
ಕಾಲ್ತುಳಿತ ಪ್ರಕರಣದ ಸಂಬಂಧ ದಾಖಲಾಗಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಮಾಡುವ ಆದೇಶದ ಮಾಹಿತಿಯನ್ನು ಪಕ್ಷಕಾರರಿಗೆ ಒದಗಿಸುವಂತೆ ನಿರ್ದೇಶಿಸಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ವಿಚಾರಣಾ ಆಯೋಗದ ವರದಿ ರದ್ದುಗೊಳಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಮುಂದೂಡಿತು.
ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಎಂ. ಅಡಿಗ ಅವರ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಇಂದು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಿಗದಿಯಾಗಿದೆ. ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ವಿಚಾರಣಾ ಆಯೋಗದ ವರದಿಯ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು. ಹೀಗಾಗಿ, ವಿಚಾರಣೆಯನ್ನು ಮುಂದೂಡಬೇಕು” ಎಂದು ಮನವಿ ಮಾಡಿದರು.
ಡಿಎನ್‌ಎ ಪ್ರತಿನಿಧಿಸಿದ್ದ ಹಿರಿಯ ವಕೀಲ ಬಿ ಕೆ ಸಂಪತ್ ಕುಮಾರ್ ಅವರು “ಡಿಎನ್‌ಎ ಅಧಿಕಾರಿಗಳು ನೀಡಿರುವ ಹೇಳಿಕೆಯನ್ನು ನ್ಯಾ. ಕುನ್ಹಾ ಆಯೋಗ ತಪ್ಪಾಗಿ ದಾಖಲಿಸಿದೆ. ಇದಕ್ಕಾಗಿ ಅದರ ಪ್ರತಿ ನೀಡಬೇಕು ಎಂದು ಕೋರಿದ್ದೇವೆ. ಇದರ ಜೊತೆಗೆ ಡಿಎನ್‌ಎ ವಿರುದ್ಧ ಸಾಕ್ಷಿ ನುಡಿದಿರುವವರ ಪಾಟೀ ಸವಾಲಿಗೆ ವಿಚಾರಣಾ ಆಯೋಗದ ಕಾಯಿದೆಯಲ್ಲಿ ಅವಕಾಶವಿದೆ. ಅದಕ್ಕೂ ಅನುಮತಿ ಕೋರಿದ್ದೇವೆ. ಈ ಎರಡು ಮನವಿಗಳನ್ನು ನ್ಯಾ. ಕುನ್ಹಾ ಅವರು ಪರಿಗಣಿಸಿಲ್ಲ. ಇದಕ್ಕೆ ಪೂರಕವಾಗಿ ಇಡೀ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗಿದೆ. ಅದನ್ನು ತರಿಸಿ ನ್ಯಾಯಾಲಯ ಪರಿಶೀಲಿಸಬಹುದು. ಹೀಗಾಗಿ, ಸ್ವಾಭಾವಿಕ ನ್ಯಾಯತತ್ವ ಉಲ್ಲಂಘನೆಯಾಗಿರುವುದರಿಂದ ಅರ್ಜಿ ವಜಾ ಮಾಡಬೇಕು” ಎಂದು ಕೋರಿದರು.
ಅಲ್ಲದೇ, “ನ್ಯಾ. ಕುನ್ಹಾ ವರದಿಯನ್ನು ಆಧರಿಸಿ ಮಾಧ್ಯಮಗಳು ಡಿಎನ್‌ಎ ಅಧಿಕಾರಿಗಳ ಫೋಟೊ ಸಮೇತ ಸುದ್ದಿ ಪ್ರಕಟಿಸಿವೆ. ಇದರಿಂದ ಅವರ ಘನತೆಗೆ ಧಕ್ಕೆಯಾಗಿದೆ. ಮಾಧ್ಯಮಗಳಿಗೆ ನ್ಯಾ. ಕುನ್ಹಾ ಆಯೋಗದ ವರದಿ ಸಿಗಬಹುದಾದರೆ ನಮಗೇಕೆ ನೀಡಲಾಗುವುದಿಲ್ಲ? ಆರ್‌ಟಿಐ ಅಡಿಯೂ ಎರಡು ಅರ್ಜಿ ಹಾಕಿದ್ದು, ಅದಕ್ಕೂ ಉತ್ತರ ಸಿಕ್ಕಿಲ್ಲ” ಎಂದರು.
ಸುದೀರ್ಘವಾಗಿ ವಾದ ಪ್ರತಿವಾದ ಆಲಿಸಿದ ಪೀಠವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನ್ಯಾಯಾಲಯ ಮಾಡುವ ಆದೇಶವನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿತು.