

ಎಲ್ಲಾ ನೋಟಿಸ್ ನಂತರದ ಹಾಗೂ ನಿಯಮಿತ ವಿಚಾರಣಾ ಪ್ರಕರಣಗಳಲ್ಲಿ ವಕೀಲರ ಮೌಖಿಕ ವಾದಗಳಿಗೆ ಗಡುವು ನಿಗದಿಪಡಿಸುವ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಸುಪ್ರೀಂ ಕೋರ್ಟ್ ಜಾರಿಗೆ ತಂದಿದೆ.
ಈ ಕ್ರಮ ನ್ಯಾಯಾಲಯದ ಕಾರ್ಯನಿರ್ವಹಣೆ ಸುಧಾರಿಸುವುದಕ್ಕೂ, ವಿವಿಧ ಪೀಠಗಳ ನಡುವೆ ಕೆಲಸದ ವೇಳೆಯನ್ನು ಸಮನಾಗಿ ಹಂಚಿಕೆ ಮಾಡುವುದಕ್ಕೂ ಸಹಕಾರಿಯಾಗಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನಿರ್ದೇಶನದಂತೆ ಡಿಸೆಂಬರ್ 29ರಂದು ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಸುತ್ತೋಲೆಯ ಪ್ರಕಾರ, ಹಿರಿಯ ವಕೀಲರು ಹಾಗೂ ವಾದ ಮಂಡಿಸುವ ವಕೀಲರು ಮೌಖಿಕ ವಾದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಈಗ ಮುಂಚಿತವಾಗಿಯೇ ತಿಳಿಸಬೇಕಾಗುತ್ತದೆ. ಈ ಕಾಲಮಿತಿಯನ್ನು ವಿಚಾರಣೆಗೆ ಕನಿಷ್ಠ ಒಂದು ದಿನ ಮುಂಚಿತವಾಗಿ ನ್ಯಾಯಾಲಯದ ಆನ್‌ಲೈನ್ ಹಾಜರಾತಿಯ ಸ್ಲಿಪ್ ಪಡೆಯುವ ಜಾಲತಾಣದ ಮೂಲಕ ಸಲ್ಲಿಸಬೇಕು.
ನ್ಯಾಯಾಲಯದ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಹಾಗೂ ನ್ಯಾಯಾಲಯದ ಕೆಲಸದ ಸಮಯವನ್ನು ಸಮನಾಗಿ ಹಂಚಿಕೆ ಮಾಡುವ ಉದ್ದೇಶದಿಂದ ಹಾಗೂ ತ್ವರಿತ ಮತ್ತು ಸಮರ್ಪಕ ನ್ಯಾಯನಿರ್ವಹಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಮುಂಚಿತವಾಗಿ ಸಲ್ಲಿಸಬೇಕಾದ ಕಾಲಮಿತಿಯ ಜೊತೆಗೆ, ವಾದ ಮಂಡಿಸುವ ವಕೀಲರು ಅಥವಾ ಹಿರಿಯ ವಕೀಲರು ಐದು ಪುಟಗಳಿಗೆ ಮಿತಿಗೊಳಿಸಿದ ಸಂಕ್ಷಿಪ್ತ ಲಿಖಿತ ವಾದ ಟಿಪ್ಪಣಿಗಳನ್ನು ವಿಚಾರಣೆಯ ದಿನಾಂಕಕ್ಕೆ ಕನಿಷ್ಠ ಮೂರು ದಿನಗಳ ಮೊದಲು ಸಲ್ಲಿಸುವುದನ್ನು ಕೂಡ ಸುತ್ತೋಲೆ ಕಡ್ಡಾಯಗೊಳಿಸಿದೆ.
ಈ ಟಿಪ್ಪಣಿಗಳನ್ನು ಅಡ್ವೊಕೇಟ್-ಆನ್-ರೆಕಾರ್ಡ್ ಅಥವಾ ನ್ಯಾಯಾಲಯ ನೇಮಕ ಮಾಡಿದ ಯಾವುದೇ ನೋಡಲ್ ವಕೀಲರ ಮೂಲಕ ಸಲ್ಲಿಸಬೇಕು. ಜೊತೆಗೆ, ಅದರ ಒಂದು ಪ್ರತಿಯನ್ನು ಪ್ರತಿವಾದಿಗಳಿಗೆ ನೀಡಬೇಕು.
“ನಿಗದಿಪಡಿಸಿದ ಕಾಲಮಿತಿಯನ್ನು ಎಲ್ಲಾ ವಕೀಲರು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಮೌಖಿಕ ವಾದವನ್ನು ಮುಕ್ತಾಯಗೊಳಿಸಬೇಕು,” ಎಂದು ತಿಳಿಸಲಾಗಿದೆ.
ಮುಂಚಿತವಾಗಿ ನಿಗದಿಪಡಿಸಿದ ಸಮಯ ಮಿತಿ ವ್ಯವಸ್ಥೆ ಪೀಠಗಳಿಗೆ ಕಲಾಪಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯಮಾಡಲಿದ್ದು, ಪ್ರತಿದಿನ ಹೆಚ್ಚಿನ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ವಿಚಾರಣೆ ನಡೆಸಲು ಸಾಧ್ಯವಾಗಲಿದೆ ಎನ್ನಲಾಗಿದೆ.