
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅಗೌರವಯುತ ರೀತಿಯಲ್ಲಿ ಚಿತ್ರಿಸಿದ ಕಲಾವಿದ ಹೇಮಂತ್ ಮಾಳವೀಯ ಅವರ ವ್ಯಂಗ್ಯಚಿತ್ರವು ಪ್ರಚೋದನಕಾರಿ ಹಾಗೂ ಅಪ್ರಬುದ್ಧತೆಯಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ [ಹೇಮಂತ್ ಮಾಳವೀಯ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ] .
ಮಧ್ಯಪ್ರದೇಶ ಹೈಕೋರ್ಟ್ ಮಾಳವೀಯ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠದೆದುರು ನಡೆಯಿತು.
ವ್ಯಂಗ್ಯಚಿತ್ರ ಪ್ರಚೋದನಕಾರಿಯಾಗಿದ್ದು, ಅಪ್ರಬುದ್ಧತೆಯಿಂದ ಕೂಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಟೀಕಿಸಿತು. “ಈಗಲೂ ಅವರಿಗೆ ಪ್ರಬುದ್ಧತೆ ಬಂದಿಲ್ಲ. ಅಲ್ಲದೆ ಪ್ರಚೋದನಕಾರಿಯಾಗಿದೆ ಕೂಡ” ಎಂದು ಅದು ಹೇಳಿತು.
ಮಾಳವಿಯಾ ಅವರನ್ನು ಪ್ರತಿನಿಧಿಸಿದ್ದ, ವಕೀಲೆ ವೃಂದಾ ಗ್ರೋವರ್ "(ಕಾರ್ಟೂನ್ ಇರುವ) ಪೋಸ್ಟ್ ಅಳಿಸಲಾಗಿದೆ... ಅವರಿಗೆ ವಯಸ್ಸು 50 ವರ್ಷ ದಾಟಿದೆ. ಆ ಪೋಸ್ಟ್ ಅಪರಾಧವೆನಿಸಲು ಕಾರಣವಾಗದು. ಇದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರ" ಎಂದರು. ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಆಕ್ಷೇಪಿಸಿದರು.
ಪ್ರಕರಣವನ್ನು ಇನ್ನಷ್ಟು ಆಲಿಸುವುದಾಗಿ ನ್ಯಾಯಾಲಯ ಅಂತಿಮವಾಗಿ ನುಡಿಯಿತು. ಕಳೆದ ಮೇನಲ್ಲಿ ಮಾಳವೀಯ ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಸದಸ್ಯರೊಬ್ಬರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರ್‌ಎಸ್‌ಎಸ್ ಮುಖಂಡರೊಬ್ಬರು ದೂರು ಸಲ್ಲಿಸಿದ್ದರು.
ಮಾಳವೀಯ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಂಡಿದ್ದು ಚಿತ್ರ ಬರೆಯುವಾಗ ವಿವೇಚನೆ ಬಳಸಬೇಕಿತ್ತು ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರ ಪೀಠ ಜುಲೈ 3ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿತ್ತು.
ವ್ಯಂಗ್ಯಚಿತ್ರಕಾರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಮೀರಿದ್ದು, ಅವರಿಗೆ ತಮ್ಮ ಮಿತಿಯ ಅರಿವಿಲ್ಲವಾಗಿದೆ ಎಂದಿದ್ದ ನ್ಯಾಯಾಲಯ ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ವ್ಯಂಗ್ಯಚಿತ್ರದಲ್ಲಿ ದೇಶದ ಪ್ರಧಾನ ಮಂತ್ರಿಯೊಂದಿಗೆ ಆರ್ ಎಸ್‌ಎಸ್ ಹಿಂದೂ ಸಂಘಟನೆಯನ್ನು ಚಿತ್ರಿಸಿರುವ ಅರ್ಜಿದಾರರ ನಡೆ ಮತ್ತು ಅದಕ್ಕೆ ನೀಡಲಾಗಿರುವ ಹೇಳಿಕೆಯಲ್ಲಿ ಹಿಂದೂ ದೈವ ಶಿವನ ಹೆಸರನ್ನು ಅನಗತ್ಯವಾಗಿ ಎಳೆದು ತಂದಿರುವುದು ಸಂವಿಧಾನದ 19(1) (ಎ) ವಿಧಿಯಡಿಯಲ್ಲಿ ಪ್ರತಿಪಾದಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಪೂರ್ಣ ದುರುಪಯೋಗವಲ್ಲದೆ ಬೇರೇನೂ ಅಲ್ಲ. ಇದು ದೂರುದಾರರು ವಾದಿಸಿದಂತೆ ಅಪರಾಧದ ವ್ಯಾಖ್ಯೆಯಡಿ ಬರುತ್ತದೆ ಎಂದು ಏಕಸದಸ್ಯ ಪೀಠ ಹೇಳಿತ್ತು.
