ಜಾರಕಿಹೊಳಿ ನಡೆ-ನುಡಿಯಲ್ಲಿ ವೈರುಧ್ಯ ಗುರುತಿಸಿದ ಸಂತ್ರಸ್ತೆ; ಜಾರಕಿಹೊಳಿ, ಎಸ್‌ಐಟಿಗೆ ಹೈಕೋರ್ಟ್‌ ನೋಟಿಸ್‌

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸದಾಶಿನಗರ ಠಾಣೆಯಲ್ಲಿ ತಮ್ಮ ಆಪ್ತ ಎಂ ವಿ ನಾಗರಾಜ್‌ ಮೂಲಕ ದಾಖಲಿಸಿರುವ ದೂರಿನಲ್ಲಿ ಸ್ಪಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಲಾಗಿಲ್ಲ. ಹೀಗಾಗಿ, ಇದು ವಜಾಕ್ಕೆ ಅರ್ಹ ಎಂದು ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಜಾರಕಿಹೊಳಿ ನಡೆ-ನುಡಿಯಲ್ಲಿ ವೈರುಧ್ಯ ಗುರುತಿಸಿದ ಸಂತ್ರಸ್ತೆ; ಜಾರಕಿಹೊಳಿ, ಎಸ್‌ಐಟಿಗೆ ಹೈಕೋರ್ಟ್‌ ನೋಟಿಸ್‌
Published on

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಬ್ಲ್ಯಾಕ್‌ ಮೇಲ್‌ ಪ್ರಕರಣದ ವಿಚಾರಣೆಗೆ ತಮ್ಮ ರಿಟ್‌ ಮನವಿ ಇತ್ಯರ್ಥವಾಗುವವರೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಜಾರಕಿಹೊಳಿ, ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್ತ ಯಾದವ್‌ ಅವರಿದ್ದ ಏಕಸದಸ್ಯ ಪೀಠವು ಸಂತ್ರಸ್ತ ಯುವತಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ್ದು, ಪ್ರಕರಣವನ್ನು ಜೂನ್‌ 21ಕ್ಕೆ ಮುಂದೂಡಿದ್ದಾರೆ.

ಸದಾಶಿನಗರ ಠಾಣೆಯಲ್ಲಿ ಜಾರಕಿಹೊಳಿ ಅವರ ಆಪ್ತ ಎಂ ವಿ ನಾಗರಾಜ್‌ ಅವರ ಮೂಲಕ ದಾಖಲಿಸಿರುವ ದೂರಿನಲ್ಲಿ ಸ್ಪಷ್ಟವಾಗಿ ಯಾರ ಹೆಸರನ್ನೂ ಉಲ್ಲೇಖಿಸಲಾಗಿಲ್ಲ. ಬ್ಲ್ಯಾಕ್‌ ಮೇಲ್‌, ಹನಿಟ್ರ್ಯಾಪ್‌ ಮುಂತಾದ ಆರೋಪಗಳ ಮೂಲಕ ತನ್ನ ಘನತೆಯನ್ನು ನಾಶ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಂತ್ರಸ್ತೆ ಯುವತಿ ರಿಟ್‌ ಮನವಿಯಲ್ಲಿ ಉಲ್ಲೇಖಿಸಿದ್ದು, ಜಾರಕಿಹೊಳಿ ಅವರು ತಮ್ಮ ಆಪ್ತನ ಮೂಲಕ ನೀಡಿರುವ ದೂರನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮಧ್ಯಂತರ ಕೋರಿಕೆಗೆ ಸಂತ್ರಸ್ತ ಯುವತಿ ನೀಡಿರುವ ಆಧಾರಗಳು:

  • ಪ್ರತಿವಾದಿ ರಮೇಶ್‌ ಜಾರಕಿಹೊಳಿ ಅವರು ಹಲವು ತಪ್ಪುಗಳನ್ನು ಮಾಡಿದ್ದು ಈ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಅಗತ್ಯ. ನ್ಯಾಯಾಲಯ ಈಗ ಮಧ್ಯಪ್ರವೇಶಿಸಿ ತಪ್ಪುಗಳನ್ನು ಸರಿಪಡಿಸದಿದ್ದರೆ ಮುಂದೆಂದೂ ಅವುಗಳನ್ನು ಸರಿಪಡಿಸಲಾಗದು. ಹಾಗೆ ಮಾಡದಿದ್ದಲ್ಲಿ ಅರ್ಜಿದಾರೆಯಾದ ತಮಗೆ ಭಾರಿ ಸಂಕಷ್ಟ ಎದುರಾಗಲಿದೆ.

