ನ್ಯಾಯಾಲಯಗಳ ಕಲಾಪ: ಶಾಶ್ವತವಾಗಿ ಉಳಿಯಲಿದೆಯೇ ಹೈಬ್ರಿಡ್ ವಿಧಾನ?

ವರ್ಚುವಲ್ ಕಲಾಪದ ಮೂಲಕ ಭೌತಿಕ ನ್ಯಾಯಾಲಯಕ್ಕೆ ಹಾಜರಾಗುವ ವಿವಿಧ ಪಕ್ಷಗಳ ಹಕ್ಕನ್ನು ಪರಿಣಾಮಕಾರಿಯಾಗಿ ಗುರುತಿಸಬಹುದು ಎಂಬ ಕಾರಣಕ್ಕೆ ಹೈಬ್ರಿಡ್ ವಿಧಾನ ಅಳವಡಿಸಿಕೊಳ್ಳಲು ನ್ಯಾಯಾಲಯಗಳು ದೊಡ್ಡ ಹೆಜ್ಜೆ ಇಡುತ್ತಿವೆ.
Supreme Court Video Conference & Lock Down
Supreme Court Video Conference & Lock Down

ದೇಶದೆಲ್ಲೆಡೆ ಹಂತಹಂತವಾಗಿ ಭೌತಿಕ ವಿಚಾರಣೆ ಆರಂಭವಾಗುತ್ತಿರುವುದು ನ್ಯಾಯಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ. ಸಾಂಕ್ರಾಮಿಕ ರೋಗದ ಹಾವಳಿ ಕಡಿಮೆಯಾದ ಬಳಿಕವೂ ಅನೇಕ ವಕೀಲರು ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ಮುಂದುವರೆಸಲು ಒಲವು ತೋರುತ್ತಿದ್ದು ಸುಪ್ರೀಂಕೋರ್ಟ್‌ನಲ್ಲಿ ಇದು ವಿಶೇಷವಾಗಿ ವ್ಯಕ್ತವಾಗುತ್ತಿದೆ. ಆದರೆ ಭೌತಿಕ ಕಲಾಪಗಳಿಗೇ ನ್ಯಾಯಾಲಯಗಳು ಮರಳಬೇಕೆಂದು ಅರ್ಧದಷ್ಟು ಮಂದಿ ಬಯಸುತ್ತಿದ್ದಾರೆ.

ವಕೀಲರಲ್ಲಿ ಕಂಡುಬರುತ್ತಿರುವ ಈ ಗಮನಾರ್ಹ ಭಿನ್ನಾಭಿಪ್ರಾಯ, ಹೈಬ್ರಿಡ್‌ ವಿಧಾನ ಅನುಸರಿಸಲು ಸುಪ್ರೀಂಕೋರ್ಟ್‌ಗೆ ಪ್ರೇರಣೆಯೊದಗಿಸಿದೆ ಎನ್ನಬಹುದು. ಹೈಬ್ರಿಡ್‌ ವಿಧಾನದಲ್ಲಿ ಭೌತಿಕ ಅಥವಾ ವರ್ಚುವಲ್‌ ವಿಧಾನ ಆಯ್ದುಕೊಳ್ಳಲು ಕಕ್ಷೀದಾರರಿಗೆ/ವಕೀಲರಿಗೆ ಸ್ವಾತಂತ್ರ್ಯ ಇದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದೇ ಪ್ರಕರಣದಲ್ಲಿ, ಒಬ್ಬ ಪಕ್ಷಕಾರರಿಗೆ ಭೌತಿಕವಾಗಿ ಕಾಣಿಸಿಕೊಳ್ಳುವ ಸ್ವಾತಂತ್ರ್ಯವಿದ್ದರೆ ಮತ್ತೊಬ್ಬ ಪಕ್ಷಕಾರರಿಗೆ ವರ್ಚುವಲ್‌ ವಿಧಾನ ಅನುಸರಿಸಲು ಅವರ ಅಗತ್ಯಗಳ ಅನುಸಾರ ಅವಕಾಶ ನೀಡಲಾಗಿದೆ. ಈ ವ್ಯವಸ್ಥೆ ಮಾರ್ಚ್‌ನಿಂದ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.

