ಲಿವ್-ಇನ್‌ ಜೋಡಿಗೆ ನ್ಯಾಯಾಲಯ ರಕ್ಷಣೆ ನೀಡಬೇಕೆ? ವಿಸ್ತೃತ ಪೀಠಕ್ಕೆ ಪ್ರಕರಣ ವಹಿಸಿದ ಪಂಜಾಬ್-ಹರಿಯಾಣ ಹೈಕೋರ್ಟ್‌

ಪ್ರಕರಣದ ವೈವಾಹಿಕ ಸ್ಥಿತಿಗತಿ ಮತ್ತು ಇತರ ಸನ್ನಿವೇಶಗಳನ್ನು ಪರಿಶೀಲಿಸದೆ ನ್ಯಾಯಾಲಯವು ಸಹ ಜೀವನ ನಡೆಸುತ್ತಿರುವ ಇಬ್ಬರು ವ್ಯಕ್ತಿಗಳಿಗೆ ರಕ್ಷಣೆ ನೀಡಲಿದೆಯೇ ಎಂಬುದನ್ನು ವಿಸ್ತೃತ ಪೀಠವು ನಿರ್ಧರಿಸಲಿದೆ.
ಲಿವ್-ಇನ್‌ ಜೋಡಿಗೆ ನ್ಯಾಯಾಲಯ ರಕ್ಷಣೆ ನೀಡಬೇಕೆ? ವಿಸ್ತೃತ ಪೀಠಕ್ಕೆ ಪ್ರಕರಣ ವಹಿಸಿದ ಪಂಜಾಬ್-ಹರಿಯಾಣ ಹೈಕೋರ್ಟ್‌
Published on

ವೈವಾಹಿಕ ಸ್ಥಿತಿಗತಿ ಮತ್ತು ಇತರ ಸನ್ನಿವೇಶಗಳನ್ನು ಪರಿಶೀಲಿಸಿದೆ ನ್ಯಾಯಾಲಯವು ಸಹ ಜೀವನ ನಡೆಸುತ್ತಿರುವ ಇಬ್ಬರು ವ್ಯಕ್ತಿಗಳಿಗೆ ರಕ್ಷಣೆ ನೀಡಲಿದೆಯೇ ಎಂಬುದನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ವಿಸ್ತೃತ ಪೀಠವು ನಿರ್ಧರಿಸಲಿದೆ (ಯಶ್‌ ಪಾಲ್‌ ವರ್ಸಸ್‌ ಹರಿಯಾಣ ರಾಜ್ಯ).

ಲಿವ್‌-ಇನ್‌ ಸಂಬಂಧದಲ್ಲಿರುವ ಜೋಡಿ ಪೋಷಕರು ಮತ್ತು ಸಂಬಂಧಿಗಳಿಂದ ಬೆದರಿಕೆ ಎದುರಿಸುತ್ತಿದ್ದು ಅವರಿಂದ ರಕ್ಷಣೆ ಕೋರಿದ್ದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹೈಕೋರ್ಟ್‌ನ ಭಿನ್ನ ಪೀಠಗಳು ಸಂಘರ್ಷಾತ್ಮಕ ಆದೇಶಗಳನ್ನು ಹೊರಡಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅನಿಲ್‌ ಕ್ಷೇತ್ರಪಾಲ್‌ ಅವರು ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಕೋರಿದ್ದಾರೆ.

“ಈ ನ್ಯಾಯಾಲಯದ ಭಿನ್ನ ಪೀಠಗಳು ಸಂಬಂಧಿತ ವಿಚಾರದ ಕುರಿತು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಅದನ್ನು ಸುಲಭವಾಗಿ ಪರಿಹರಿಸಲಾಗದು. ಹೀಗಾಗಿ, ಪ್ರಕರಣವನ್ನು ಇತ್ಯರ್ಥಪಡಿಸಲು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಅವರನ್ನು ವಿಸ್ತೃತ ಪೀಠ ರಚಿಸಲು ಪರಿಗಣಿಸುವಂತೆ ಕೋರುವುದು ಸರಿಯಾಗಿದೆ” ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿವಾಹ ಬಂಧಕ್ಕೆ ಒಳಗಾಗದೆ ಸಹ ಜೀವನ ನಡೆಸುತ್ತಿರುವ ಜೋಡಿಯು ತಮ್ಮ ಬದುಕು ಮತ್ತು ಸ್ವಾತಂತ್ರ್ಯದ ರಕ್ಷಣೆ ಕೋರಿ ಮನವಿ ಸಲ್ಲಿಸಿದಾಗ ಅರ್ಜಿದಾರರ ವೈವಾಹಿಕ ಸ್ಥಿತಿಗತಿ ಮತ್ತು ಇತರೆ ಪರಿಸ್ಥಿತಿಯನ್ನು ಪರಿಶೀಲಿಸದೆ ಅವರಿಗೆ ನ್ಯಾಯಾಲಯವು ರಕ್ಷಣೆ ನೀಡುವ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ವಿಸ್ತೃತ ಪೀಠ ನಿರ್ಧರಿಸಲು ಬಿಡಲಾಗಿದೆ.

ಮೇಲಿನ ಪ್ರಶ್ನೆಗೆ ಉತ್ತರ ನಕಾರಾತ್ಮಕವಾಗಿ ಬಂದರೆ ಯಾವ ಪರಿಸ್ಥಿತಿಗಳ ಆಧಾರದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ರಕ್ಷಣೆ ನಿರಾಕರಿಸಬಹುದು? ಎಂದೂ ಕೇಳಲಾಗಿದೆ.

Also Read
ದಂಪತಿಗೆ ರಕ್ಷಣೆ ನೀಡದಿರಲು ವಿವಾಹದ ಸಿಂಧುತ್ವ ಕುರಿತ ವಿವಾದ ಆಧಾರವಾಗಬಾರದು ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಇಬ್ಬರು ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಆದೇಶ ಹೊರಡಿಸಲಾಗಿದ್ದು, ಈ ಪೈಕಿ ಒಬ್ಬರು ಪತ್ನಿಯೊಂದಿಗಿನ ಸಂಬಂಧ ಹಳಸಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ತೊರೆದಿದ್ದರು. ಪತ್ನಿಗೆ ವಿಚ್ಛೇದನ ನೀಡದೆ ಅವರು ಮತ್ತೊಬ್ಬಾಕೆಯ ಜೊತೆ ಜೀವಿಸುತ್ತಿದ್ದು, ಇದು ಆತನ ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಈ ಜೋಡಿಯು ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದೆ.

ಲಿವ್– ಇನ್‌ ಸಂಬಂಧದಲ್ಲಿರುವವರು ರಕ್ಷಣೆ ಕೋರಿದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಚೆಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ವಿಭಿನ್ನ ಪೀಠಗಳು ವ್ಯತಿರಿಕ್ತ, ಸಂಘರ್ಷಾತ್ಮಕ ಆದೇಶಗಳನ್ನು ಹೊರಡಿಸಿದ್ದು, ಸಹ ಜೀವನ ನಡೆಸುತ್ತಿರುವ ಜೋಡಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಬೇಕೇ, ಬೇಡವೇ ಎಂಬ ಪ್ರಶ್ನೆ ಉದ್ಭವಿಸಿದೆ.

Kannada Bar & Bench
kannada.barandbench.com