  • ಸದಾಶಿವನಗರದಲ್ಲಿ ಜಾರಕಿಹೊಳಿ ಆಪ್ತರು ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣವನ್ನು ಕಾನೂನಿನ ವೇದಿಕೆಯಾಗಿ ಬಳಿಸಿಕೊಂಡು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ತಾನು ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಲಾಗುತ್ತಿದೆ. ಮೊದಲನೇ ಪ್ರತಿವಾದಿಯಾದ ರಾಜ್ಯ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯಿಂದ ಇದು ಖಾತರಿಯಾಗುತ್ತದೆ.

  • ಎರಡನೇ ಪ್ರತಿವಾದಿಯಾದ ಜಾರಕಿಹೊಳಿ ಅವರ ಒತ್ತಡಕ್ಕೆ ಸಿಲುಕಿರುವ ಮೊದಲನೇ ಪ್ರತಿವಾದಿಯಾದ ರಾಜ್ಯ ಸರ್ಕಾರವು ಜಾರಕಿಹೊಳಿ ಅವರ ಹಿತಾಸಕ್ತಿ ಕಾಯುವುದಕ್ಕಾಗಿ ಬ್ಲ್ಯಾಕ್‌ ಮೇಲ್‌ ಪ್ರಕರಣದಲ್ಲಿ ಅರ್ಜಿದಾರೆಯಾದ ನನ್ನನ್ನು ತಪ್ಪಿತಸ್ಥೆಯಾಗಿಸುವುದರ ಜೊತೆಗೆ ಜಾರಕಿಹೊಳಿ ಅವರನ್ನು ಪ್ರಕರಣದಿಂದ ಪಾರು ಮಾಡಲು ಯತ್ನಿಸುತ್ತಿದೆ. ಇದು ರಾಜ್ಯ ಸರ್ಕಾರದ ಆಕ್ಷೇಪಣೆಯಲ್ಲಿ ದೃಢವಾಗಿರುವುದರಿಂದ ಬೇರೆ ದಾರಿ ಇಲ್ಲದೇ ಮಧ್ಯಂತರ ಪರಿಹಾರವನ್ನು ನಿಮ್ಮಲ್ಲಿ (ಹೈಕೋರ್ಟ್‌) ಕೋರುತ್ತಿರುವುದಾಗಿ ಸಂತ್ರಸ್ತೆ ರಿಟ್‌ ಮನವಿಯಲ್ಲಿ ವಿವರಿಸಿದ್ದಾರೆ.

Also Read
ಜಾರಕಿಹೊಳಿ ಸಿ ಡಿ ಪ್ರಕರಣ: ಎಸ್‌ಐಟಿ ತನಿಖೆಗೆ ಸಂತ್ರಸ್ತೆ ಆಕ್ಷೇಪ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಸಂತ್ರಸ್ತ ಯುವತಿಯ ಎಫ್‌ಐಆರ್‌ ರದ್ದತಿ ಕೋರಿಕೆಗೆ ಆಧಾರಗಳು:

  • ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ಮಾರ್ಚ್‌ 2ರಂದು ನೀಡಿದ ದೂರಿಗೆ ಪ್ರತಿ ದೂರಿನ ರೂಪದಲ್ಲಿ ಮಾರ್ಚ್‌ 13ರಂದು ರಮೇಶ್‌ ಜಾರಕಿಹೊಳಿ ಆಪ್ತರ ಮೂಲಕ ಆಕ್ಷೇಪಾರ್ಹವಾದ ದೂರು ದಾಖಲಿಸಿದ್ದಾರೆ. ಇದು ಪ್ರತಿ ದೂರು ನೀಡುವ ಯತ್ನವಲ್ಲದೇ ಬೇರೇನೂ ಅಲ್ಲವಾದ್ದರಿಂದ ಅದು ವಜಾಕ್ಕೆ ಅರ್ಹ.

