ರೈತ ನಾಯಕ ಡಲ್ಲೇವಾಲ್‌ಗೆ ವೈದ್ಯಕೀಯ ನೆರವು; ರೈತರೊಂದಿಗೆ ಮಾತುಕತೆ ನಿಗದಿ: ಸುಪ್ರೀಂಗೆ ಪಂಜಾಬ್ ಸರ್ಕಾರ ವಿವರಣೆ

ರೈತರ ಪ್ರತಿಭಟನೆಯ ಭಾಗವಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಡಲ್ಲೇವಾಲ್ ಅವರಿಗೆ ವೈದ್ಯಕೀಯ ನೆರವು ನೀಡುವಂತೆ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು.
Farmers Protest
Farmers Protest
Published on

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ಡಲ್ಲೇವಾಲ್ ಅವರು ವೈದ್ಯಕೀಯ ನೆರವು ಪಡೆದಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಪಂಜಾಬ್ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಭಾಗವಾಗಿ ಡಲ್ಲೇವಾಲ್ ಉಪವಾಸ ನಡೆಸುತ್ತಿದ್ದಾರೆ.

Also Read
ರೈತ ನಾಯಕ ಡಲ್ಲೇವಾಲ್ ಉಪವಾಸ ಸತ್ಯಾಗ್ರಹ ಮುರಿಯವ ಉದ್ದೇಶ ತನ್ನ ಆದೇಶಗಳಿಗೆ ಇರಲಿಲ್ಲ: ಸುಪ್ರೀಂ ಕೋರ್ಟ್

ಡಲ್ಲೇವಾಲ್ ಅವರನ್ನು ಪ್ರತಿಭಟನಾ ಸ್ಥಳದ ಸಮೀಪವಿರುವ ತಾತ್ಕಾಲಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ (ಎಜಿ) ಗುರ್ಮಿಂದರ್ ಸಿಂಗ್ ಇಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ದೀಪಂಕರ್ ದತ್ತಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಿಯೋಗ ಜನವರಿ 18ರಂದು ಡಲ್ಲೇವಾಲ್ ಸೇರಿದಂತೆ ರೈತರನ್ನು ಭೇಟಿ ಮಾಡಿದ್ದು ಫೆಬ್ರವರಿ 14 ರಂದು ಚಂಡೀಗಢದಲ್ಲಿ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.

ಮಾತುಕತೆಗೂ ಕೆಲ ದಿನಗಳ ಮೊದಲೇ ಚಂಡೀಗಢವನ್ನು ತಲುಪಲು ಮತ್ತು ಮಾತುಕತೆಯಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಇನ್ನಷ್ಟು ಸೂಕ್ತ ವೈದ್ಯಕೀಯ ನೆರವು ಪಡೆಯುವಂತೆ ಡಲ್ಲೇವಾಲ್‌ ಅವರನ್ನು ವಿನಂತಿಸಬಹುದು ಎಂದು ನ್ಯಾಯಾಲಯ ಹೇಳಿತು.

Also Read
ಕೇಂದ್ರದೊಂದಿಗೆ ಮಾತುಕತೆ ಸಾಧ್ಯವಾದರೆ ಡಲ್ಲೇವಾಲ್ ವೈದ್ಯಕೀಯ ನೆರವು ಪಡೆಯಬಹುದು: ಸುಪ್ರೀಂಗೆ ಪಂಜಾಬ್ ಸರ್ಕಾರದ ಮಾಹಿತಿ

ಅವರೊಬ್ಬ ಜನಪ್ರಿಯ ರೈತ ನಾಯಕರು ಎಂದ ನ್ಯಾಯಾಲಯ ಸಮಸ್ಯೆಯನ್ನು ಹೇಗೆ ಸ್ವೀಕರಿಸಬೇಕು ಎಂಬ ಬಗ್ಗೆ ಉತ್ತಮ ಕಲ್ಪನೆ ಅವರಿಗಿದೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ನುಡಿಯಿತು.

ಉಪವಾಸ ನಿರತ ಡಲ್ಲೇವಾಲ್‌ ಅವರನ್ನು ಆಸ್ಪತ್ರೆಗೆ ಕಳುಹಿಸಲು ಮನವೊಲಿಸುವಂತೆ ಪಂಜಾಬ್‌ ಸರ್ಕಾರಕ್ಕೆ ಡಿಸೆಂಬರ್ 20ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Kannada Bar & Bench
kannada.barandbench.com