
ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಉದ್ವಿಗ್ನತೆ ತಲೆದೋರಿರುವಂತೆಯೇ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯ ಸುರಕ್ಷತೆಗಾಗಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ.
ಕರ್ನಾ, ಕ್ರಾಲ್‌ಪೋರಾ, ಗುರೆಜ್ ಹಾಗೂ ಉರಿಯ ಉದ್ವಿಗ್ನ ಗಡಿ ಪ್ರದೇಶಗಳಲ್ಲಿನ ಭದ್ರತಾ ಪರಿಸ್ಥಿತಿ ಗಮನಿಸಿದ ಮುಖ್ಯ ನ್ಯಾಯಮೂರ್ತಿ ಅರುಣ್ ಪಲ್ಲಿ, ಈ ಪ್ರದೇಶಗಳ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯಗಳ ಸಿಬ್ಬಂದಿಗಳು ತಮ್ಮ ನಿವಾಸ ತೆರವುಗೊಳಿಸಿ ಸುರಕ್ಷಿತ ವಲಯಕ್ಕೆ ತೆರಳುವಂತೆ ನಿರ್ದೇಶಿಸಿದ್ದಾರೆ. ಮೇ 9ರಂದು ಈ ಕುರಿತು ಪೀಠ ಸುತ್ತೋಲೆ ಹೊರಡಿಸಿದೆ.
ಈ ಗಡಿ ಪ್ರದೇಶಗಳಲ್ಲಿನ ಅಧಿಕಾರಿಗಳು ಸುರಕ್ಷಿತ ವಲಯಗಳಲ್ಲಿ ಉಳಿದುಕೊಂಡು ವರ್ಚುವಲ್ ವಿಧಾನದ ಮೂಲಕ ತುರ್ತು ಕರ್ತವ್ಯ ನಿರ್ವಹಿಸಲು ಎಲ್ಲಾ ಸಮಯದಲ್ಲೂ ಲಭ್ಯವಿರಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಇತರೆ ನಿರ್ದೇಶನಗಳು
ನ್ಯಾಯಾಲಯದ ದಾಖಲೆಗಳು ಸುರಕ್ಷಿತವಾಗಿವೆಯೆ ಎಂದು ನೋಡಿಕೊಳ್ಳಬೇಕು.
ಕರ್ನಾ, ಕ್ರಾಲ್‌ಪೋರಾ, ಗುರೆಜ್ ಮತ್ತು ಉರಿ ನ್ಯಾಯಾಲಯಗಳ ತುರ್ತು ಪ್ರಕರಣಗಳನ್ನು ಬಾರಾಮುಲ್ಲಾ, ಬಂಡಿಪೋರಾ ಮತ್ತು ಕುಪ್ವಾರಾದಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸಬೇಕು.
ನ್ಯಾಯಾಲಯದ ಸಿಬ್ಬಂದಿಗೆ ತೊಂದರೆ ಎದುರಾದರೆ ಬಾರಾಮುಲ್ಲಾ, ಬಂಡಿಪೋರಾ ಮತ್ತು ಕುಪ್ವಾರಾದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸಹಾಯಪಡೆಯಬಹುದು.
ಈ ನಿರ್ದೇಶನಗಳು ಮೇ 12ರವರೆಗೆ ಜಾರಿಯಲ್ಲಿರುತ್ತವೆ.