[ಜಾರಕಿಹೊಳಿ ಸಿ.ಡಿ ಪ್ರಕರಣ] ಸಂತ್ರಸ್ತೆ ಹೇಳಿಕೆ ಕಾನೂನುಬದ್ಧ ಎಂದ ಹೈಕೋರ್ಟ್‌; ತಂದೆಯ ರಿಟ್‌ ವಜಾ

“ಸಿಆರ್‌ಪಿಸಿ ಕಲಂ 164ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಕಲಂ 164(5) ಮತ್ತು (5ಎ) ಅಡಿಯಲ್ಲಿ ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್ ಎದುರು ಸ್ವಇಚ್ಛೆಯಿಂದ ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ದಾಖಲಿಸಿದ್ದಾರೆ” ಎಂದ ನ್ಯಾ. ವಿಶ್ವಜಿತ್‌ ಶೆಟ್ಟಿ.
[ಜಾರಕಿಹೊಳಿ ಸಿ.ಡಿ ಪ್ರಕರಣ] ಸಂತ್ರಸ್ತೆ ಹೇಳಿಕೆ ಕಾನೂನುಬದ್ಧ ಎಂದ ಹೈಕೋರ್ಟ್‌; ತಂದೆಯ ರಿಟ್‌ ವಜಾ
Justice S Vishwajith Shetty and Karnataka High Court

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 164ರ ಅಡಿ ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತ ಯುವತಿ ದಾಖಲಿಸಿರುವ ಪ್ರಮಾಣೀಕೃತ ಹೇಳಿಕೆಯು ಕಾನೂನುಬದ್ಧವಾಗಿದೆ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದ್ದು, ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ರಿಟ್‌ ಮನವಿಯನ್ನು ವಜಾ ಮಾಡಿದೆ.

ಪುತ್ರಿ ಒತ್ತಡದಲ್ಲಿ ಹೇಳಿಕೆ ದಾಖಲಿಸಿದ್ದು ಅದನ್ನು ಪರಿಗಣಿಸಬಾರದು ಎಂದು ಸಂತ್ರಸ್ತೆಯ ತಂದೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ತಂದೆ ಸಲ್ಲಿಸಿರುವ ರಿಟ್‌ ಮನವಿಯ ವಿಚಾರಣೆಯ ವೇಳೆ ತನ್ನ ವಾದವನ್ನೂ ಆಲಿಸಬೇಕು ಎಂದು ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಮಧ್ಯಪ್ರವೇಶ ಮನವಿ ಸಲ್ಲಿಸಿದ್ದರು.

“2013ರಲ್ಲಿ ಸಿಆರ್‌ಪಿಸಿ ಕಲಂ 164ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಕಲಂ 164(5) ಮತ್ತು (5ಎ) ಅಡಿಯಲ್ಲಿ ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್ ಎದುರು ಸ್ವಇಚ್ಛೆಯಿಂದ ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ದಾಖಲಿಸಿದ್ದಾರೆ. ಹೀಗಾಗಿ, ಆಕೆ ದಾಖಲಿಸಿರುವ ಹೇಳಿಕೆ ಕಾನೂನುಬದ್ಧವಾಗಿದೆ” ಎಂದು ನ್ಯಾ. ವಿಶ್ವಜಿತ್‌ ಶೆಟ್ಟಿ ಆದೇಶದಲ್ಲಿ ಹೇಳಿದ್ದಾರೆ.

ಇದಕ್ಕೂ ಮುನ್ನ, ಸಂತ್ರಸ್ತೆಯ ಪರ ವಕೀಲ ಏಣಗಿ ಅವರು “ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನ ಅನುಸಾರ ಕಾನೂನುಬದ್ಧವಾಗಿ ಹೇಳಿಕೆ ದಾಖಲಿಸಲಾಗಿದೆ” ಎಂದು ನ್ಯಾಯಾಲಯದ ಗಮನಸೆಳೆದರು. ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ವಕೀಲ ಕೆ ಪ್ರಸನ್ನಕುಮಾರ್‌ ಪ್ರತಿನಿಧಿಸಿದ್ದರು.

ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್‌ ಮನವಿಯಲ್ಲಿ ಸಂತ್ರಸ್ತೆಯ ತಂದೆಯು “ಸಿ.ಡಿ ಪ್ರಕರಣದ ಸಂಬಂಧ ಮಾರ್ಚ್‌ 30ರಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ಸಂತ್ರಸ್ತೆಯಾಗಿರುವ ನನ್ನ ಮಗಳು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆ ದಾಖಲಿಸಿದ್ದಾಳೆ. ಆದರೆ ಯಾವುದೋ ಒತ್ತಡ ಮತ್ತು ಪ್ರಭಾವದ ಕಾರಣಕ್ಕೆ ಮಗಳು ಈ ರೀತಿ ಹೇಳಿಕೆ ನೀಡಿದ್ದಾಳೆ. ಆಕೆ ಸ್ವಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಆಕೆಯ ಹೇಳಿಕೆ ರದ್ದು ಪಡಿಸಬೇಕು” ಎಂದು ಕೋರಿದ್ದರು.

Also Read
ಜಾರಕಿಹೊಳಿ ಸಿಡಿ ಹಗರಣ: ಮಗಳ ಹೇಳಿಕೆ ರದ್ದುಗೊಳಿಸಲು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಪೋಷಕರು

ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ, (ವಕೀಲ) ಸೂರ್ಯ ಮುಕುಂದರಾಜ್‌ ಅವರ ಉಪಸ್ಥಿತಿಯಲ್ಲಿ ಮಗಳ ಹೇಳಿಕೆ ದಾಖಲಾಗಿದೆ. ಕಾನೂನು ಪ್ರಕಾರ ಇದೊಂದು ಲೋಪ ಎಂದು ಕೂಡ ಮನವಿಯಲ್ಲಿ ಉಲ್ಲೇಖಿಸಿದ್ದರು. ಮಗಳ ಗೌರವ ಘನತೆ ಹಾಗೂ ವ್ಯಕ್ತಿತ್ವಕ್ಕೆ ಕುಂದುಂಟು ಮಾಡುವ ಯತ್ನ ನಡೆದಿದೆ. ರಾಜಕೀಯ ಮೇಲಾಟಕ್ಕೆ ನಾನು, ನನ್ನ ಮಗಳು ಹಾಗೂ ಕುಟುಂಬ ಬಲಿಪಶು ಆಗಿದ್ದೇವೆ ಎಂದು ವಿವರಿಸಿದ್ದರು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆ ಪ್ರಮುಖವಾಗಿದ್ದು ಮಗಳ ಹೇಳಿಕೆ ಪಡೆಯುವಾಗ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಹಾಗಾಗಿ ಅರ್ಜಿ ಇತ್ಯರ್ಥವಾಗುವವರೆಗೂ ಮಗಳ ಹೇಳಿಕೆಯನ್ನು ಪರಿಗಣಿಸಿ ಯಾವುದೇ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.

ಈಚೆಗೆ, ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿ ಕುರಿತು ಯಾವುದೇ ಆದೇಶ ಹೊರಡಿಸಲು ಹೈಕೋರ್ಟ್‌ ನಿರಾಕರಿಸಿತ್ತು. ಸಂತ್ರಸ್ತೆಯು ಪ್ರೌಢೆಯಾಗಿರುವುದರಿಂದ ಸ್ವಂತ ತೀರ್ಮಾನ ಮಾಡುವಷ್ಟು ಸಮರ್ಥವಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ಪ್ರದೀಪ್‌ ಸಿಂಗ್‌ ಯೆರೂರು ಅವರಿದ್ದ ವಿಭಾಗೀಯ ಪೀಠ ಹೇಳಿತ್ತು.

No stories found.
Kannada Bar & Bench
kannada.barandbench.com