
ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಜನರನ್ನು ಪ್ರಚೋದಿಸುವುದು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆಯಡಿ (ಯುಎಪಿಎ) ಕಾನೂನುಬಾಹಿರ ಚಟುವಟಿಕೆ ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ತಿಳಿಸಿದೆ [ಬಂಡಿಪೋರಾ ಪೊಲೀಸ್ ಠಾಣೆ ಮೂಲಕ ಕೇಂದ್ರಾಡಳಿತ ಪ್ರದೇಶ ಸರ್ಕಾರ ಮತ್ತು ಅಮೀರ್ ಹಮ್ಜಾ ಇನ್ನಿತರರ ನಡುವಣ ಪ್ರಕರಣ].
ಭಯೋತ್ಪಾದನಾ ನಿಗ್ರಹ ಕಾಯಿದೆಯ ಸೆಕ್ಷನ್ 13(1) ರ ಅಡಿಯಲ್ಲಿ ಈ ಕೃತ್ಯಕ್ಕೆ ಶಿಕ್ಷೆ ಇದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಕುಮಾರ್ ಮತ್ತು ಸಂಜಯ್ ಪರಿಹಾರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
"ಪ್ರತಿವಾದಿಗಳು ಭಾರತದ ಒಕ್ಕೂಟದಿಂದ ಜಮ್ಮು ಕಾಶ್ಮೀರದ ಪ್ರತ್ಯೇಕತೆಗಾಗಿ ಹೋರಾಟಕ್ಕೆ ಕರೆ ನೀಡಿ ಪ್ರಚೋದಿಸಿರುವುದು ಕಾಯಿದೆಯ ಸೆಕ್ಷನ್ 13(1) ರ ಅಡಿಯಲ್ಲಿ ಶಿಕ್ಷಾರ್ಹ ಚಟುವಟಿಕೆಯಾಗಿರುವುದರಿಂದ ಈ ಆರೋಪಗಳು, ಸಿಆರ್‌ಪಿಸಿ ಸೆಕ್ಷನ್ 161ರ ಅಡಿಯಲ್ಲಿ ಸಾಕ್ಷಿಗಳು ನೀಡಿದ ಹೇಳಿಕೆಗಳೊಂದಿಗೆ, ಪ್ರಾಥಮಿಕವಾಗಿ ಆರೋಪಗಳನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆ- 1967 ರ ಸೆಕ್ಷನ್ 2(1)(o) ರಲ್ಲಿ ವ್ಯಾಖ್ಯಾನಿಸಿದಂತೆ ಕಾನೂನುಬಾಹಿರ ಚಟುವಟಿಕೆ ವ್ಯಾಪ್ತಿಗೆ ಬರುತ್ತವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಾರ್ಚ್ 20, 2015 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಬಂಡಿಪೋರಾದಲ್ಲಿ ಭಾಷಣ ಮಾಡಿದ್ದಕ್ಕಾಗಿ ಯುಎಪಿಎ ಅಡಿಯಲ್ಲಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಪೀಠವು ಈ ಅವಲೋಕನ ಮಾಡಿತು.
ಆರೋಪಿಗಳಾದ ಅಮೀರ್ ಹಮ್ಜಾ ಶಾ ಮತ್ತು ರಯೀಸ್ ಅಹ್ಮದ್ ಮೀರ್ ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವಂತೆ ಘೋಷಣೆ ಕೂಗಿದ್ದು ಭಾರತ ಆ ರಾಜ್ಯವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದರು ಎನ್ನಲಾಗಿತ್ತು.
ತಕ್ಷಣದ ಹಿಂಸಾಚಾರ ನಡೆಯದೆ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗಕ್ಕೆ ಕಾರಣವಾಗದೆ ಕೇವಲ ಘೋಷಣೆ ಕೂಗಿದ್ದರೆ ಅದು ಯುಎಪಿಎ ಅಡಿಯಲ್ಲಿ 'ಕಾನೂನುಬಾಹಿರ ಚಟುವಟಿಕೆ'ಯಾಗುವುದಿಲ್ಲ ಎಂದು ತಿಳಿಸಿದ್ದ ವಿಚಾರಣಾ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತ್ತು.
ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಘೋಷಣೆಗಳನ್ನು ಕೂಗಿದ್ದರೂ ಯಾವುದೇ ಹಿಂಸಾಚಾರ ನಡೆಯದ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬಲ್ವಂತ್ ಸಿಂಗ್ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ವಿಚಾರಣಾ ನ್ಯಾಯಾಲಯ ಅವಲಂಬಿಸಿತ್ತು.
ಆದರೆ ವಿಚಾರಣಾ ನ್ಯಾಯಾಲಯದ ತರ್ಕವನ್ನು ಒಪ್ಪದ ಹೈಕೋರ್ಟ್ ಬಲವಂತ್ ಸಿಂಗ್ ಪ್ರಕರಣ ದೇಶದ್ರೋಹದ ಅಪರಾಧಕ್ಕೆ ಸಂಬಂಧಿಸಿದೆ, ಯುಎಪಿಎಗೆ ಅಲ್ಲ ಎಂದು ಹೇಳಿತು.
"ಆ ಪ್ರಕರಣದ ಸನ್ನಿವೇಶಗಳು ವಿಚಾರಣಾ ನ್ಯಾಯಾಲಯದ ಮುಂದಿದ್ದ ಪ್ರಕರಣಕ್ಕಿಂತಲೂ ಸ್ಪಷ್ಟವಾಗಿ ಭಿನ್ನವಾಗಿದ್ದವು. ಐಪಿಸಿ ಸೆಕ್ಷನ್ 124-ಎ, 153-ಎ ಮತ್ತು 1967 ರ ಕಾಯಿದೆಯಲ್ಲಿ (ಯುಎಪಿಎ) ವ್ಯಾಖ್ಯಾನಿಸಲಾದ "ಕಾನೂನುಬಾಹಿರ ಚಟುವಟಿಕೆ" ಎಂಬ ಪದದ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ, ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತದೆ" ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಆದ್ದರಿಂದ ಆರೋಪಪಟ್ಟಿಗೆ ಮರುಜೀವ ನೀಡಿದ ಹೈಕೋರ್ಟ್ ಯುಎಪಿಎ ಸೆಕ್ಷನ್ 13ರ ಅಡಿಯಲ್ಲಿ ಆರೋಪ ನಿಗದಿಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತು.