ನ್ಯಾಯಾಧೀಶರಿಗೆ ವಕೀಲಿಕೆಯ ಅನುಭವ ಇಲ್ಲದಿದ್ದರೆ ನ್ಯಾಯಾಂಗ ಪ್ರಕ್ರಿಯೆ ವಿಳಂಬ ಸಾಧ್ಯತೆ: ಸುಪ್ರೀಂ ಕದ ತಟ್ಟಿದ ಬಿಸಿಐ

ಅಧೀನ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿಯಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ನ್ಯಾಯಾಧೀಶರಿಗೆ ವಕೀಲಿಕೆಯಲ್ಲಿ ಅನುಭವ ಇಲ್ಲದಿರುವುದು ಪ್ರಾಥಮಿಕ ಮತ್ತು ಪ್ರಮುಖ ಕಾರಣ ಎಂದು ಬಿಸಿಐ ಹೇಳಿದೆ.
Bar Council of India
Bar Council of India

ನ್ಯಾಯಾಂಗ ಸೇವಾ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕನಿಷ್ಠ 3 ವರ್ಷ ವಕೀಲಿಕೆಯ ಅನುಭವ ಹೊಂದಿರಬೇಕು ಎಂಬ ನಿಲುವಿನ ಪರವಾಗಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

ತನ್ನನ್ನು ಪ್ರಕರಣದಲ್ಲಿ ಪಕ್ಷಕಾರನನ್ನಾಗಿಸಿಕೊಳ್ಳುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ನಿಯಂತ್ರಕ ಸಂಸ್ಥೆಯಾಗಿರುವ ಬಿಸಿಐ “ನ್ಯಾಯವಾದಿ ವರ್ಗದ ಅನುಭವ ಹೊಂದಿರದ ನ್ಯಾಯಾಂಗ ಅಧಿಕಾರಿಗಳು ಬಹಳಷ್ಟು ಬಾರಿ ಪ್ರಕರಣಗಳನ್ನು ನಿಭಾಯಿಸುವಲ್ಲಿ ಅಸಮರ್ಥರು ಮತ್ತು ನೈಪುಣ್ಯ ಇಲ್ಲದವರಾಗಿರುತ್ತಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಪ್ರಕರಣಗಳ ವಿಲೇವಾರಿಯಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ಅನನುಭವ ಕೂಡ ಪ್ರಾಥಮಿಕ ಮತ್ತು ಪ್ರಮುಖ ಕಾರಣ" ಎಂದು ಹೇಳಿದೆ.

Also Read
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 30-12-2020
Also Read
ಕಾನೂನು ಪದವಿ ಪಡೆಯಲು ಬಿಸಿಐ ಅಧಿಸೂಚನೆಯ ವಿರುದ್ಧ 77 ವರ್ಷದ ಮಹಿಳೆಯ ಕುತೂಹಲಕಾರಿ ಕಾನೂನು ಸಮರ!

“ಅಧೀನ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ವಕೀಲಿಕೆಯ ಅನನುಭವವೂ ಒಂದು ಪ್ರಾಥಮಿಕ ಮತ್ತು ಪ್ರಮುಖ ಕಾರಣವಾಗಿದೆ. ಅನುಭವಿ ನ್ಯಾಯಾಂಗ ಅಧಿಕಾರಿಗಳು ಪ್ರಕರಣಗಳನ್ನು ಹೆಚ್ಚು ಕ್ಷಿಪ್ರವಾಗಿ ಗ್ರಹಿಸಿ ವಿಲೇವಾರಿ ಮಾಡಬಹುದು. ಇದರಿಂದ ಪರಿಣಾಮಕಾರಿ ಆಡಳಿತ ಸಾಧ್ಯವಾಗುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಹೊಸದಾಗಿ ಕಾನೂನು ಪದವಿ ಪಡೆದವರು ಕೂಡ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಹಾಜರಾಗಲು ದೇಶದೆಲ್ಲೆಡೆ ಅವಕಾಶ ಇದೆ.

ಆಂಧ್ರಪ್ರದೇಶದಲ್ಲಿ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆ ಬರೆಯಲು ಮೂರು ವರ್ಷ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಎಂದು ಅಲ್ಲಿನ ಸರ್ಕಾರ ಇತ್ತೀಚೆಗೆ ನಿಯಮ ರೂಪಿಸಿತ್ತು. ಇದನ್ನು ಪ್ರಶ್ನಿಸಿ ರೇಗಲಗಡ್ಡ ವೆಂಕಟೇಶ್‌ ಎಂಬುವವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜೆಕಾಲದ ಪೀಠ ಡಿ. 30ರಂದು ಅರ್ಜಿ ಸಂಬಂಧ ನೋಟಿಸ್ ನೀಡಿತ್ತು ಆದರೆ 2007ರ ಆಂಧ್ರಪ್ರದೇಶ ರಾಜ್ಯ ನ್ಯಾಯಾಂಗ ಸೇವಾ ನಿಯಮಗಳ ನಿಯಮ 5 (2) (ಎ) (ಐ)ಗೆ ತಡೆ ನೀಡಲು ನಿರಾಕರಿಸಿತ್ತು.

2002ರ ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತಿತರರು ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನ ಸ್ಪಷ್ಟ ಉಲ್ಲಂಘನೆ ಇದು ಎಂದು ಅರ್ಜಿದಾರ ವೆಂಕಟೇಶ್‌ ಮೇಲ್ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಮೂರು ವರ್ಷ ವಕೀಲಿಕೆಯ ಅನುಭವ ಹೊಂದಿರಬೇಕಾದ ಅಗತ್ಯವನ್ನು ಪರಿಗಣಿಸಿರಲಿಲ್ಲ. ಆದರೆ ಬಿಸಿಐ ಈಗ ಈ ಆದೇಶಕ್ಕೆ ಮಾರ್ಪಾಡು ಮಾಡುವಂತೆ ಕೋರಿದೆ.

Kannada Bar & Bench
kannada.barandbench.com