ಪುರಭವನ ಮರಳಿ ಪಡೆಯಲು ಸುಪ್ರೀಂ ಕೋರ್ಟ್‌ ಮೊರೆಹೋದ ಜೈಪುರ ರಾಜ ಮನೆತನ

ರಾಜಸ್ಥಾನ ಹೈಕೋರ್ಟ್ ತನ್ನ ಸಿವಿಲ್ ಮೊಕದ್ದಮೆ ವಜಾಗೊಳಿಸಿದ್ದನ್ನು ಪ್ರಶ್ನಿಸಿ ರಾಜಮನೆತನ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
Supreme Court
Supreme Court
Published on

ರಾಜ್ಯ ಸರ್ಕಾರದ ಸ್ವಾಧೀನದಲ್ಲಿದ್ದರೂ ಬಳಕೆಯಲ್ಲಿಲ್ಲದ ಜೈಪುರದ ಐತಿಹಾಸಿಕ ಪುರಭವನದ ಆಸ್ತಿ  ಹಿಂದಿರುಗಿಸುವಂತೆ ಕೋರಿ ಜೈಪುರ ರಾಜ ಮನೆತನದ ಸದಸ್ಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜಸ್ಥಾನ ಸರ್ಕಾರದ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿದೆ [ರಾಜಮಾತಾ ಪದ್ಮಿನಿ ದೇವಿ ಮತ್ತಿತರರು ಹಾಗೂ ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ರಾಜಸ್ಥಾನ ಹೈಕೋರ್ಟ್ ತನ್ನ ಸಿವಿಲ್ ಮೊಕದ್ದಮೆ ವಜಾಗೊಳಿಸಿದ್ದನ್ನು ಪ್ರಶ್ನಿಸಿ ರಾಜ ಮನೆತನ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.

Also Read
ಬೆಂಗಳೂರು ಅರಮನೆ ಸ್ವಾಧೀನ ಕಾಯಿದೆ: ಮೇಲ್ಮನವಿಯ ತುರ್ತು ವಿಚಾರಣೆ ಕೋರಿ ಸುಪ್ರೀಂ ಎಡತಾಕಲಿರುವ ರಾಜ್ಯ ಸರ್ಕಾರ

ರಾಜ ಮನೆತನದ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ , 26ನೇ ಸಾಂವಿಧಾನಿಕ ತಿದ್ದುಪಡಿಯ (ರಾಜಧನ ರದ್ದತಿ) ನಂತರ  ರಾಜ ಮನೆತನದವರ ಹಕ್ಕುಗಳ ಬಗ್ಗೆ ಮತ್ತು ಸಂವಿಧಾನ ಜಾರಿಗೆ ಬರುವ ಮೊದಲು ಮಾಡಿಕೊಂಡ ಒಪ್ಪಂದಗಳನ್ನು ಒಳಗೊಂಡಿರುವ ಪ್ರಕರಣದಲ್ಲಿ ನ್ಯಾಯಾಲಯಗಳ ನ್ಯಾಯವ್ಯಾಪ್ತಿ ರದ್ದುಗೊಳಿಸಬಹುದೇ ಎಂಬುದರ ಕುರಿತು ಈ ಪ್ರಕರಣ ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ವಾದಿಸಿದರು.

ಸಂಯುಕ್ತ ರಾಜಸ್ಥಾನ ರಾಜ್ಯ ರಚನೆಗಾಗಿ 1949ರಲ್ಲಿ, ರಾಜಸ್ಥಾನದ ವಿವಿಧ ಆಡಳಿತಗಾರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದದಂತೆ ಆಡಳಿತಗಾರರು ಮತ್ತು ಅವರ ಕುಟುಂಬಗಳಿಗೆ ಖಾಸಗಿ ಆಸ್ತಿ ಒದಗಿಸಲಾಗಿತ್ತು. ಪುರಭವನ ಅಂತಹ ಒಂದು ಆಸ್ತಿಯಾಗಿದ್ದು, ಹೊಸ ಸರ್ಕಾರದ ಬಳಿ ಅಂತಹ ಆಸ್ತಿ ಇಲ್ಲದೇ ಇದ್ದುದರಿಂದ ಮತ್ತು ಮಹಾರಾಜ ಸವಾಯಿ ಮಾನ್ ಸಿಂಗ್ II ಅವರನ್ನು ರಾಜ್ಯದ ರಾಜಪ್ರಮುಖರನ್ನಾಗಿ ನೇಮಿಸಬೇಕಿದ್ದರಿಂದ ರಾಜ್ಯ ಸರ್ಕಾರ ಅಧಿಕೃತ ಉದ್ದೇಶಗಳಿಗಾಗಿ ಅದನ್ನು ಬಳಸಲು ಮುಂದಾಯಿತು.

