ಇಂಡಿಯಾ ಜಸ್ಟೀಸ್ ವರದಿ: ಶೇ 70ರಷ್ಟಿದ್ದಾರೆ ವಿಚಾರಣಾಧೀನ ಕೈದಿಗಳು, ಒಟ್ಟು ಪ್ರಗತಿಯಲ್ಲಿ ಹಿಂದೆ ಬಿದ್ದ ಉತ್ತರಪ್ರದೇಶ

ನ್ಯಾಯಾಂಗ, ಕಾರಾಗೃಹ, ಪೊಲೀಸ್ ಹಾಗೂ ಕಾನೂನು ನೆರವಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಒದಗಿಸಲಾದ ಬಜೆಟ್, ಮಾನವ ಸಂಪನ್ಮೂಲ, ಮೂಲ ಸೌಕರ್ಯ, ಕಾರ್ಯಭಾರ, ನೇಮಕಾತಿ ವೈವಿಧ್ಯತೆ ವಿಷಯಗಳನ್ನು ಆಧರಿಸಿ ಅಧ್ಯಯನ ನಡೆದಿದೆ.
ಇಂಡಿಯಾ ಜಸ್ಟೀಸ್ ವರದಿ: ಶೇ 70ರಷ್ಟಿದ್ದಾರೆ ವಿಚಾರಣಾಧೀನ ಕೈದಿಗಳು, ಒಟ್ಟು ಪ್ರಗತಿಯಲ್ಲಿ ಹಿಂದೆ ಬಿದ್ದ ಉತ್ತರಪ್ರದೇಶ
Published on

ಇತ್ತೀಚೆಗೆ ಟಾಟಾ ಟ್ರಸ್ಟ್‌ ಮಾಡಿರುವ ಇಂಡಿಯಾ ಜಸ್ಟೀಸ್‌ ವರದಿ ದೇಶದ ನ್ಯಾಯಾಂಗ, ಕಾರಾಗೃಹ, ಪೊಲೀಸ್‌ ಹಾಗೂ ಕಾನೂನು ನೆರವಿಗೆ ಸಂಬಂಧಿಸಿದ ವಿಚಾರದಲ್ಲಿ ಹಲವು ವಾಸ್ತವಾಂಶಗಳನ್ನು ಬಯಲಿಗೆ ಎಳೆದಿದೆ.

ಸೆಂಟರ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌, ಕಾಮನ್‌ ಕಾಸ್‌, ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟೀವ್‌, ದಕ್ಷ್‌, ಟಿಸ್‌- ಪ್ರಯಾಸ್‌, ವಿಧಿ ಸೆಂಟರ್‌ ಹಾಗೂ ಹೌ ಇಂಡಿಯಾ ಲೀವ್ಸ್‌ ಸಹಯೋಗದಲ್ಲಿ ರೂಪಿಸಲಾದ ಈ ವರದಿ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳು ಒಂದು ಕೋಟಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ 7 ರಾಜ್ಯಗಳು, ನಾಲ್ಕು ರ‍್ಯಾಂಕೇತರ ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶದಲ್ಲಿ ಮಾಡಲಾದ ಅಧ್ಯಯನವನ್ನು ಆಧರಿಸಿದೆ. ನ್ಯಾಯಾಂಗ, ಕಾರಾಗೃಹ, ಪೊಲೀಸ್‌ ಹಾಗೂ ಕಾನೂನು ನೆರವಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಒದಗಿಸಲಾದ ಬಜೆಟ್‌, ಮಾನವ ಸಂಪನ್ಮೂಲ, ಮೂಲ ಸೌಕರ್ಯ, ಕಾರ್ಯಭಾರ, ವೈವಿಧ್ಯತೆ ವಿಷಯಗಳನ್ನು ಆಧರಿಸಿ ಅಧ್ಯಯನ ನಡೆದಿದೆ. ವರದಿಯ ಪ್ರಮುಖ ಅಂಶಗಳು ಹೀಗಿವೆ:

Also Read
ಐಜೆಆರ್‌ ವರದಿ ಬಿಡುಗಡೆ: ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಕುಸಿತ ಕಂಡ ಕರ್ನಾಟಕ, ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ

ಜಗತ್ತಿನಲ್ಲಿ ಭಾರತದ ಸ್ಥಾನ

  • ಜಾಗತಿಕವಾಗಿ ಕಾನೂನಿನ ಆಳ್ವಿಕೆಗೆ ಸಂಬಂಧಿಸಿದಂತೆ 2019ರಲ್ಲಿ 68ನೇ ಸ್ಥಾನದಲ್ಲಿದ್ದ ಭಾರತ 2020ನೇ ಸಾಲಿನಲ್ಲಿ 69ನೇ ಸ್ಥಾನಕ್ಕೆ ಕುಸಿದಿದೆ.