  • ರಮೇಶ್‌ ಜಾರಕಿಹೊಳಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದಿನೇಶ್‌ ಕಲ್ಲಹಳ್ಳಿ ದೂರು ನೀಡಿದ್ದರು. ಜಾರಕಿಹೊಳಿ ಅವರನ್ನು ರಕ್ಷಿಸುವ ಉದ್ದೇಶದಿಂದ ಮೇಲ್ನೋಟಕ್ಕೆ ಅವರ ವಿರುದ್ಧದ ಆರೋಪಗಳು ಗಂಭೀರ ಎನ್ನುವಂತಿದ್ದರೂ ಪೊಲೀಸರು ದೂರು ದಾಖಲಿಸಿಲ್ಲ. ಇದು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಿಗೆ ವಿರುದ್ಧವಾದ ನಡೆಯಾಗಿದೆ.

  • ಸೆಕ್ಸ್‌ ಸಿಡಿಗೆ ಸಂಬಂಧಿಸಿದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದರೂ ಮೇಲ್ನೋಟಕ್ಕೆ ಅವು ಗುರುತರವಾಗಿವೆ ಎಂಬುದನ್ನು ಪೊಲೀಸರು ಪರಿಗಣಿಸಿಲ್ಲ. ಇದು ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸುವ ಉದ್ದೇಶವಲ್ಲದೇ ಮತ್ತೇನು ಅಲ್ಲ.

  • ದಿನೇಶ್‌ ಕಲ್ಲಹಳ್ಳಿ ದೂರು ನೀಡಿದ ಬಳಿಕ ಸೆಕ್ಸ್‌ ಸಿಡಿ ನಕಲಿಯಾಗಿದ್ದು, ಸಿಡಿಯಲ್ಲಿ ಇರುವುದು ತಾನಲ್ಲ ಮತ್ತು ಸಿಡಿಯನ್ನು ವಿರೂಪಗೊಳಿಸಲಾಗಿದೆ. ಅಲ್ಲದೇ ಯುವತಿಯ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದರು.

  • ಮಾರ್ಚ್‌ 2ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಸೆಕ್ಸ್‌ ಸಿಡಿಗೆ ಸಂಬಂಧಿಸಿದಂತೆ ನಕಲಿ ಚಿತ್ರಗಳನ್ನು ಬಳಸಿ ತಿರುಚಲಾಗಿದೆ. ಇದರ ತನಿಖೆ ನಡೆಸುವಂತೆ ಮಾರ್ಚ್‌ 9ರಂದು ರಮೇಶ್‌ ಜಾರಕಿಹೊಳಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದರಂತೆ ಸರ್ಕಾರವು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ತನಿಖೆಗೆ ಎಸ್‌ಐಟಿ ರಚಿಸುವಂತೆ ಆದೇಶಿಸಿದೆ. ಅದರಂತೆಯೇ ಜಾರಕಿಹೊಳಿ ಅವರಿಂದ ಯಾವುದೇ ತೆರನಾದ ದೂರು ದಾಖಲಾಗದೆಯೇ ಇದ್ದರೂ ಮಾರ್ಚ್‌ 11ರಂದು ಎಸ್‌ಐಟಿ ರಚಿಸಲಾಗಿದೆ. ಜಾರಕಿಹೊಳಿ ಮಾರ್ಚ್‌ 9ರಂದು ಪತ್ರ ಬರೆದಿರುವುದು ಮತ್ತು ಮಾರ್ಚ್‌ 11ರಂದು ಎಸ್‌ಐಟಿ ರಚನೆಯಾಗಿರುವುದು ಗಮನಿಸಿದರೆ ರಮೇಶ್‌ ಜಾರಕಿಹೊಳಿ ಅವರು ತನಿಖಾ ಸಂಸ್ಥೆಯ ಮೇಲೆ ಯಾವ ತೆರನಾದ ಪ್ರಭಾವ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ.

  • ಮಾರ್ಚ್‌ 2ರಂದು ದಿನೇಶ್‌ ಕಲ್ಲಹಳ್ಳಿ ದೂರು ದಾಖಲಿಸಿದ ಬಳಿಕ 11 ದಿನಗಳ ನಂತರ ಮಾರ್ಚ್‌ 13ರಂದು ಜಾರಕಿಹೊಳಿ ಪ್ರತಿ ದೂರು ದಾಖಲಿಸಿರುವುದು ಮೇಲ್ನೋಟಕ್ಕೆ ತಮ್ಮ ವಿರುದ್ಧದ ಗಂಭೀರ ಆರೋಪಗಳಿಂದ ತಪ್ಪಿಸಿಕೊಳ್ಳುವುದಾಗಿದೆ. ಅಲ್ಲದೇ, ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಮತ್ತು ಅಧಿಕಾರ ದುರ್ಬಳಕೆ ಪ್ರಕರಣದ ತನಿಖೆಯಿಂದ ಪೊಲೀಸರು ಮೇಲ್ನೋಟಕ್ಕೆ ಹಿಂದೆ ಸರಿದಿದ್ದಾರೆ. ಇದರ ಮಧ್ಯೆ, ಮಾರ್ಚ್‌ 13ರಂದು ಜಾರಕಿಹೊಳಿ ಆಪ್ತರು ದಾಖಲಿಸಿದ ಬ್ಲ್ಯಾಕ್‌ ಮೇಲ್‌ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದೆ.

