ವಸುದೈವ ಕುಟುಂಬಕಂನಿಂದ 'ಒಬ್ಬ ವ್ಯಕ್ತಿ-ಒಂದು ಕುಟುಂಬ' ಪರಿಕಲ್ಪನೆಯತ್ತ ದೇಶ ಸಾಗಿದೆ: ಸುಪ್ರೀಂ ವಿಷಾದ

ಹೆತ್ತವರು ತಮ್ಮ ಮಗನನ್ನು ಮನೆಯಿಂದ ಹೊರಕಳಿಸುವಂತೆ ನೀಡಲಾಗಿದ್ದ ಆದೇಶ ರದ್ದುಗೊಳಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
Supreme Court
Supreme Court
Published on

ವಸುಧೈವ ಕುಟುಂಬಕಂ (ಇಡೀ ಜಗವೇ ಒಂದು ಕುಟುಂಬ) ಎಂಬ ಮನೋಧರ್ಮವನ್ನು ದೇಶ ಎತ್ತಿಹಿಡಿದಿದ್ದರೂ ಆ ನಂಬಿಕೆಯನ್ನು ಜಗತ್ತಿಗೆ ಹರಡುವುದಿರಲಿ ನಮ್ಮ ಸ್ವಂತ ಕುಟುಂಬಗಳಲ್ಲಿಯೇ ಇಂದು ಏಕತೆ ಕಾಪಾಡಿಕೊಳ್ಳಲು ಹೆಣಗುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್‌ ವಿಷಾದ ವ್ಯಕ್ತಪಡಿಸಿದೆ [ಸಮತೋಲಾ ದೇವಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿರುವ ತಮ್ಮ ಕುಟುಂಬದ ಮನೆಯಿಂದ ತಮ್ಮ ಹಿರಿಯ ಮಗ ಕೃಷ್ಣ ಕುಮಾರ್ ಅವರನ್ನು ಹೊರಹಾಕುವಂತೆ ಕೋರಿ 68 ವರ್ಷದ ಸಮತೋಲಾ ದೇವಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ  ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ಈ ಮಾತುಗಳನ್ನು ಹೇಳಿತು.

Also Read
ಕ್ಷಿಪ್ರ ರೀತಿಯಲ್ಲಿ ಕುಟುಂಬ ವ್ಯವಸ್ಥೆ ಕ್ಷಯ: ರಕ್ಷಣೆಗೆ ಧಾವಿಸುವಂತೆ ನ್ಯಾಯಾಲಯಗಳಿಗೆ ಮದ್ರಾಸ್ ಹೈಕೋರ್ಟ್ ಕರೆ

ನ್ಯಾಯಾಲಯವ ತನ್ನ ಅದೇಶದಲ್ಲಿ, "ಭಾರತದಲ್ಲಿ 'ವಸುದೈವ ಕುಟುಂಬಕಂ' ಎನ್ನುವ ಪರಿಕಲ್ಪನೆಯಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಇದರರ್ಥ ಜಗತ್ತೇ ಒಂದು ಕುಟುಂಬ ಎನ್ನುವುದಾಗಿದೆ. ವಿಪರ್ಯಾಸವೆಂದರೆ, ಇಂದು ಜಗತ್ತನ್ನು ಒಂದು ಕುಟುಂಬವಾಗಿ ಕಾಣುವುದಿರಲಿ, ತಮ್ಮ ಸ್ವಂತ ಕುಟುಂಬದಲ್ಲಿಯೇ ಒಗ್ಗಟ್ಟನ್ನು ಉಳಿಸಿಕೊಳ್ಳಲಾಗುತ್ತಿಲ್ಲ. 'ಕುಟುಂಬ' ಎನ್ನುವುದರ ಪರಿಕಲ್ಪನೆಯೇ ನಾಶವಾಗಿದೆ, ನಾವು ಇಂದು 'ಒಬ್ಬ ವ್ಯಕ್ತಿ - ಒಂದು ಕುಟುಂಬ' ಎನ್ನುವ ಹಂತಕ್ಕೆ ತಲುಪಿದ್ದೇವೆ, ಎಂದು ವಿಷಾದಿಸಿದೆ.

ಹಿನ್ನೆಲೆ: ದೇವಿ ಮತ್ತು ಅವರ ಮೃತ ಪತಿ ಕಲ್ಲು ಮಾಲ್‌ ಅವರು ಸುಲ್ತಾನ್‌ಪುರದಲ್ಲಿ  ಮೂರು ಮಳಿಗೆ ಇರುವ ಮನೆ ಹೊಂದಿದ್ದರು. ಅವರಿಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಪೋಷಕರು ಮತ್ತು ಅವರ ಪುತ್ರರ ನಡುವೆ ಅದರಲ್ಲಿಯೂ ಕುಟುಂಬದ ವ್ಯವಹಾರ ನೋಡಿಕೊಳ್ಳುತ್ತಿದ್ದ ಕೃಷ್ಣಕುಮಾರ್‌ ಅವರ ನಡುವೆ ವಿವಾದಗಳೆದ್ದವು.

ಕಲ್ಲು ಮಾಲ್ ಅವರು 2014 ರಲ್ಲಿ, ತಮ್ಮ ಪುತ್ರ ಕೃಷ್ಣ ಕುಮಾರ್‌ ವಿರುದ್ಧ ದೌರ್ಜನ್ಯದ ಆರೋಪ ಹೊರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 2017ರಲ್ಲಿ ಅವರಿಗೆ ಇಬ್ಬರು ಗಂಡು ಮಕ್ಕಳಾದ ಕೃಷ್ಣ ಕುಮಾರ್ ಮತ್ತು ಜನಾರ್ದನ್ ಸಮಾನವಾಗಿ ಮಾಸಿಕ  ₹8,000 ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು.

ಆದರೆ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯಡಿ ತಮ್ಮ ಮನೆ ತೆರವುಗೊಳಿಸುವಂತೆ ತಮ್ಮ ಪುತ್ರ ಕೃಷ್ಣ ಕುಮಾರ್‌ಗೆ ಸೂಚಿಸಬೇಕು ಎಂದು ಕೋರಿ 2019 ರಲ್ಲಿ, ಕಲ್ಲು ಮಾಲ್ ಮತ್ತು ಅವರ ಪತ್ನಿ ಅರ್ಜಿ ಸಲ್ಲಿಸಿದರು. ಅಂತೆಯೇ ಪೋಷಕರ ಅನುಮತಿ ಇಲ್ಲದೆ ಮನೆಯ ಯಾವುದೇ ಭಾಗವನ್ನು ಕೃಷ್ಣಕುಮಾರ್‌ ಅತಿಕ್ರಮಿಸಿಕೊಳ್ಳುವಂತಿಲ್ಲ ಎಂದು ಜೀವನಾಂಶ ಮಂಡಳಿ ಆದೇಶಿಸಿತಾದರೂ ಅವರು ಮನೆ ತೊರೆಯಬೇಕೆಂದು ಹೇಳಲಿಲ್ಲ.

ಈ ಹಿನ್ನೆಲೆಯಲ್ಲಿ ಕೃಷ್ಣಕುಮಾರ್‌ ತಂದೆ ತಾಯಿ  ಹೈಕೋರ್ಟ್‌ ಮೆಟ್ಟಿಲೇರಿದರು. ಆದರೆ ನ್ಯಾಯಾಲಯ ಅವರ ಮನವಿ ರದ್ದುಗೊಳಿಸಿತು.

Also Read
ವೃದ್ಧ ತಂದೆಯಿಂದ ಹೇಬಿಯಸ್‌ ಕಾರ್ಪಸ್‌ ಅರ್ಜಿ: ಕುಟುಂಬ ಸಮೇತ ಹಾಜರಾದ ಪುತ್ರ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗ, ಕಲ್ಲು ಮಾಲ್ ನಿಧನರಾದರು. ಅವರ ಮರಣದ ನಂತರ, ಅವರ ಪತ್ನಿ ಕಾನೂನು ಪ್ರಕ್ರಿಯೆ ಮುಂದುವರೆಸಿದರು. ನಂತರ ತಮ್ಮ ಮಗನನ್ನು ಹೊರಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ಆ ಮನೆ ತನ್ನ ದಿವಂಗತ ಪತಿಯ ಸ್ವಯಾರ್ಜಿತ ಆಸ್ತಿಯಾಗಿದ್ದು, ಅಲ್ಲಿ ವಾಸಿಸಲು ಕೃಷ್ಣ ಕುಮಾರ್‌ಗೆ ಯಾವುದೇ ಹಕ್ಕಿಲ್ಲ ಎಂದು ವಾದಿಸಿದರು.

ಇದೀಗ ಹೈಕೋರ್ಟ್‌ ಆದೇಶ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದು ಸೂಕ್ತವಾಗಿಯೇ ಇದೆ ಎಂದಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Samtola_Devi_v__State_of_Uttar_Pradesh___Others
Preview
Kannada Bar & Bench
kannada.barandbench.com