"ಭಯೋತ್ಪಾದಕನನ್ನು ಬಂಧಿಸಿದರೆ ಆತನ ಪುತ್ರ ಕರೆದ ಎಂದು ಬೆಂಬಲಕ್ಕೆ ಠಾಣೆಗೆ ಹೋಗುತ್ತೀರಾ?" ಪೂಂಜಾಗೆ ಹೈಕೋರ್ಟ್‌ ತರಾಟೆ

“ಕೋರ್ಟ್‌ ಸರಿಯಾಗಿ ನಡೆಸುತ್ತೀರೋ, ಇಲ್ಲವೋ ಎಂದು ನೋಡಲು ನೀವು ಇಲ್ಲಿ ಬಂದು ಕುಳಿತರೆ ನಾವು ಏನು ಮಾಡುವುದು?” ಎಂದು ಪೂಂಜಾ ಪರ ಹಿರಿಯ ವಕೀಲ ನಾವದಗಿ ಅವರನ್ನು ಪ್ರಶ್ನಿಸಿದ ನ್ಯಾ. ದೀಕ್ಷಿತ್‌.
Harish Poonja and Karnataka HC
Harish Poonja and Karnataka HC
Published on

“ಭಯೋತ್ಪಾದಕನನ್ನು ಬಂಧಿಸಿದರೆ ಆತನ ಪುತ್ರ ಕರೆದ ಎಂದು ಅವರ ಬೆಂಬಲಕ್ಕೆ ಠಾಣೆಗೆ ಹೋಗುತ್ತೀರಾ?” ಎಂದು ಬಿಜೆಪಿಯ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರನ್ನು ಕರ್ನಾಟಕ ಹೈಕೋರ್ಟ್‌ ಖಾರವಾಗಿ ಪ್ರಶ್ನಿಸಿದ ಘಟನೆ ಶುಕ್ರವಾರ ನಡೆಯಿತು.

ಪೊಲೀಸರಿಗೆ ಬೆದರಿಕೆ ಹಾಕಿದ ಸಂಬಂಧ ತಮ್ಮ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಹರೀಶ್‌ ಪೂಂಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೂಂಜಾ ನಡೆಗೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪೂಂಜಾ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪಕ್ಷದ ಕಾರ್ಯಕರ್ತ ಶಶಿರಾಜ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌ ದಾಖಲಿಸದೇ ಬೆಳ್ತಂಗಡಿ ಪೊಲೀಸರು ಕರೆದೊಯ್ದಿದ್ದರು. ಶಶಿರಾಜ್‌ ಪತ್ನಿಯ ಕೋರಿಕೆ ಮೇರೆಗೆ ಮೇ 19ರ ರಾತ್ರಿ ಪೂಂಜಾ ಪೊಲೀಸ್‌ ಠಾಣೆಗೆ ಹೋಗಿದ್ದರು. ಯಾವ ಆಧಾರದ ಮೇಲೆ ಶಶಿರಾಜ್‌ ಅವರನ್ನು ಬಂಧಿಸಿದ್ದೀರಿ? ಎಫ್‌ಐಆರ್‌ ಹಾಕಿದ್ದೀರಾ? ಎಂದು ಕೇಳಿದ್ದರು. ಈ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೂಂಜಾ ಏರುಧ್ವನಿಯಲ್ಲಿ ಮಾತನಾಡಿರಬಹುದು. ಇದಕ್ಕಾಗಿ, ಪೂಂಜಾ ವಿರುದ್ಧ ಐಪಿಸಿ ಸೆಕ್ಷನ್‌ 353 ಮತ್ತು 504 ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಘಟನೆಯ ಹಿನ್ನೆಲೆಯನ್ನು ವಿವರಿಸಿದರು.

ಮುಂದುವರಿದು, “ಶಶಿರಾಜ್‌ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಆರೋಪ ಇದ್ದು, ಅವರ ಮೇಲೆ ಪರವಾನಗಿ ಪಡೆಯದ ಆರೋಪದ ಮೇಲೆ ಸ್ಫೋಟಕ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅಂದು 11 ಗಂಟೆ ರಾತ್ರಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದಕ್ಕಾಗಿ ಪೊಲೀಸ್‌ ಠಾಣೆ ನಿಮ್ಮ ಜಹಾಗೀರಾ ಎಂದು ಪೂಂಜಾ ಕೇಳಿದ್ದಾರೆ” ಎಂದರು.

