[ಮೋಟಾರು ಅಪಘಾತ] ಅಕ್ರಮ ಸಂಬಂಧದಿಂದ ಜನಿಸಿದ ಮಗುವೂ ವಿಮಾ ಪರಿಹಾರಕ್ಕೆ ಅರ್ಹ: ಕರ್ನಾಟಕ ಹೈಕೋರ್ಟ್

ಮಲ್ಲಿಕಾರ್ಜುನ ಎಂಬುವರು 2012ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರೊಂದಿಗೆ ಲಿವ್‌-ಇನ್‌ ಸಂಬಂಧದಲ್ಲಿದ್ದ ರೇಣುಕಾ, ಪುತ್ರ ರವಿ ಹಾಗೂ ಮಲ್ಲಿಕಾರ್ಜುನ ಪೋಷಕರು ಪ್ರತ್ಯೇಕವಾಗಿ ಪರಿಹಾರ ಕೋರಿ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
Justice H P Sandesh
Justice H P Sandesh

“ಅಕ್ರಮ ಸಂಬಂಧದಿಂದ ಜನಿಸಿದ ಮಗುವೂ ಮೋಟಾರು ವಾಹನ ಕಾಯಿದೆ ಸೆಕ್ಷನ್‌ 166ರ ಅಡಿ ಕಾನೂನಾತ್ಮಕ ಪ್ರತಿನಿಧಿ (ಲೀಗಲ್‌ ರೆಪ್ರಸೆಂಟೇಟಿವ್‌) ಎಂದು ಪರಿಗಣಿಸಲ್ಪಟ್ಟು, ಪರಿಹಾರಕ್ಕೆ ಅರ್ಹ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ಆದೇಶ ಮಾಡಿದೆ.

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರದ ದೊಡ್ಡತೋಗೂರು ಗ್ರಾಮದ ನಿವಾಸಿಯಾದ ರೇಣುಕಾ (ಹೆಸರು ಬದಲಿಸಲಾಗಿದೆ) ಮತ್ತು ಆಕೆಯ ಅಪ್ರಾಪ್ತ ಪುತ್ರ ರವಿ (ಹೆಸರು ಬದಲಿಸಲಾಗಿದೆ) ಹಾಗೂ ಅಪಘಾತದಲ್ಲಿ ಸಾವನ್ನಪ್ಪಿದ ಮಲ್ಲಿಕಾರ್ಜುನನ ಪೋಷಕರು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಹಾಲಿ ಪ್ರಕರಣದಲ್ಲಿ ಅಪ್ತಾಪ್ತ ರವಿ ವಿಚಾರದಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಮಾಡಿದ್ದ ಆದೇಶವನ್ನು ಬದಿಗೆ ಸರಿಸಲಾಗಿದೆ. ಅಲ್ಲದೇ, ಪರಿಹಾರದ ಮೊತ್ತವನ್ನು 13,28,940 ರೂಪಾಯಿಗೆ ಹೆಚ್ಚಳ ಮಾಡಿದ್ದು, ದಾವೆ ಆರಂಭವಾದಾಗಿನಿಂದ ಹಣ ಠೇವಣಿ ಇಡುವವರೆಗೆ ವಾರ್ಷಿಕವಾಗಿ ಶೇ. 6ರಷ್ಟು ಬಡ್ಡಿಯೊಂದಿಗೆ ಪರಿಹಾರ ಪಾವತಿಸಬೇಕು. ರವಿ ಪರಿಹಾರದ ಮೊತ್ತದ ಪೈಕಿ ಶೇ. 40ರಷ್ಟು ಹಣಕ್ಕೆ ಅರ್ಹತೆ ಹೊಂದಿದ್ದು, ಮಲ್ಲಿಕಾರ್ಜುನನ ತಂದೆ-ತಾಯಿ ತಲಾ ಶೇ. 30ರಷ್ಟು ಪರಿಹಾರದ ಮೊತ್ತಕ್ಕೆ ಅರ್ಹರಾಗಿದ್ದಾರೆ. ತಂದೆ-ತಾಯಿಗೆ 60 ವರ್ಷಗಳಾಗಿರುವುದರಿಂದ ಪೂರ್ತಿ ಹಣವನ್ನು ಅವರಿಗೆ ನ್ಯಾಯ ಮಂಡಳಿ ಬಿಡುಗಡೆ ಮಾಡಬೇಕು. ರವಿ ಅಪ್ರಾಪ್ತನಾಗಿರುವುದರಿಂದ ಆತ ಪ್ರಾಪ್ತನಾಗುವವರೆಗೆ ಪೂರ್ತಿ ಹಣವನ್ನು ನಿಶ್ಚಿತ ಠೇವಣಿ ರೂಪದಲ್ಲಿ ಇಡಬೇಕು. ತಾಯಿ ರೇಣುಕಾ, ಮಗುವಿನ ಶೈಕ್ಷಣಿಕ ಮತ್ತು ಇತರೆ ವೆಚ್ಚ ಭರಿಸಲು ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿಯ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಡೆದುಕೊಳ್ಳಬಹುದು. ವಿಮಾ ಕಂಪೆನಿಯು ಪರಿಹಾರದ ಮೊತ್ತಕ್ಕೆ ಬಡ್ಡಿ ಸೇರಿಸಿ ಆರು ವಾರಗಳಲ್ಲಿ ಪಾವತಿಸಬೇಕು” ಎಂದು ಆದೇಶದಲ್ಲಿ ನ್ಯಾಯಾಲಯ ನಿರ್ದೇಶಿಸಿದೆ.

