೋದಿ ಗಣೇಶ ಪೂಜೆ: ನ್ಯಾಯಾಂಗಕ್ಕೆ ಧಕ್ಕೆ ಎಂದ ಹಿರಿಯ ವಕೀಲ ಸಿಬಲ್

 ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಿಜೆಐ ಚಂದ್ರಚೂಡ್ ಅವರು ಐಪ್ಯಾಡ್‌ ಬಳಕೆಯನ್ನು ಉತ್ತೇಜಿಸುವುದರಿಂದ ಹಿಡಿದು ನ್ಯಾಯಾಲಯದ ಮೂಲಸೌಕರ್ಯವನ್ನು ಆಧುನೀಕರಿಸುವವರೆಗೆ ತಾಂತ್ರಿಕ ಪ್ರಗತಿಗೆ ನಾಂದಿ ಹಾಡಿದ್ದಾರೆ ಎಂದು ಶ್ಲಾಘಿಸಿದರು. 

ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎನ್ ವೆಂಕಟರಾಮನ್ ಅವರು ಸಿಜೆಐ ಚಂದ್ರಚೂಡ್ ಅವರ ಮನೋಧರ್ಮ ಕುರಿತು ಶ್ಲಾಘಿಸಿದರು. 

ಕಳೆದ ತಿಂಗಳು ಹಿಮಾಚಲ ಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಹಿರಿಯ ವಕೀಲ ರಾಜೀವ್ ಶಕ್ಧರ್ ಅವರು ಸಿಜೆಐ ಚಂದ್ರಚೂಡ್ ಅವರ ಕಾರ್ಯ ನೀತಿಯನ್ನು ಶ್ಲಾಘಿಸಿದರು.

 ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು  ಮಾತನಾಡಿ ದಾವೆದಾರರಿಗೆ ಗೆಲ್ಲಲು ಅವಕಾಶ ಕಡಿಮೆ ಇರುವಂತಹ ಪ್ರಕರಣಗಳನ್ನು ಸಿಜೆಐ ಚಂದ್ರಚೂಡ್ ಅವರು ಬೆಂಬಲಿಸಿದ್ದನ್ನು ಹಾಗೂ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಹಕ್ಕುಗಳ ಪರ ತೀರ್ಪು ನೀಡಿದ್ದನ್ನು ನೆನೆದರು.

ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಮಾತನಾಡಿ ಸಿಜೆಐ ಚಂದ್ರಚೂಡ್ ಅವರ ತಂದೆ ಒಮ್ಮೆ ತಮ್ಮ ಮಗ ವಕೀಲರಾಗಿ ಮುಂದುವರಿಯಬೇಕೇ ಅಥವಾ ನ್ಯಾಯಾಧೀಶರಾಗಬೇಕೇ ಎಂದು ನನ್ನನ್ನು ಕೇಳಿದರು. ನಾನು ವಕೀಲರಾಗಿಯೇ ಮುಂದುವರೆಯಲಿ ಎಂದಿದ್ದೆ.. ನನ್ನ ಮಾತನ್ನು ಅವರು ಆಗ ಕೇಳಿದ್ದರೆ ಇಂತಹ ನ್ಯಾಯಮೂರ್ತಿಯನ್ನು ಈಗ ಕಳೆದುಕೊಳ್ಳುತ್ತಿದ್ದೆವು ಎಂದು ಮೆಚ್ಚುಗೆ ಸೂಚಿಸಿದರು.

ನಿಯೋಜಿತ ಸಿಜೆಐ ಸಂಜೀವ್ ಖನ್ನಾ ಅವರು ಸಿಜೆಐ ಚಂದ್ರಚೂಡ್ ಅವರ ಹಾದಿಯಲ್ಲಿ ನಡೆಯಲು ಯತ್ನಿಸುವುದಾಗಿ ತಿಳಿಸಿದರು.  "ಅವರು ನನ್ನ ಕೆಲಸವನ್ನು ಸುಲಭ ಮತ್ತು ಕಠಿಣಗೊಳಿಸಿದ್ದಾರೆ. ಕ್ರಾಂತಿಗಳಿಂದಾಗಿ ಸುಲಭ ಮತ್ತು ಕಠಿಣ ಏಕೆಂದರೆ ನಾನು ಅವರಂತೆ ಹೆಜ್ಜೆ ಹಾಕಲು ಸಾಧ್ಯವಿಲ್ಲ, ಅದರಲ್ಲಿ ವಿಫಲನಾಗುತ್ತೇನೆ" ಎಂದು ಅವರು ಹೇಳಿದರು.