  • ಬ್ಲ್ಯಾಕ್‌ಮೇಲ್‌ ಪ್ರಕರಣ ದಾಖಲಿಸುವಾಗ ಜಾರಕಿಹೊಳಿ ಅವರು ತಾನು ಪಿತೂರಿಗೆ ಸಿಲುಕಿದ್ದು, ಮೂರ್ನಾಲ್ಕು ತಿಂಗಳಿಂದ ನನ್ನನ್ನು ಸುಲಿಗೆ ಮಾಡಲಾಗಿದೆ ಎಂದಿದ್ದಾರೆ. ಇದರ ಅರ್ಥ ಮೂರ್ನಾಲ್ಕು ತಿಂಗಳ ಬಳಿಕ ದೂರು ದಾಖಲಿಸಿದ್ದಾರೆ. ಏತಕ್ಕಾಗಿ ಇಷ್ಟು ತಡವಾಗಿ ದೂರು ದಾಖಲಿಸಲಾಗಿದೆ ಎಂಬುದನ್ನು ಅವರು ವಿವರಿಸಿಲ್ಲ.

  • ಜಾರಕಿಹೊಳಿ ಆಪ್ತರ ಮೂಲಕ ದಾಖಲಿಸಲಾದ ದೂರಿನಲ್ಲಿ ಆರೋಪಿಗಳನ್ನು ಹೆಸರಿಸಿಲ್ಲ. ಅನಾಮಿಕರ ವಿರುದ್ಧ ಅವರು ಆರೋಪಿಸಿರುವುದು ಅಪರಾಧದ ಬಗ್ಗೆ ಅನುಮಾನ ಮೂಡಿಸುತ್ತದೆ.

  • ತಮ್ಮ ದೂರಿನಲ್ಲಿ ಜಾರಕಿಹೊಳಿ ಅವರು ಅಪರಾಧದ ವಿವರ, ಅದು ನಡೆದ ಸ್ಥಳ, ಎಷ್ಟು ಹಣ ಸುಲಿಗೆ ಮಾಡಲಾಗಿದೆ, ಸಂಪರ್ಕಿಸಲಾದ ವ್ಯಕ್ತಿಗಳ ವಿವರ, ಬ್ಲ್ಯಾಕ್‌ಮೇಲ್‌/ಸುಲಿಗೆ ವಿಷಯದ ವಿವರ ನೀಡಲಾಗಿಲ್ಲ. ಈ ವಿಚಾರಗಳ ಬಗ್ಗೆ ದೂರಿನಲ್ಲಿ ಮೌನವಹಿಸಲಾಗಿದ್ದು, ಇದರಿಂದ ಅಪರಾಧಗಳ ಬಗ್ಗೆ ಶಂಕೆ ಮೂಡುತ್ತದೆ.

  • ಮಾರ್ಚ್‌ನಲ್ಲಿ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಮತ್ತು ಅಧಿಕಾರ ದುರ್ಬಳಕೆಯ ದೂರು ದಾಖಲಿಸಲಾಗಿದೆ. ಆ ಬಳಿಕ ತನ್ನ ಜೀವಕ್ಕೆ ಜಾರಕಿಹೊಳಿ ಅವರಿಂದ ಬೆದರಿಕೆ ಇರುವುದನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಇಮೇಲ್‌ ಮೂಲಕ ಪತ್ರ ಬರೆದಿದ್ದೇನೆ. ಇದರಲ್ಲಿ ಅತ್ಯಾಚಾರ ಸಂತ್ರಸ್ತೆಯಾದ ನನ್ನ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಎದುರು ಸಿಆರ್‌ಪಿಸಿ ಸೆಕ್ಷನ್‌ 164(5)ರ ದಾಖಲಿಸಲು ಕೋರಿದ್ದೇನೆ. ಅದರಂತೆಯೇ ಪೊಲೀಸರ ರಕ್ಷಣೆಯ ನಡುವೆ ಮ್ಯಾಜಿಸ್ಟ್ರೇಟ್‌ ಎದುರು ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಹೇಳಿಕೆ ದಾಖಲಿಸಿದ್ದೇನೆ.

