ಉ. ಪ್ರದೇಶ ಪೊಲೀಸರು, ಅಧಿಕಾರಿಗಳಿಗೆ ನ್ಯಾಯಾಲಯ ಆದೇಶ ಉಲ್ಲಂಘನೆ ಹೆಮ್ಮೆಯ ವಿಚಾರ: ಅಲಾಹಾಬಾದ್ ಹೈಕೋರ್ಟ್ ತರಾಟೆ

ಹೈಕೋರ್ಟ್ ನೀಡಿದ ತಡೆಯಾಜ್ಞೆ ಉಲ್ಲಂಘಿಸಿ ಅಧಿಕಾರಿಗಳು ಮನೆ ತೆರವುಗೊಳಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
Allahabad High Court
Allahabad High Court
Published on

ನ್ಯಾಯಾಲಯ ಆದೇಶ  ಉಲ್ಲಂಘಿಸುವುದೆಂದರೆ ಉತ್ತರ ಪ್ರದೇಶ ಪೊಲೀಸರು, ಅಧಿಕಾರಿಗಳಿಗೆ ಹೆಮ್ಮೆಯ ವಿಚಾರವಾಗಿದ್ದು ಅಂತಹ ಕೆಲಸ ಅವರೊಳಗೆ ಅಪರಾಧಿ ಭಾವ ಮೂಡಿಸುವುದಕ್ಕಿಂತಲೂ ಸಾಧನೆಯ ಭಾವನೆ ಮೂಡಿಸುತ್ತಿದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ತರಾಟೆಗೆ ತೆಗೆದುಕೊಂಡಿದೆ  [ಶ್ರೀಮತಿ ಛಾಮಾ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .

ಬಾಗ್‌ಪತ್ ಜಿಲ್ಲೆಯಲ್ಲಿ ಹೈಕೋರ್ಟ್‌ನ ತಡೆಯಾಜ್ಞೆ ಮೀರಿ ಅಧಿಕಾರಿಗಳು ಮನೆ ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ  ನ್ಯಾಯಮೂರ್ತಿ ಜೆಜೆ ಮುನೀರ್ ಅವರಿದ್ದ ಏಕಸದಸ್ಯ ಪೀಠ ಈ ವಿಚಾರ ತಿಳಿಸಿದೆ.

Also Read
ಹಲ್ಲೆಗೊಳಗಾದ ಮುಸ್ಲಿಂ ವಿದ್ಯಾರ್ಥಿಯ ಶಿಕ್ಷಣಕ್ಕೆ ಹಣ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಸೂಚನೆ

“ಸರ್ಕಾರಿ ಅಧಿಕಾರಿಗಳು ಅದರಲ್ಲಿಯೂ ಪೊಲೀಸರು ಮತ್ತು ನಾಗರಿಕ ಆಡಳಿತದಲ್ಲಿರುವವರಿಗೆ ನ್ಯಾಯಾಂಗ ಆದೇಶ ಉಲ್ಲಂಘಿಸುವುದರಲ್ಲಿ ಒಂದು ಬಗೆಯ ಹೆಮ್ಮೆಪಟ್ಟುಕೊಳ್ಳುವಂತಹ ಸಂಸ್ಕೃತಿ ಬೆಳೆದಿರುವಂತೆ ಕಾಣುತ್ತಿದೆ.  ಅಂತಹ ಕೆಲಸ ಅವರೊಳಗೆ ಅಪರಾಧಿ ಭಾವ ಮೂಡಿಸುವುದಕ್ಕಿಂತಲೂ ಸಾಧನೆಯ ಭಾವನೆ ತರುತ್ತಿರುವಂತೆ ತೋರುತ್ತಿದೆ. ಪ್ರಕರಣವನ್ನು ಹಗುರವಾಗಿ ಪರಿಗಣಿಸಲಾಗದು. ನ್ಯಾಯಾಂಗ ಆದೇಶ ಉಲ್ಲಂಘಿಸಿ ಕೈಗೊಂಡ ಯಾವುದೇ ಕ್ರಮ ಅದರ ಸ್ವರೂಪ ಏನೇ ಇರಲಿ, ಅದು ಶೂನ್ಯವಾಗುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.

ಕಟ್ಟಡ ಕೆಡವುವುದು ಒಂದು ಭೌತಿಕ ಕ್ರಿಯೆಯಾಗಿದ್ದು, ಒಮ್ಮೆ ಅದನ್ನು ಪೂರ್ಣಗೊಳಿಸಿದ ನಂತರ ನ್ಯಾಯಾಲಯಕ್ಕೆ  ಹಾನಿ ಪರಿಹಾರ ಅಥವಾ ಮರುಪಾವತಿ ಎಂಬ ಎರಡು ಆಯ್ಕೆಗಳು ಮಾತ್ರ ಉಳಿಯುತ್ತವೆ ಎಂದ ಪೀಠ ನಮ್ಮ ಅಭಿಪ್ರಾಯದಲ್ಲಿ, ಇದು ಪುನರ್ನಿರ್ಮಾಣಕ್ಕಾಗಿ ಮರುಪಾವತಿ ಮಾಡುವಂತೆ ಸರ್ಕಾರಕ್ಕೆ ಆದೇಶಿಸಬೇಕಾದ ಪ್ರಕರಣವಾಗಿರಬಹುದು ಎಂದಿತು.

Also Read
ವಕೀಲರು, ಪ್ರಾಧ್ಯಾಪಕರ ಮನೆ ಧ್ವಂಸ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ಹೈಕೋರ್ಟ್ ಜಾಲತಾಣದಲ್ಲಿ ತಡೆಯಾಜ್ಞೆ ತಡವಾಗಿ ಪ್ರಕಟವಾಗಿದೆ ಎಂಬ ಅಧಿಕಾರಿಗಳ ಸಮಜಾಯಿಷಿಯನ್ನು ಒಪ್ಪದ ನ್ಯಾಯಾಲಯ ನ್ಯಾಯಾಲಯ ಆದೇಶ ನೀಡಿರುವುದು ತಿಳಿಯುತ್ತಿದ್ದಂತೆಯೇ ತೆರವು ಕಾರ್ಯಾಚರಣೆಯಂತಹ ಕಠೋರ ಕ್ರಮಗಳಿಂದ ದೂರ ಉಳಿಯುವುದು ಅಧಿಕಾರಿಗಳ ಕರ್ತವ್ಯ ಎಂದು ನುಡಿಯಿತು. 

ಪ್ರಕರಣದ ಸಂಬಂಧ ಬಗ್‌ಪತ್‌ ಜಿಲ್ಲಾಧಿಕಾರಿ ಉಪ ವಿಭಾಗಾಧಿಕಾರಿ, ವಿವಿಧ ತಹಶೀಲ್ದಾರ್‌ಗಳಿಗೆ ನೋಟಿಸ್‌ ನೀಡಿರುವ ಅದು ಈ ಮೊದಲು ಇದ್ದಂತೆ ಕಟ್ಟಡವನ್ನು ಏಕೆ ಮರುನಿರ್ಮಿಸಿಕೊಡಬಾರದು ಎಂಬ ವಿವರಣೆ ಇರುವ ಪ್ರಮಾಣಪತ್ರವನ್ನು ಜುಲೈ 7ರೊಳಗೆ ಸಲ್ಲಿಸುವಂತೆ ಸೂಚಿಸಿತು.

Kannada Bar & Bench
kannada.barandbench.com