ತಮ್ಮ ಅಂತಿಮ ಹೇಳಿಕೆಯಲ್ಲಿ, ಸಿಜೆಐ ಚಂದ್ರಚೂಡ್ ಅವರು ನ್ಯಾಯಾಧೀಶರಾಗಿ ತಾವು ನಡೆಸಿದ ಯಾನವನ್ನು ಸ್ಮರಿಸಿದರು. ಇದು ನನ್ನ ಸೌಭಾಗ್ಯ ಮತ್ತು ಜವಾಬ್ದಾರಿ ಎರಡೂ ಆಗಿವೆ.  ತನ್ನ ಅಧಿಕಾರಾವಧಿ ನ್ಯಾಯಮೂರ್ತಿ ಖನ್ನಾ ಅವರ ಮೂಲಕ ಸುಗಮವಾಗಿ ಮುಂದುವರೆಯಲಿದೆ ಎಂದು ಅವರು ಭರವಸೆ ನೀಡಿದರು.

ಎರಡು ವರ್ಷಗಳ ಹಿಂದೆ ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿಜೆಐ ಚಂದ್ರಚೂಡ್ ಅವರು ಮಾಜಿ ಸಿಜೆಐ ಉದಯ್ ಉಮೇಶ್ ಲಲಿತ್ ನಂತರ ಸಿಜೆಐ ಹುದ್ದೆಗೇರಿದರು.

ನವೆಂಬರ್ 11, 1959 ರಂದು ಜನಿಸಿದ ನ್ಯಾ. ಚಂದ್ರಚೂಡ್ 1979ರಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ 1982ರಲ್ಲಿ ಪದವಿ ಪೂರ್ಣಗೊಳಿಸಿದ ಅವರು ಎಲ್ಎಲ್ಎಂ ಪದವಿ ಪಡೆದದ್ದು ಇಂಗ್ಲೆಂಡ್ನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ. ಬಳಿಕ ಅದೇ ವಿವಿಯಿಂದ  ಡಾಕ್ಟರ್ ಆಫ್ ಜುರಿಡಿಶಿಯಲ್ ಸೈನ್ಸಸ್ ಪದವಿ ಸ್ವೀಕಾರ.

1998ರಿಂದ 2000 ರವರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ. 1998 ರಲ್ಲಿ ಬಾಂಬೆ ಹೈಕೋರ್ಟ್‌ ಹಿರಿಯ ನ್ಯಾಯವಾದಿಯಾಗಿ ನೇಮಕ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು, ಮಹಿಳಾ ಜೀತ ಕಾರ್ಮಿಕರ ಹಕ್ಕುಗಳು, ಕೆಲಸದ ಸ್ಥಳದಲ್ಲಿ ಎಚ್ಐವಿ ಪೀಡಿತರ ಹಕ್ಕುಗಳು, ಗುತ್ತಿಗೆ ಕಾರ್ಮಿಕರ ಹಕ್ಕುಗಳು. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ತೀವ್ರ ಕಾನೂನು ಹೋರಾಟದಲ್ಲಿ ಭಾಗಿಯಾದರು.

ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಮಾರ್ಚ್ 29, 2000 ರಂದು ನೇಮಕ. ಅಕ್ಟೋಬರ್ 31, 2013 ರಂದು ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ. ಮೇ 13, 2016 ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ.

Also Read
ಆಡಳಿತ ಹಾಗೂ ಶಿಷ್ಟಾಚಾರದ ಕಾರಣಗಳಿಗಷ್ಟೇ ಕಾರ್ಯಾಂಗ- ನ್ಯಾಯಾಂಗದ ನಡುವೆ ನಂಟಿರುತ್ತದೆ ವಿನಾ ವ್ಯವಹಾರಕ್ಕಲ್ಲ: ಸಿಜೆಐ

ಆಳುವವರ ವಿರುದ್ಧ ಭಿನ್ನ ತೀರ್ಪುಗಳು ಸೇರಿದಂತೆ ಹಲವು ಗಮನಾರ್ಹ ಆದೇಶಗಳನ್ನು ಅವರು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ್ದಾರೆ. ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ, ʼಆಧಾರ್ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದು ಅಸಾಂವಿಧಾನಿಕʼ ಎಂದು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಏಕೈಕ ನ್ಯಾಯಮೂರ್ತಿ ಅವರಾಗಿದ್ದರು.

ಕೋವಿಡ್ ಸಾಂಕ್ರಾಮಿಕ ರೋಗ ದಾಳಿ ಮಾಡಿದ್ದ ವೇಳೆ ನ್ಯಾ. ಚಂದ್ರಚೂಡ್ ಅಧ್ಯಕ್ಷತೆಯ ಸುಪ್ರೀಂ ಕೋರ್ಟ್ ಇ ಸಮಿತಿ ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಮೂಲ ಸೌಕರ್ಯ ಒದಗಿಸಿ ಮಹತ್ತರ ಪಾತ್ರ ವಹಿಸಿತ್ತು.

ಸಿಜೆಐ ಚಂದ್ರಚೂಡ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ವಕೀಲರ ಸಂಘದಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Kannada Bar & Bench
kannada.barandbench.com