ಆಗ ಪೀಠವು “ಶಾಸಕ, ಸಚಿವರು ಪೊಲೀಸ್‌ ಠಾಣೆಗೆ ಹೋದರೆ ಪೊಲೀಸರು ಹೇಗೆ ಕೆಲಸ ಮಾಡಬೇಕು?” ಎಂದು ಆಕ್ಷೇಪಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ನಾವದಗಿ ಅವರು “ಗ್ರಾಮೀಣ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಿಸದೇ ಯಾರನ್ನಾದರೂ ಪೊಲೀಸರು ವಶಕ್ಕೆ ಪಡೆದರೆ ಮೊದಲು ಶಾಸಕರನ್ನು ಸಂಪರ್ಕಿಸಲಾಗುತ್ತದೆ. ಕಾನೂನು ಬಾಹಿರವಾಗಿ ತನ್ನ ಕ್ಷೇತ್ರದಲ್ಲಿ ಏನಾದರೂ ನಡೆದರೆ ಅದನ್ನು ಪರಿಶೀಲಿಸಲು ಶಾಸಕರು ಮುಕ್ತರಾಗಿರುತ್ತಾರೆ. ಅದರಲ್ಲೂ ಎಫ್‌ಐಆರ್‌ ದಾಖಲಾಗದೇ ಯಾರನ್ನಾದರೂ ಪೊಲೀಸರು ಕರೆದೊಯ್ದರೆ ಅದನ್ನು ಅವರು ಪರಿಶೀಲಿಸಬಹುದು” ಎಂದರು.

ಆಗ ಪೀಠವು “ಎಫ್‌ಐಆರ್‌ ಆದ ತಕ್ಷಣ ಶಾಸಕರು ಠಾಣೆಯಲ್ಲಿ ಹೋಗಿ ಕುಳಿತರೆ ಪೊಲೀಸ್‌ ಅಧಿಕಾರಿ ಹೇಗೆ ಕೆಲಸ ಮಾಡಬೇಕು? ಇಂಥ ಸಂದರ್ಭದಲ್ಲಿ ಶಾಸಕರು ಪೊಲೀಸ್‌ ಠಾಣೆಗೆ ಹೋಗಬಹುದು ಎಂಬ ಸಂಬಂಧದ ಒಂದೇ ಒಂದು ಐತಿಹ್ಯ ಹೊಂದಿರುವ ತೀರ್ಪು ತೋರಿಸಿ” ಎಂದರು.

ಆಗ ನಾವದಗಿ ಅವರು “ಅಮಾಯಕ ಮಹಿಳೆ ಬಂದು ನನ್ನನ್ನು ಕೇಳಿದರೆ ಏನು ಮಾಡಬೇಕು? ಪೊಲೀಸ್‌ ಇಲಾಖೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜನರು ಸಮಸ್ಯೆ ಹೇಳಿಕೊಂಡು ಬಂದರೆ ಜನಪ್ರತಿನಿಧಿ ಸ್ಪಂದಿಸಬೇಕಾಗುತ್ತದೆ. ಎಫ್‌ಐಆರ್‌ ದಾಖಲಿಸದೇ ಶಶಿರಾಜ್‌ರನ್ನು ಪೊಲೀಸರು ಕರೆದೊಯ್ದಿದ್ದರು. ಅದಕ್ಕೆ ಠಾಣೆಗೆ ಪೂಂಜಾ ಹೋಗಿದ್ದರು” ಎಂದು ಸಮಜಾಯಿಷಿ ನೀಡಲು ಮುಂದಾದರು.