ಶಿವನನ್ನು ಕುರಿತ ಅವಹೇಳನಕಾರಿ ಸಾಲುಗಳಿರುವುದರಿಂದ ವ್ಯಂಗ್ಯಚಿತ್ರ ಇನ್ನಷ್ಟು ವಿಚಲಿತಗೊಳಿಸುತ್ತದೆ. ವ್ಯಂಗ್ಯಚಿತ್ರವನ್ನು ಬೇರೆಯವರು ಬಳಸಲು ಅವರು ಪ್ರಚೋದಿಸಿರುವುದರಿಂದ ಇದು ಸದಭಿರುಚಿಯಿಂದಾಗಲಿ ಅಥವಾ ಉತ್ತಮ ಆಸ್ಥೆಯಿಂದಾಗಲಿ ರೂಪಿತಗೊಂಡಿದೆ ಎನಿಸದು ಎಂದು ಅದು ಹೇಳಿತ್ತು.
ಮಾಳವೀಯ ಅವರು ತಮ್ಮ ಅರ್ಜಿಯಲ್ಲಿ, ಈ ವರ್ಷದ ಮೇ 1 ರಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಜಾತಿ ಜನಗಣತಿಯು ವಕ್ಫ್ ಮತ್ತು ಪಹಲ್ಗಾಮ್‌ನಂತಹ ಸಮಸ್ಯೆಗಳಿಂದ ಸಾರ್ವಜನಿಕರನ್ನು ಬೇರೆಡೆಗೆ ಸೆಳೆಯುವ ಒಂದು ಸಾಧನವಾಗಿದೆ" ಎಂದು ಬರೆದು ತಮ್ಮ ಈ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ತಮ್ಮ ಹಳೆಯ ವ್ಯಂಗ್ಯಚಿತ್ರವೊಂದನ್ನು ಈ ರೀತಿ ಬಳಸಲಾಗಿದೆ ಎಂದು ತಿಳಿದ ನಂತರ, ಈ ಕುರಿತು ತಾವು ಪ್ರತಿಕ್ರಿಯಿಸಿ ಸಾರ್ವಜನಿಕರು ತಮ್ಮ ಹೆಸರು ಮತ್ತು ಅವರು ಹೊಂದಿರಬಹುದಾದ ಯಾವುದೇ ವೈಯಕ್ತಿಕ ಅಭಿಪ್ರಾಯಗಳು ಅಥವಾ ಸಾಮಾಜಿಕ-ರಾಜಕೀಯ ಕಾಮೆಂಟ್‌ಗಳೊಂದಿಗೆ ತನ್ನ ವ್ಯಂಗ್ಯ ಚಿತ್ರಗಳನ್ನು ಬಳಸಲು ಸ್ವತಂತ್ರರು ಎಂದು ತೋರಿಸಲು ಮಾತ್ರ ಅದನ್ನು ಹಂಚಿಕೊಂಡಿದ್ದೆ ಎಂದ ಅರ್ಜಿಯಲ್ಲಿ ವಿವರಿಸಿದ್ದಾರೆ.
ತಮ್ಮ ವ್ಯಂಗ್ಯಚಿತ್ರಗಳು ಸಾರ್ವಜನಿಕ ಒಳಿತಿನಿಂದ ಕೂಡಿದ್ದು ಅದು ತಮ್ಮ ಕೆಲಸದ ಅಂತಿಮ ರಕ್ಷಕರಾದ ಸಾರ್ವಜನಿಕರಿಗೆ ಸಮರ್ಪಿತವಾಗಿದೆ. ಆದ್ದರಿಂದ ಅವುಗಳನ್ನು ಜನತೆ ತಮ್ಮದೇ ಆದ ರೀತಿಯಲ್ಲಿ ಬಳಸಬಹುದು ಎಂದು ಅವರು ಹೇಳಿದ್ದಾರೆ.
ಪ್ರಕರಣದ ವಿಚಾರಣೆ ನಾಳೆ ಮುಂದುವರೆಯಲಿದೆ.