  • ಸಿವಿಲ್‌ ನ್ಯಾಯದಾನ ಕ್ಷೇತ್ರದಲ್ಲಿ 111ನೇ ಸ್ಥಾನದಿಂದ 114ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

  • ಕ್ರಿಮಿನಲ್‌ ನ್ಯಾಯ ವಿತರಣೆ ವಲಯದಲ್ಲಿ 77ನೇ ಸ್ಥಾನದಿಂದ 78ನೇ ಸ್ಥಾನಕ್ಕೆ ಇಳಿಮುಖವಾಗಿದೆ.

  • ಜಾಗತಿಕ ಶಾಂತಿ ಸೂಚ್ಯಂಕದಲ್ಲಿ 2019ರಲ್ಲಿ 141ನೇ ಸ್ಥಾನದಲ್ಲಿದ್ದ ಭಾರತ 2020ನೇ ಸಾಲಿನಲ್ಲಿ 139ನೇ ಸ್ಥಾನಕ್ಕೆ ಜಿಗಿದಿದೆ.

  • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 131ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು 19ನೇ ಸಾಲಿನಲ್ಲಿ 129ನೇ ಸ್ಥಾನ ಪಡೆದಿತ್ತು.

  • ಲಿಂಗ ತಾರತಮ್ಯ ಕ್ಷೇತ್ರದಲ್ಲಿ 112ನೇ ಸ್ಥಾನ, ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 51ನೇ ಸ್ಥಾನ ಪಡೆದಿದೆ.

  • ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ 117ನೇ ಸ್ಥಾನ ಪಡೆಯಲಷ್ಟೇ ಶಕ್ಯವಾಗಿರುವ ಭಾರತ ಇನ್ನೂ 18.7ರಷ್ಟು ಅಂತರ ಹೊಂದಿದೆ. ಇದು ಭಾರೀ ಕಳವಳಕಾರಿ ವಿಷಯ ಎಂದು ವರದಿ ಹೇಳುತ್ತದೆ.

  • ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಒಟ್ಟು 180 ದೇಶಗಳಲ್ಲಿ ಭಾರತದ ಸ್ಥಾನ 142.

  • ಏಷ್ಯಾದಲ್ಲಿಯೇ ಅತಿಹೆಚ್ಚು ( ಶೇ 39ರಷ್ಟು) ಲಂಚಗುಳಿತನ ಭಾರತದಲ್ಲಿದೆ.

  • ಕಳೆದ ಹನ್ನೆರಡು ತಿಂಗಳುಗಳಲ್ಲಿ ಶೇ 42 ಮಂದಿ ಪೊಲೀಸರಿಗೆ ಲಂಚ ನೀಡಿದ್ದಾರೆ.

ನ್ಯಾಯಾಂಗ, ಕಾರಾಗೃಹ, ಪೊಲೀಸ್‌ ಹಾಗೂ ಕಾನೂನು ನೆರವು ಕ್ಷೇತ್ರಗಳಿಗೆ ಸಂಬಂಧಿಸಿದ ಒಟ್ಟು ಪ್ರಗತಿ

ನ್ಯಾಯದಾನದ ವಿಚಾರದಲ್ಲಿ ದೊಡ್ಡ ರಾಜ್ಯಗಳಲ್ಲಿ ಮಹಾರಾಷ್ಟ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ, ಎರಡನೇ ಬಾರಿಯೂ ಅದು ಮುಂಚೂಣಿ ಸ್ಥಾನ ಪಡೆದಿದೆ. ತಮಿಳುನಾಡು ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿವೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಲಭಿಸಿದೆ.

ಸಣ್ಣ ರಾಜ್ಯಗಳಲ್ಲಿ ತ್ರಿಪುರ, ಸಿಕ್ಕಿಂ ಗೋವಾ ಮೊದಲ ಮೂರು ಸ್ಥಾನದಲ್ಲಿದ್ದರೆ ಮೇಘಾಲಯ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಇತರೆ ಪ್ರಮುಖ ಶೋಧಗಳು

  • ಸಿಕ್ಕಿಂ ಹೈಕೋರ್ಟ್‌ ಅತಿಹೆಚ್ಚು ಮಹಿಳಾ ನ್ಯಾಯಮೂರ್ತಿಗಳನ್ನು (ಶೇ 33.3) ಹೊಂದಿದ್ದರೆ ಬಿಹಾರ, ಮಣಿಪುರ, ಮೇಘಾಲಯ, ಉತ್ತರಾಖಂಡ್‌, ತ್ರಿಪುರ ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳೇ ಇಲ್ಲ.