1996ರಲ್ಲಿ ರೇಣುಕಾ ಮತ್ತು ಕುಮಾರಸ್ವಾಮಿ ಅವರು ವಿವಾಹವಾಗಿ, ಒಂದು ಹೆಣ್ಣು ಮಗು ಜನಿಸಿತ್ತು. 2006ರಲ್ಲಿ ಈ ಸಂಬಂಧದಲ್ಲಿ ಬಿರುಕು ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, 2010ರಲ್ಲಿ ವಿಚ್ಚೇದನವಾಗಿತ್ತು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮತ್ತು ರೇಣುಕಾ ನಡುವಿನ ಪರಿಚಯವು ಸಂಬಂಧಕ್ಕೆ ತಿರುಗಿ, 2006ರ ಆಗಸ್ಟ್‌ 8ರಂದು ರವಿ ಜನನವಾಗಿತ್ತು. ಇದಾದ ಮರು ವರ್ಷದಲ್ಲಿ ಅಂದರೆ 2007ರಲ್ಲಿ ಮಲ್ಲಿಕಾರ್ಜುನನು ಶೈಲಜಾ (ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ವರಿಸಿದ್ದರು. ಇದು ಆತನಿಗೆ ಅಧಿಕೃತವಾಗಿ ಮೊದಲ ಮದುವೆಯಾಗಿತ್ತು.

ಈ ಮಧ್ಯೆ, ಮಲ್ಲಿಕಾರ್ಜುನ ಕಾರಿನಲ್ಲಿ ತೆರಳುತ್ತಿದ್ದಾಗ ಮ್ಯಾಕ್ಸಿ ಕ್ಯಾಬ್‌ ನಡುವೆ ಸಂಭವಿಸಿದ ಅಪಘಾತದಲ್ಲಿ 2012ರ ಆಗಸ್ಟ್‌ 23ರಂದು ಸಾವನ್ನಪ್ಪಿದ್ದರು. ರೇಣುಕಾ ಮತ್ತು ರವಿ ಹಾಗೂ ಮಲ್ಲಿಕಾರ್ಜುನನ ತಂದೆ-ತಾಯಿಯು ಪ್ರತ್ಯೇಕವಾಗಿ ಪರಿಹಾರ ಕೋರಿ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಪ್ರತಿವಾದಿ ಶ್ರೀರಾಮ್‌ ಇನ್ಶೂರೆನ್ಸ್‌ ಕಂಪೆನಿಯು ರೇಣುಕಾ ಅವರು ಮಲ್ಲಿಕಾರ್ಜುನನ ಜೊತೆಗೆ ಕಾನೂನು ರೀತಿಯಲ್ಲಿ ವಿವಾಹವಾಗಿಲ್ಲ ಮತ್ತು ಮಗು ಪಡೆದಿಲ್ಲ ಎಂದು ವಾದಿಸಿತ್ತು.