ಅರ್ಜಿದಾರರು ವಾದಿಸಿರುವಂತೆ ಪುರಭವನವನ್ನು ತಾತ್ಕಾಲಿಕವಾಗಿ ಅಧಿಕೃತ ಬಳಕೆಗಾಗಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದ್ದರೂ, ಅದರ ಮಾಲೀಕತ್ವವನ್ನು ಎಂದಿಗೂ ವರ್ಗಾಯಿಸಿರಲಿಲ್ಲ. 2001ರಲ್ಲಿ ರಾಜ್ಯ ಸರ್ಕಾರ ಪುರಭವನವನ್ನು  ಬಳಸುವುದನ್ನು ನಿಲ್ಲಿಸಿದ ನಂತರ, ರಾಜಮನೆತನವು ಅದನ್ನು ಹಿಂದಿರುಗಿಸುವಂತೆ ಪದೇ ಪದೇ ಮನವಿ ಮಾಡಿತು. ರಾಜ ಮನೆತನದ ಪ್ರಕಾರ, ಕಟ್ಟಡ ಹಲವು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿ ಶಿಥಿಲಾವಸ್ಥೆ ತಲುಪಿತ್ತು. ನಂತರ ಸರ್ಕಾರ ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮೀಸಲಿಟ್ಟಿತ್ತು.   

2023 ರಲ್ಲಿ, ಅರ್ಜಿದಾರರು ಪುರಸಭೆ ಸ್ವಾಧೀನ ಕೋರಿ ಸಿವಿಲ್ ಮೊಕದ್ದಮೆ ಹೂಡಿದರು. ಒಪ್ಪಂದದ ವ್ಯಾಖ್ಯಾನವನ್ನು ಒಳಗೊಂಡಿರುವುದರಿಂದ ಸಿವಿಲ್ ನ್ಯಾಯಾಲಯಗಳು ಈ ಮೊಕದ್ದಮೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಸಂವಿಧಾನದ 363ನೇ ವಿಧಿಯನ್ನು ಬಳಸಿಕೊಂಡು ಮೊಕದ್ದಮೆ  ವಜಾಗೊಳಿಸುವಂತೆ ಕೋರಿತು.

Also Read
ಮೈಸೂರು ರಾಜಮನೆತನಕ್ಕೆ ₹3,011 ಕೋಟಿ ಟಿಡಿಆರ್‌ ಪಾವತಿ: ನಾಳೆ ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಲಿರುವ ಸಿಜೆಐ ಪೀಠ

ಸಂವಿಧಾನ ಪೂರ್ವ ಒಪ್ಪಂದಗಳಿಂದ ಉಂಟಾಗುವ ವ್ಯಾಜ್ಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪವನ್ನು 363ನೇ ವಿಧಿ ನಿಷೇಧಿಸುತ್ತದೆ.

ಅಂತೆಯೇ ವಿಚಾರಣಾ ನ್ಯಾಯಾಲಯ ರಾಜ್ಯ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿತು. ಪ್ರಕರಣ  ನಾಗರಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದೆಯೇ ವಿನಾ ಒಡಂಬಡಿಕೆಯ ಜಾರಿಯ ಕುರಿತು ಅಲ್ಲ ಎಂದು ತೀರ್ಪು ನೀಡಿತು. ಆದರೆ ಏಪ್ರಿಲ್ 2025ರಲ್ಲಿ, ರಾಜಸ್ಥಾನ ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿ ಮೊಕದ್ದಮೆಯನ್ನು ಸಂಪೂರ್ಣವಾಗಿ ವಜಾಗೊಳಿಸಿತು. ಹೀಗಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದಾರೆ. 8 ವಾರಗಳ ನಂತರ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com