ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಬನಾರಸ್ ಹಿಂದೂ ವಿಶ್ವವಿದ್ಯಾಲಯ) ಸೀಟು ಗಿಟ್ಟಿಸಿಕೊಂಡರೂ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಶುಲ್ಕ ಪಾವತಿಸಲು ವಿಳಂಬವಾದ ಕಾರಣಕ್ಕೆ ಡೋಲಾಯಮಾನ ಪರಿಸ್ಥಿತಿಯಲ್ಲಿದ್ದ ದಲಿತ ವಿದ್ಯಾರ್ಥಿನಿಯೊಬ್ಬರ ನೆರವಿಗೆ ಅಲಾಹಾಬಾದ್ ಹೈಕೋರ್ಟ್ ಧಾವಿಸಿದೆ. ಶಿಕ್ಷಣ ಸಂಸ್ಥೆಯ ಪ್ರವೇಶಾತಿಗೆ ಅಗತ್ಯವಿದ್ದ ₹ 15,000 ಸೀಟು ಹಂಚಿಕೆ ಶುಲ್ಕವನ್ನು ಅಲಾಹಾಬಾದ್ ಹೈಕೋರ್ಟ್ ಪಾವತಿಸಿ ಮಾನವೀಯ ನೆಲೆಯಲ್ಲಿ ನೆರವಾಗಿದೆ (ಸಂಸ್ಕೃತಿ ರಂಜನ್ ಮತ್ತು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ ನಡುವಣ ಪ್ರಕರಣ).
ವಿದ್ಯಾರ್ಥಿನಿಯ ಸೀಟು ಹಂಚಿಕೆಗೆ ಅನುವಾಗುವಂತೆ ಅಲಾಹಾಬಾದ್ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರು ಸ್ವಯಂಪ್ರೇರಿತರಾಗಿ ₹ 15,000 ಪಾವತಿಸಿದರು. ನ್ಯಾಯಾಲಯದ ಅವಧಿ ಮುಗಿದ ಬಳಿಕ ಹಣವನ್ನು ಅರ್ಜಿದಾರೆಗೆ ಹಸ್ತಾಂತರಿಸಿದರು. ಸೀಟು ಖಾಲಿ ಇಲ್ಲದಿದ್ದರೆ ಅರ್ಜಿದಾರರಿಗೆ ಸೂಪರ್‌ನ್ಯೂಮರರಿ ಸೀಟು ಸೃಜಿಸುವಂತೆಯೂ ನ್ಯಾಯಾಲಯವು ವಿಶ್ವವಿದ್ಯಾಲಯಕ್ಕೆ ಇದೇ ವೇಳೆ ನಿರ್ದೇಶಿಸಿತು. ಪ್ರವೇಶಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಮೂರು ದಿನಗಳ ಒಳಗೆ ಕ್ಯಾಂಪಸ್‌ಗೆ ವರದಿ ಮಾಡಿಕೊಳ್ಳಬೇಕೆಂದು ಅದು ಅರ್ಜಿದಾರರಿಗೆ ಸೂಚಿಸಿದೆ.
ಅರ್ಜಿದಾರೆ ಸಂಸ್ಕೃತಿ ರಂಜನ್ 10ನೇ ತರಗತಿಯಲ್ಲಿ ಶೇ 95.6 ಮತ್ತು 12ನೇ ತರಗತಿಯಲ್ಲಿ ಶೇ 94 ಅಂಕ ಪಡೆದಿದ್ದರು. ಅವರು ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಲು ಜೆಇಇ ಪರೀಕ್ಷೆ ಬರೆದಿದ್ದರು. ಆಕೆಯ ತಂದೆ ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು ಮೂತ್ರಪಿಂಡ ಕಸಿಗಾಗಿ ಹಣವಿನಿಯೋಗಿಸಿದ್ದರಿಂದ ₹ 15,000 ಮೊತ್ತವನ್ನು ಪಾವತಿಸಲು ರಂಜನ್ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.