ಆಗ ಪೀಠವು “ದೂರು ನೀಡಿದ ತಕ್ಷಣ ಎಂಪಿ, ಎಂಎಲ್‌ಎ ಠಾಣೆಯಲ್ಲಿ ಹೋಗಿ ಕುಳಿತರೆ ತನಿಖೆ ಮಾಡುವುದು ಹೇಗೆ? ನೀವೇಕೆ ಹೋಗಬೇಕು? ಅಕ್ರಮ ಬಂಧನವಾದರೆ ಕಾನೂನಿನಲ್ಲಿ ಪರಿಹಾರವಿದೆ. ನೀವೇಕೆ ಅಲ್ಲಿ ಹೋದಿರಿ? ಉದಾಹರಣೆಗೆ, ನಾಳೆ ಪೊಲೀಸರು ಭಯೋತ್ಪಾದಕನೊಬ್ಬನನ್ನು ಬಂಧಿಸುತ್ತಾರೆ. ಒಬ್ಬ ಮಹಿಳೆ ಬಂದು ನನ್ನನ್ನು ಗಂಡನನ್ನು ಬಂಧಿಸಿದ್ದಾರೆ ಠಾಣೆಗೆ ಹೋಗೋಣ ಬನ್ನಿ ಎಂದರೆ ಹೋಗುತ್ತೀರಾ? ಹೀಗಾದರೆ ಪೊಲೀಸರು, ಸಾರ್ವಜನಿಕ ಅಧಿಕಾರಿಗಳು ಕೆಲಸ ಮಾಡುವುದು ಹೇಗೆ? ಎಲ್ಲದಕ್ಕೂ ಒಂದು ಮಿತಿ ಇರಬೇಕು? ನೀವು ಈ ರೀತಿ ಪೊಲೀಸ್‌ ಠಾಣೆಗೆ ಹೋಗಲಾಗದು. ಸಮಸ್ಯೆ ಪರಿಹರಿಸುವ ಸಂಬಂಧ ಎಂಎಲ್‌ಎ ಠಾಣೆಗೆ ಹೋಗಿ ಕುಳಿತುಕೊಳ್ಳಬಹುದು ಎಂದು ಹೇಳಿರುವ ಒಂದು ತೀರ್ಪು ತೋರಿಸಿ" ಎಂದು ಗುಡುಗಿತು.

ಮುಂದುವರಿದು, "ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯಲ್ಲಿ ಪೊಲೀಸರನ್ನು ಮುಕ್ತವಾಗಿ ಇಡಬೇಕು. ಶಾಸಕ, ಸಂಸದ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರೆಲ್ಲಾ ಹೋಗಿ ಪ್ರಶ್ನಿಸಿದರೆ ಪೊಲೀಸರು ಕೆಲಸ ಮಾಡುವುದು ಹೇಗೆ? ನಿಮಗೆ ಸಮಸ್ಯೆಯಾದರೆ ಪರಿಹಾರಕ್ಕೆ ಮಾನವ ಹಕ್ಕುಗಳ ಆಯೋಗ ಇದೆ. ಅಲ್ಲಿಗೆ ಮನವಿ ನೀಡಬಹುದು. ನೀವ್ಯಾರು (ಪೂಂಜಾ) ಠಾಣೆಗೆ ಹೋಗಲು. ಶಶಿರಾಜ್‌ ಬಂಧನ ಅಕ್ರಮವಾಗಿದ್ದರೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಬೇಕಿತ್ತು” ಎಂದಿತು.