Also Read
ವರ್ಚುವಲ್ ಕೋರ್ಟುಗಳು ತೆರೆದಿಟ್ಟ ಬದುಕಿನ ಗುಟ್ಟುಗಳು

ಇದಾಗಲೇ ಕರ್ನಾಟಕ ಹೈಕೋರ್ಟ್‌ ಹೈಬ್ರಿಡ್‌ ವಿಧಾನ ಅಳವಡಿಸಿಕೊಂಡಿದೆ. ಆದರೆ ಈ ವಿಧಾನವೂ ನ್ಯೂನತೆಗಳಿಂದ ಮುಕ್ತವಾಗಿಲ್ಲ ಎನ್ನಲು ಬುಧವಾರ ನಡೆದ ಘಟನೆ ಸಾಕ್ಷಿಯಾಗಿದೆ. ಅಂದು ಹೈಕೋರ್ಟ್‌ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅವರು ಕಳಪೆ ಆಡಿಯೊ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ವಿಡಿಯೋ ಕಾನ್ಫರೆನ್ಸ್ ವಿಧಾನದ ಮೂಲಕ ಪೀಠದೆದುರು ವಾದ ಮಂಡಿಸುತ್ತಿದ್ದ ಮಾಧವಿ ಅವರಿಗೆ ಫ್ಲಿಪ್‌ಕಾರ್ಟ್‌ ಪರವಾಗಿ ಭೌತಿಕವಾಗಿ ಹಾಜರಾದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮಂಡಿಸಿದ ವಾದವನ್ನು ಕೇಳಲು/ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಅವರು ನ್ಯಾಯಮೂರ್ತಿ ಪಿ ಎಸ್‌ ದಿನೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.

ಸ್ಪರ್ಧಾತ್ಮಕತೆಯ ಕಾನೂನು ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಭಾರತ ಸ್ಪರ್ಧಾತ್ಮಕತೆ ಆಯೋಗ (ಸಿಸಿಐ) ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

Also Read
ವರ್ಚುವಲ್ ಕಲಾಪದಲ್ಲಿ ಹೊಣಗೇಡಿತನ ಪ್ರದರ್ಶಿಸಬೇಡಿ; ಕೆಲ ವಕೀಲರ ಅಸಭ್ಯ ನಡತೆಗೆ ಕೆಎಸ್‌ಬಿಸಿ ಕೆಂಡಾಮಂಡಲ

ಚಿನ್ನಪ್ಪ ಅವರು ವಾದ ಮಂಡಿಸಲು ಪ್ರಾರಂಭಿಸಿದ ತಕ್ಷಣ, ಅವರ ಮಾತುಗಳು ಕೇಳುತ್ತಿಲ್ಲ ಎಂದು ಮಾಧವಿ ಪೀಠಕ್ಕೆ ತಿಳಿಸಿದರು. ಪರಿಣಾಮ ಮೈಕ್ರೋಫೋನ್‌ ಬಳಸುವಂತೆ ಚಿನ್ನಪ್ಪ ಅವರಿಗೆ ನ್ಯಾಯಾಲಯ ಸೂಚಿಸಿತು. ಆದರೆ, ಒಮ್ಮೆ ವಾದ ಪೂರ್ಣಗೊಂಡ ಬಳಿಕ ದಿವಾನ್‌ ಅವರು ಚಿನ್ನಪ್ಪ ಅವರ ಆಡಿಯೊ ಅಸ್ಪಷ್ಟವಾಗಿದ್ದ ಬಗ್ಗೆ, ತಮಗೆ ಅದನ್ನು ಸರಿಯಾಗಿ ಕೇಳಿಸಿಕೊಳ್ಳಲು ಸಾಧ್ಯವಾಗದ ಬಗ್ಗೆ ಮತ್ತೆ ತಿಳಿಸಿದರು. ಅಲ್ಲದೆ, ಈ ಕಾರಣದಿಂದಾಗಿ ಚಿನ್ನಪ್ಪ ತಮ್ಮ ವಾದದ ಸಾರಾಂಶವನ್ನು ಲಿಖಿತವಾಗಿ ರವಾನಿಸಬಹುದೇ ಎಂದು ಪೀಠವನ್ನು ಕೋರಿದರು. ಇದಕ್ಕೆ ತಕ್ಷಣವೇ ಚಿನ್ನಪ್ಪ ಒಪ್ಪಿದರು.

ಹೈಬ್ರಿಡ್‌ ವಿಧಾನದ ಮೂಲಕ ಭೌತಿಕ ನ್ಯಾಯಾಲಯಕ್ಕೆ ಹಾಜರಾಗುವ ವಿವಿಧ ಪಕ್ಷಗಳ ಹಕ್ಕನ್ನು ಪರಿಣಾಮಕಾರಿಯಾಗಿ ಗುರುತಿಸಬಹುದು ಎಂಬ ಕಾರಣಕ್ಕೆ ನ್ಯಾಯಾಲಯಗಳು ದೊಡ್ಡ ಹೆಜ್ಜೆ ಇರಿಸಿವೆ. ಆದರೂ ಸಾಂಕ್ರಾಮಿಕ ಪಿಡುಗಿನ ಬಳಿಕ ಅಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಾಗ ತಾಂತ್ರಿಕ ಅಡಚಣೆಗಳನ್ನು ಕೂಡ ಗಮನಿಸಬೇಕಾಗುತ್ತದೆ.

Related Stories

No stories found.
Kannada Bar & Bench
kannada.barandbench.com