ರಾಜ್ಯ ಸರ್ಕಾರದ ಆದೇಶಕ್ಕೆ ಸಿಎಟಿ ತಡೆ; ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ ರವಿ ಚನ್ನಣ್ಣನವರ್ ಮುಂದುವರಿಕೆ

ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಆರು ತಿಂಗಳು ಆಗದಿದ್ದರೂ ಪ್ರಮುಖವಾಗಿ ಹುದ್ದೆ ತೋರಿಸದೇ ಹಾಗೂ ಯಾವುದೇ ಕಾರಣ ನೀಡದೆ ವರ್ಗಾವಣೆ ಮಾಡಲಾಗಿದೆ ಎನ್ನುವುದು ರವಿ ಡಿ. ಚನ್ನಣ್ಣನವರ್ ಆಕ್ಷೇಪ.
IPS officer Ravi D Channannavar
IPS officer Ravi D Channannavar

ಬೆಂಗಳೂರಿನ ಕಿಯೋನಿಕ್ಸ್‌ (ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ) ವ್ಯವಸ್ಥಾಪಕ ನಿರ್ದೇಶಕರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಗೆ ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರದ ಈ ಹಿಂದಿನ ಆದೇಶಕ್ಕೆ ಬೆಂಗಳೂರಿನಲ್ಲಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು (ಸಿಎಟಿ) ಶುಕ್ರವಾರ ತಡೆ ನೀಡಿದೆ.

ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಆರು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದ ತನ್ನನ್ನು ಹುದ್ದೆ ತೋರಿಸದೇ 2023ರ ಜೂನ್‌ 7ರಂದು ವರ್ಗಾವಣೆ ಮಾಡಿರುವ ಆದೇಶವನ್ನು ವಜಾ ಮಾಡಬೇಕು ಎಂದು ಕೋರಿ ರವಿ ಡಿ. ಚನ್ನಣ್ಣನವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಿಎಟಿ ಸದಸ್ಯರಾದ ನ್ಯಾಯಮೂರ್ತಿ ಎಸ್‌ ಸುಜಾತಾ ಮತ್ತು ರಾಕೇಶ್‌ ಕುಮಾರ್‌ ಗುಪ್ತಾ ಅವರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತು.

“2023ರ ಜೂನ್‌ 7ರಂದು ರಾಜ್ಯ ಸರ್ಕಾರದ ಸಾರ್ವಜನಿಕ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿಯು ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ರವಿ ಡಿ. ಚನ್ನಣ್ಣನವರ್ ಹುದ್ದೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯಾದ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಎಚ್‌ ಸಿ ಅವರನ್ನು ಅವರನ್ನು ನೇಮಕ ಮಾಡಿರುವ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ನ್ಯಾಯ ಮಂಡಳಿಯು ಆದೇಶದಲ್ಲಿ ಹೇಳಿದೆ.

2022ರ ನವೆಂಬರ್‌ 14ರಂದು ಕಿಯೋನಿಕ್ಸ್‌ ವ್ಯವಸ್ಥಾಪಕ ಹುದ್ದೆಗೆ ರಾಜ್ಯ ಸರ್ಕಾರವು ತನ್ನನ್ನು ವರ್ಗಾವಣೆ ಮಾಡಿದ್ದು, ನವೆಂಬರ್‌ 15ರಂದು ಅಧಿಕಾರ ಸ್ವೀಕರಿಸಿದ್ದೇನೆ. 2022ರ ಡಿಸೆಂಬರ್‌ 31ರಂದು ಉಪ ಪೊಲೀಸ್‌ ಮಹಾನಿರ್ದೇಶಕರ (ಡಿಐಜಿ) ಹುದ್ದೆಗೆ ಬಡ್ತಿ ನೀಡಲಾಗಿದೆ. ಆದರೆ, 2023ರ ಜೂನ್‌ 7ರಂದು ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಆರು ತಿಂಗಳು ಆಗದಿದ್ದರೂ ಪ್ರಮುಖವಾಗಿ ಹುದ್ದೆ ತೋರಿಸದೇ ಹಾಗೂ ಯಾವುದೇ ಕಾರಣ ನೀಡದೆ ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ರವಿ ಡಿ. ಚನ್ನಣ್ಣನವರ್ ಆಕ್ಷೇಪಿಸಿದ್ದಾರೆ.

ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯ ದರ್ಜೆ ಮತ್ತು ಜವಾಬ್ದಾರಿಗೆ ಸಮ ಎಂದು ಘೋಷಿಸಲಾಗಿದೆ ಎಂದೂ ಅರ್ಜಿಯಲ್ಲಿ ವಿವರಿಸಲಾಗಿದೆ.

ತನಗೆ ಹುದ್ದೆ ತೋರಿಸದೇ ಗಿರೀಶ್‌ ಅವರನ್ನು ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡುವಾಗ ಯಾವುದೇ ತೆರನಾದ ವಿವೇಚನೆ ಬಳಸಿಲ್ಲ. ಇದೊಂದೇ ಆಧಾರದಲ್ಲಿ ಆಕ್ಷೇಪಾರ್ಹ ಆದೇಶವು ವಜಾಕ್ಕೆ ಅರ್ಹವಾಗಿದೆ. ವರ್ಗಾವಣೆ ತತ್ವಗಳನ್ನು ಪ್ರತಿವಾದಿಗಳು ಗಾಳಿಗೆ ತೂರಿದ್ದು, ಈ ಮೂಲಕ ಆರು ತಿಂಗಳ ಹಿಂದೆಯಷ್ಟೇ ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ತನಗೆ ಅಡ್ಡಿಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ರವಿ ಡಿ. ಚನ್ನಣ್ಣನವರ್ ಆಕ್ಷೇಪಿಸಿದ್ದರು.

Also Read
ಅಕ್ರಮ ಆಸ್ತಿ ಪ್ರಕರಣ: ರವಿ ಚನ್ನಣ್ಣನವರ್ ವಿರುದ್ಧ ಸಿಬಿಐ, ಇಡಿ ತನಿಖೆಗೆ ಕೋರಿ ವಕೀಲ ಜಗದೀಶ್ ಹೈಕೋರ್ಟ್‌ನಲ್ಲಿ ಅರ್ಜಿ

ಅಖಿಲ ಭಾರತ ನಿಯಮಗಳು, 1968ರ ಪ್ರಕಾರ ಕನಿಷ್ಠ 2 ವರ್ಷ ಅಧಿಕಾರಿಯು ಹುದ್ದೆಯಲ್ಲಿ ಇರಬೇಕು. ಆದರೆ, ಇಲ್ಲಿ ಈ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು, ಹಿಂದಿನ ಆದೇಶ ಜಾರಿಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ವರ್ಗಾವಣೆ ಆದೇಶಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಕೋರಿಕೆ ಮಾಡಲಾಗಿತ್ತು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ. ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.

“ಈ ಮಧ್ಯೆ, ಜೂನ್‌ 8ರಂದು ರವಿ ಚನ್ನಣ್ಣವನರ್‌ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಐಜಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ವಿಚಾರವನ್ನು ಸಿಎಟಿ ಗಮನಕ್ಕೆ ಮುಂದಿನ ವಿಚಾರಣೆಯ ವೇಳೆಗೆ ಮೆಮೊ ಸಲ್ಲಿಸಿ ಗಮನಕ್ಕೆ ತರಲಾಗುವುದು “ಎಂದು ರವಿ ಚನ್ನಣ್ಣನವರ್‌ ಪರ ವಕಾಲತ್ತು ಹಾಕಿರುವ ವಕೀಲ ಅರ್ನವ್‌ ಬಾಗಲವಾಡಿ ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದ್ದಾರೆ. ರವಿ ಡಿ. ಚನ್ನಣ್ಣನವರ್ ಅವರ ಪರವಾಗಿ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com