ದಾಖಲೆಗಳನ್ನು ಪರಿಶೀಲಿಸಿದ್ದ ನ್ಯಾಯ ಮಂಡಳಿಯು ಮಲ್ಲಿಕಾರ್ಜುನನ ತಂದೆ-ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ, ರೇಣುಕಾ ಮತ್ತು ಆಕೆಯ ಮಗುವಾದ ರವಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಅರ್ಜಿ ವಜಾ ಮಾಡಿರುವುದನ್ನು ಪ್ರಶ್ನಿಸಿ ರೇಣುಕಾ ಮತ್ತು ರವಿ, ಪರಿಹಾರ ಹೆಚ್ಚಳ ಕೋರಿ ಮಲ್ಲಿಕಾರ್ಜುನನ ಪೋಷಕರು ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಸ್ತೃತವಾಗಿ ಪರಿಶೀಲಿಸಿದ ಪೀಠವು “ರೇಣುಕಾ ಮತ್ತು ರವಿ ಅವರು ಮಲ್ಲಿಕಾರ್ಜುನನ ಪತ್ನಿ ಮತ್ತು ಪುತ್ರ ಎಂದು ಹೇಳಿಕೊಂಡಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸಲು ಯಾವುದೇ ದಾಖಲೆ ಸಲ್ಲಿಸಿಲ್ಲ. ಮಲ್ಲಿಕಾರ್ಜುನ ಅವರು 2007ರಲ್ಲಿ ಶೈಲಜಾ ಜೊತೆಗೆ ವಿವಾಹವಾಗುವುದಕ್ಕೂ ಮುನ್ನ, ತಾನು ಸಲ್ಲಿಸಿದ್ದ ಅಫಿಡವಿಟ್‌ವೊಂದರಲ್ಲಿ ರೇಣುಕಾ ತನ್ನ ಪತ್ನಿಯಾಗಿದ್ದು, ಆಕೆಯು 2006ರ ಆಗಸ್ಟ್‌ 8ರಂದು ಗಂಡು ಮಗು ರವಿಗೆ ಜನ್ಮ ನೀಡಿದ್ದಾಳೆ ಎಂದು ಘೋಷಿಸಿರುವ ದಾಖಲೆಯನ್ನು ಆಧರಿಸಿದ್ದಾರೆ. ಇದರ ಜೊತೆಗೆ ಮಲ್ಲಿಕಾರ್ಜುನನೊಂದಿಗೆ ಸಹ ಜೀವನ ನಡೆಸಿರುವುದಕ್ಕೆ ಪೂರಕವಾಗಿ 2012ರ ಮೇ 15ರಂದು ಪಡೆದಿರುವ ವಂಶವೃಕ್ಷವನ್ನು ಸಲ್ಲಿಸಿದ್ದಾರೆ. ಮಗುವಿನ ಶಾಲಾ ದಾಖಲಾತಿಯನ್ನು ಸಲ್ಲಿಸಲಾಗಿದ್ದು, ಇದರಲ್ಲಿ ಮಗು 2006ರ ಆಗಸ್ಟ್‌ 8ರಂದು ಜನಿಸಿದೆ ಎಂದು ಉಲ್ಲೇಖಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

“ಅಪಘಾತವಾದಲ್ಲಿ ಸಾವನ್ನಪ್ಪಿರುವ ಮಲ್ಲಿಕಾರ್ಜುನ ಮತ್ತು ರೇಣುಕಾ ಒಟ್ಟಿಗೆ ಜೀವಿಸುತ್ತಿದ್ದರು (ಲಿವ್‌ ಇನ್‌ ಸಂಬಂಧ) ಎಂಬುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. 1996ರಲ್ಲಿ ರೇಣುಕಾ ಅವರು ಕೃಷ್ಣಮೂರ್ತಿಗೆ ಮದುವೆಯಾಗಿದ್ದರು ಎಂಬುದರಲ್ಲಿ ವಿವಾದವಿಲ್ಲ. ಮಲ್ಲಿಕಾರ್ಜುನನೊಂದಿಗಿನ ಸಂಬಂಧದಿಂದಾಗಿ 2006ರಲ್ಲಿ ರವಿ ಜನಿಸಿದ್ದಾನೆ ಎಂಬುದು ರೇಣುಕಾ ವಾದವಾಗಿದೆ. 2006ರಲ್ಲಿ ಕೃಷ್ಣಮೂರ್ತಿ ಅವರಿಂದ ದೂರವಾಗಿದ್ದು, 2010ರಲ್ಲಿ ರೇಣುಕಾ ವಿಚ್ಚೇದನ ಪಡೆದಿದ್ದಾರೆ. ಇಲ್ಲಿ ಮಲ್ಲಿಕಾರ್ಜುನ ಮತ್ತು ರೇಣುಕಾ ಸಂಬಂಧವು ಅಕ್ರಮವಾಗಿದ್ದು, ಅದರ ಭಾಗವಾಗಿ ರವಿ ಜನಿಸಿದ್ದಾರೆ” ಎಂದು ಪೀಠ ವಿವರಿಸಿದೆ.