  • ದೇಶದ ಪೊಲೀಸ್‌ ವ್ಯವಸ್ಥೆಯಲ್ಲಿ ಮಹಿಳೆಯರ ನೇಮಕಾತಿ ಕಡಿಮೆ ಇದ್ದರೂ ಕಳೆದ ಕೆಲ ವರ್ಷಗಳಿಂದ ಅವರ ನೇಮಕಾತಿಯಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ.

  • ದೇಶಾದ್ಯಂತ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಹೆಚ್ಚೂ ಕಡಿಮೆ ನಿಷ್ಕ್ರಿಯವಾಗಿದೆ.

  • ಕಾರಾಗೃಹಗಳಿಗೆ ಅನುದಾನ ನೀಡಲು ರಾಜ್ಯಗಳು ಕಡಿಮೆ ಆಸಕ್ತಿ ತೋರುತ್ತಿವೆ.

  • ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಶೇ 114 ರಿಂದ ಶೇ 119ಕ್ಕೆ ಹೆಚ್ಚಳವಾಗಿದೆ.

  • ಶೇ 70ರಷ್ಟು ಸೆರೆವಾಸಿಗಳು ವಿಚಾರಣಾಧೀನ ಕೈದಿಗಳಾಗಿದ್ದಾರೆ.

  • ಕಾನೂನು ಸಲಹಾ ಸಂಸ್ಥೆಗಳಿಗೆ ಸಂಪನ್ಮೂಲ ಕೊರತೆ ಮತ್ತು ಅಪಮೌಲ್ಯದ ಕೊರತೆ ಕಾಡುತ್ತಿದೆ.

ಇನ್ನು ವರದಿಗೆ ಮುನ್ನುಡಿ ಬರೆದಿರುವ ಹಾಗೂ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಭಾಷಣ ಮಾಡಿದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ನ್ಯಾಯಾಲಯಗಳಲ್ಲಿ ಬಾಕಿ ಉಳಿದ ಪ್ರಕರಣಗಳು, ನ್ಯಾಯಾಂಗಕ್ಕೆ ದೊರೆಯುತ್ತಿರುವ ಅನುದಾನ ಇತ್ಯಾದಿ ವಿವರಗಳ ಬಗ್ಗೆ ಗಮನ ಸೆಳೆದಿದ್ದಾರೆ.

ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4 ಕೋಟಿ ಮೀರಿದೆ. ಅವುಗಳ ಸಂಖ್ಯೆ 2.5 ಕೋಟಿ ಇದ್ದಾಗಲೇ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. 4 ಕೋಟಿ ಪ್ರಕರಣ ಎಂಬುದು ಬೃಹತ್ ಪ್ರಮಾಣವಾಗಿದೆ. ಕೋವಿಡ್‌ ಸಾಂಕ್ರಾಮಿಕ ಯಾವುದೇ ಸಹಾಯ ಮಾಡಿಲ್ಲ. ಸಂಖ್ಯೆ ಹೆಚ್ಚಾಗಲಿದೆ. ಇವೆಲ್ಲವನ್ನೂ ಹೇಗೆ ನಿಭಾಯಿಸಲಿದ್ದೇವೆ ಎನ್ನುವುದನ್ನು ಕಾದುನೋಡಬೇಕಿದೆ ಎಂದಿದ್ದಾರೆ.

13 ನೇ ಹಣಕಾಸು ಆಯೋಗದ ಅಡಿಯಲ್ಲಿ ನ್ಯಾಯಾಂಗಕ್ಕೆ 5,000 ಕೋಟಿ ರೂ ಒದಗಿಸಲಾಗಿದೆ. ಮತ್ತೊಂದೆಡೆ ಐದು ವರ್ಷಗಳಲ್ಲಿ ಖರ್ಚು ಮಾಡಿದ ಮೊತ್ತ ಸುಮಾರು ಶೇ.20 ರಷ್ಟಿದೆ. 14 ನೇ ಹಣಕಾಸು ಆಯೋಗವು 10,000 ಕೋಟಿ ರೂ ಅನುದಾನ ನಿಗದಿಪಡಿಸಿದೆ. ಸರ್ಕಾರ ಸಾಕಷ್ಟು ಹಣ ನೀಡುತ್ತಿದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ ಸಮಸ್ಯೆಗೆ ಪರಿಹಾರ ರೂಪವಾಗಿರುವ ತಂತ್ರಜ್ಞಾನ, ಕೇಸ್ ಮ್ಯಾನೇಜ್ಮೆಂಟ್ ತರಬೇತಿಯೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗಮನ ಸೆಳೆದಿದ್ದಾರೆ.

Kannada Bar & Bench
kannada.barandbench.com