ಪೂಂಜಾ ನಡೆಯನ್ನು ಖಂಡಿಸಿದ ಪೀಠವು, “ಒಂದೊಮ್ಮೆ ಭಯೋತ್ಪಾದಕನನ್ನು ಬಂಧಿಸಲಾಗುತ್ತದೆ ಎಂದುಕೊಳ್ಳಿ. ಆತನ ಮಗ ಒಂದು ಪಕ್ಷದ ಬೆಂಬಲಿಗನಾಗಿದ್ದು, ನಮ್ಮ ತಂದೆ ಬಂಧನವಾಗಿದೆ, ಬನ್ನಿ ಠಾಣೆಗೆ ಹೋಗೋಣ ಎಂದರೆ ಹೋಗುತ್ತೀರಾ? ಹೀಗಾದರೆ, ಪೊಲೀಸರು ಕೆಲಸ ಮಾಡುವುದು ಹೇಗೆ? ದೇಶದಲ್ಲಿ ಏನೆಲ್ಲಾ ಅಪರಾಧಗಳು ಆಗುತ್ತಿವೆ. ಅಪರಾಧ ಸರಾಸರಿ ಏನಿದೆ? ಎನ್‌ಸಿಆರ್‌ಬಿ ದಾಖಲೆಯನ್ನೊಮ್ಮೆ ನೋಡಿ. ಯಾರೂ ಸುರಕ್ಷಿತವಾಗಿರುವ ಸ್ಥಿತಿ ಇಲ್ಲ. ನಿಮ್ಮ ಎಂಎಲ್‌ಎ ಠಾಣೆಯಲ್ಲಿ ಕುಳಿತರೆ ಪೊಲೀಸರು ಕೆಲಸ ಮಾಡುವುದು ಹೇಗೆ? ಯಾಕ್‌ ಅಲ್ಲಿ ಹೋದಿರಿ? ನಿಮ್ಮ ಕೆಲಸ ನೀವು ಮಾಡಿ, ಪೊಲೀಸರ ಕೆಲಸ ಮಾಡಲು ಅವರಿಗೆ ಬಿಡಿ” ಎಂದು ಕಿವಿ ಹಿಂಡಿತು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು, “ಕೋರ್ಟ್‌ ಸರಿಯಾಗಿ ನಡೆಸುತ್ತೀರೋ, ಇಲ್ಲವೋ ಎಂದು ನೋಡಲು ಇಲ್ಲಿ ಬಂದು ನೀವು ಕುಳಿತರೆ ನಾವು ಏನು ಮಾಡುವುದು?” ಎಂದು ಕುಟುಕಿತು. “ಈಚೆಗೆ ಜನರು ಪೊಲೀಸ್‌ ಠಾಣೆಗೆ ಕಲ್ಲು ಹೊಡೆಯುವುದು, ಪೊಲೀಸ್‌ ವಾಹನಗಳಿಗೆ ಹಾನಿ ಮಾಡುವುದು, ಹಲ್ಲೆ ಮಾಡುವುದನ್ನೂ ನಾವು ನೋಡಿದ್ದೇವೆ. ಪೊಲೀಸರನ್ನು ನಾವು ರಕ್ಷಿಸದಿದ್ದರೆ, ಅವರು ಕೆಲಸ ಮಾಡುವುದಾದರೂ ಹೇಗೆ?” ಎಂದು ಪ್ರಶ್ನಿಸಿತು.

ವಿಚಾರಣೆಯ ವೇಳೆ ನಾವದಗಿ ಅವರು “ಪೊಲೀಸರೇ ದೂರು ಕೊಟ್ಟು ಅವರೇ ತನಿಖೆ ನಡೆಸುತ್ತಿದ್ದಾರೆ. ನಾನು (ಪೂಂಜಾ) ಪೊಲೀಸರ ಬಗ್ಗೆ ಏನೋ ಅಂದಿದ್ದೇನೆ ಎಂಬುದು ಆರೋಪ. ಅದನ್ನು ಅವರೇ ತನಿಖೆ ನಡೆಸುತ್ತಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ ದೂರು ನೀಡಿದ್ದಾರೆ. ಅವರೇ ದೂರು ನೀಡಿ ಅವರೇ ತನಿಖೆ ನಡೆಸಲಾಗದು” ಎಂದರು.

ನಾವದಗಿ ವಾದಕ್ಕೆ ಆಕ್ಷೇಪಿಸಿದ ಹೆಚ್ಚುವರಿ ಸರ್ಕಾರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪೊಲೀಸರ ನಿಂದನೆ ಪ್ರಕರಣವನ್ನು ಪುತ್ತೂರು ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ತನಿಖೆ ನಡೆಸಿ, ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯಾಲಯ ಸಂಜ್ಞೇ ಪರಿಗಣಿಸಿದೆ” ಎಂದು ಪೀಠಕ್ಕೆ ವಿವರಿಸಿದರು.

ಅಂತಿಮವಾಗಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು, ಸೂಚಿಸಿ ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿತು. ಈ ನಡುವೆ, ಪೂಂಜಾ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಸಾವಧಾನದಿಂದ ಇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತು.

Kannada Bar & Bench
kannada.barandbench.com