“ಮಲ್ಲಿಕಾರ್ಜುನ ಮತ್ತು ರೇಣುಕಾ ಲಿವ್‌ ಇನ್‌ ಸಂಬಂಧ ಹೊಂದಿದ್ದರು. ಅದಾಗ್ಯೂ, ಪತಿ ಕೃಷ್ಣಮೂರ್ತಿ ಅವರೊಂದಿಗೆ ರೇಣುಕಾ ಬಾಳ್ವೆ ಹೊಂದಿದ್ದರು. ಇತ್ತ ಮಲ್ಲಿಕಾರ್ಜುನ ಸಹ ಶೈಲಜಾ ಜೊತೆ ಬಾಳ್ವೆ ಹೊಂದಿದ್ದರು. ರೇಣುಕಾ ಮತ್ತು ಕೃಷ್ಣಮೂರ್ತಿ ಅವರ ವಿಚ್ವೇದನವಾದ ಬಳಿಕವೂ ಮಲ್ಲಿಕಾರ್ಜುನ ಮತ್ತು ರೇಣುಕಾ ವಿವಾಹವಾಗಿರಲಿಲ್ಲ. ಹೀಗಾಗಿ, ರೇಣುಕಾ ಪರಿಹಾರಕ್ಕೆ ಅರ್ಹವಾಗಿಲ್ಲ. ಕೆಲವು ದಾಖಲೆಗಳನ್ನು ಸೃಷ್ಟಿಸಿ, ತಾನು ಜೀವನಕ್ಕಾಗಿ ಮಲ್ಲಿಕಾರ್ಜುನನ್ನು ಆಧರಿಸಿದ್ದಾಗಿ ತಿಳಿಸಲು ಆಕೆ ಪ್ರಯತ್ನ ಮಾಡಿದ್ದಾರೆ. ಮಲ್ಲಿಕಾರ್ಜುನ ಅವರೊಂದಿಗಿನ ಸಂಬಂಧದಿಂದ ರವಿ ಜನಿಸಿದ್ದಾರೆ ಎಂಬುದನ್ನು ಹೊರತುಪಡಿಸಿ, ರೇಣುಕಾ ಯಾವುದೇ ರೀತಿಯಲ್ಲೂ ತನ್ನ ವಾದವನ್ನು ಸಾಬೀತುಪಡಿಸಿಲ್ಲ. ಆದ್ದರಿಂದ ಮಲ್ಲಿಕಾರ್ಜುನ ಮತ್ತು ರೇಣುಕಾ ಅವರ ನಡೆಗೆ ಮಗುವನ್ನು ದಂಡನೆಗೆ ಗುರಿಪಡಿಸಲಾಗದು. ಈ ನೆಲೆಯಲ್ಲಿ ನ್ಯಾಯ ಮಂಡಳಿಯ ಆದೇಶವನ್ನು ಮಾರ್ಪಾಡು ಮಾಡಬೇಕಿದೆ” ಎಂದು ಪೀಠವು ತನ್ನ ಆದೇಶವನ್ನು ಸಮರ್ಥಿಸಿದೆ.

“ಮಲ್ಲಿಕಾರ್ಜುನ ಅವರನ್ನು ರವಿ ಆಧರಿಸಿದ್ದು, ಈಗ ಆತ ತನ್ನ ತಾಯಿ ರೇಣುಕಾಳೊಂದಿಗೆ ಜೀವಿಸುತ್ತಿದ್ದಾನೆ. ಈ ನೆಲೆಯಲ್ಲಿ ಕಾನೂನು ರೀತಿಯಲ್ಲಿ ಪ್ರತಿನಿಧಿಯಾಗಿರುವ ಅಕ್ರಮ ಸಂಬಂಧದಿಂದ ಜನಿಸಿದ ಮಗುವು ಮೋಟಾರು ವಾಹನ ಕಾಯಿದೆ ಸೆಕ್ಷನ್‌ 166ರ ಅಡಿ ಪರಿಹಾರಕ್ಕೆ ಅರ್ಹ” ಎಂದು ನ್ಯಾಯಾಲಯ ವಿವರಿಸಿದೆ.

“ಮಲ್ಲಿಕಾರ್ಜುನನ ಮಗು ರವಿ ಮತ್ತು ಆತನ ತಂದೆ-ತಾಯಿ ವಿಮಾ ಪರಿಹಾರದ ಮೊತ್ತವಾದ 11,75,940 ರೂಪಾಯಿ, 33 ಸಾವಿರ ಅಂತಿಮ ಸಂಸ್ಕಾರದ ವೆಚ್ಚ ಹಾಗೂ ಪ್ರೀತಿ ಮತ್ತು ವಿಶ್ವಾಸದ ನಷ್ಟಕ್ಕಾಗಿ ತಲಾ 40 ಸಾವಿರದಂತೆ ಒಟ್ಟು 1.2 ಲಕ್ಷ ರೂಪಾಯಿ ಪಡೆಯಲು ಅರ್ಹವಾಗಿದ್ದಾರೆ. ಎಲ್ಲ ಕ್ರೋಢೀಕರಿಸಿ ಒಟ್ಟು 13,28,940 ರೂಪಾಯಿ ಪರಿಹಾರದ ಮೊತ್ತಕ್ಕೆ ಅರ್ಹರಾಗಿದ್ದಾರೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

Related Stories

No stories found.
Kannada Bar & Bench
kannada.barandbench.com