  • ಎಸ್‌ಐಟಿಯು ಸಿಆರ್‌ಪಿಸಿ ಸೆಕ್ಷನ್‌ 161ರ ಅಡಿ ನನ್ನ ಹೇಳಿಕೆ ದಾಖಲಿಸಿಕೊಂಡ ಬಳಿಕ ಘಟನೆ ನಡೆದ ಸ್ಥಳಕ್ಕೆ ತೆರಳಿ, ಮಹಜರು ಮಾಡಿ, ಇತರರಿಂದ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡ ಬಳಿಕ ಅರ್ಜಿದಾರೆಯಾದ ನನ್ನಿಂದ ಹೆಚ್ಚಿನ ಹೇಳಿಕೆಯನ್ನು ಎಸ್‌ಐಟಿ ಪಡೆದಿದೆ. ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಜಾರಕಿಹೊಳಿ ಅವರು ಸಿ.ಡಿ ನಕಲಿಯಾಗಿದ್ದು, ಅದರಲ್ಲಿರುವ ಅಂಶಗಳು ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಅಲ್ಲಗಳೆದಿದ್ದಾರೆ. ಅರ್ಜಿದಾರೆಯ ಜೊತೆ ಯಾವುದೇ ಸಂಬಂಧವಿಲ್ಲ ಎಂದಿರುವ ಜಾರಕಿಹೊಳಿ ಅವರು ಸಂತ್ರಸ್ತೆಯ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಎರಡು ತಿಂಗಳ ಕಾಲ ಜಾರಕಿಹೊಳಿ ಅವರು ಹೆಚ್ಚಿನ ತನಿಖೆಯಿಂದ ಹಿಂದೆ ಸರಿದಿದ್ದು, ಎಸ್‌ಐಟಿ ಹಲವು ನೋಟಿಸ್‌ ನೀಡಿದ ಬಳಿಕ ಲಾಕ್‌ಡೌನ್‌ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಇದರಲ್ಲಿ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಸೆಕ್ಸ್‌ ಸಿ.ಡಿ. ನಕಲಿಯಲ್ಲ, ಅದನ್ನು ತಿರುಚಲಾಗಿಲ್ಲ ಮತ್ತು ಒಪ್ಪಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದಾಗಿ ತಿಳಿಸಿದ್ದರು.

  • ಬ್ಲ್ಯಾಕ್‌ ಮೇಲ್‌ ಪ್ರಕರಣ ದಾಖಲಿಸಿದ 70 ದಿನಗಳ ಬಳಿಕ ಎಸ್‌ಐಟಿ ಮುಂದೆ ಹಾಜರಾಗಿರುವ ಜಾರಕಿಹೊಳಿ ಅವರು ತಮ್ಮನ್ನು ಒಳಗೊಂಡ ಸೆಕ್ಸ್‌ ಸಿ.ಡಿ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮತ್ತು ಹನಿಟ್ರ್ಯಾಪ್‌ ಮಾಡಿದ್ದು, ಅರ್ಜಿದಾರೆ ಮತ್ತು ಇತರರು ತನ್ನನ್ನು ಸುಲಿಗೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಜಾರಕಿಹೊಳಿ ಅವರ ಹೇಳಿಕೆ ಮೇಲ್ನೋಟಕ್ಕೆ ತಿಳಿಸುವುದೇನೆಂದರೆ ಅದು ದಿನೇಶ್‌ ಕಲ್ಲಹಳ್ಳಿ ದೂರು ದಾಖಲಿಸಿದ್ದಕ್ಕೆ ಪ್ರತಿ ದೂರಾಗಿದೆ. ಹೀಗಾಗಿ, ಬ್ಲ್ಯಾಕ್‌ ಮೇಲ್‌ ಪ್ರಕರಣವು ಕಾನೂನಿನ ದುರ್ಬಳಕೆಯಾಗಿರುವುದರಿಂದ ಅದು ವಜಾಕ್ಕೆ ಅರ್ಹವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

Kannada Bar & Bench
kannada.barandbench.com