Gavel
Gavel

ನ್ಯಾಯಾಧೀಶರು ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿ ಎಂದು ಆಕ್ಷೇಪ: ಪ್ರಕರಣ ವರ್ಗಾಯಿಸಲು ನ್ಯಾಯಾಧೀಶರ ಮನವಿ

ತಾನು ಕಾಲೇಜಿನ ವಿದ್ಯಾರ್ಥಿಯಾಗಿದ್ದುದು ಸತ್ಯ ಎಂದು ನುಡಿದಿರುವ ನ್ಯಾಯಾಧೀಶರು ಆದರೆ ಮೊಕದ್ದಮೆದಾರರನ್ನು ತಾವು ಯಾವುದೇ ಸಂದರ್ಭದಲ್ಲಿ ನೇರ ಇಲ್ಲವೇ ಪರೋಕ್ಷವಾಗಿ ಮಾತನಾಡಿಸಿಲ್ಲ ಎಂದಿದ್ದಾರೆ.
Published on

ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟ ಮಾಡದಂತೆ ಏಕಪಕ್ಷೀಯ ಆದೇಶ ನೀಡಿದ್ದ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ತಾವು ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಅವರು ಮನವಿ ಮಾಡಿದ್ದಾರೆ.

ಪ್ರಕರಣವನ್ನು ಅಗತ್ಯ ಆದೇಶಗಳಿಗಾಗಿ ಪ್ರಧಾನ ನಗರ ಸಿವಿಲ್ ಸೆಷನ್ಸ್ ನ್ಯಾಯಾಧೀಶರ ಮುಂದೆ ಇಡುವುದು ಸೂಕ್ತ ಎಂದು  ಆಗಸ್ಟ್‌ 2ರಂದು ಅವರು ತಿಳಿಸಿದ್ದಾರೆ.

Also Read
ಧರ್ಮಸ್ಥಳದ ದೇವಸ್ಥಾನ, ಕಾರ್ಯದರ್ಶಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ನ್ಯಾಯಾಲಯದ ನಿರ್ಬಂಧ

ನ್ಯಾಯಾಲಯ ಜುಲೈ 18 ರಂದು ಹೊರಡಿಸಿದ್ದ ಪ್ರತಿಬಂಧಕಾದೇಶವನ್ನು ಜುಲೈ 24ರಂದು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು.

ನ್ಯಾಯಾಧೀಶರು ಮೊಕದ್ದಮೆ ಸಲ್ಲಿಸಿದ್ದ ಹರ್ಷೇಂದ್ರ ಕುಮಾರ್‌ ಅವರ ಕುಟುಂಬದಿಂದ ನಿರ್ವಹಿಸಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ತಮ್ಮ ವಕೀಲರಿಗೆ ಮನವಿ ಮಾಡಿದ್ದರು. ವಕೀಲರು ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಮತ್ತು ಪತ್ರ ಸಲ್ಲಿಸಿದ್ದರು.

ಇತ್ತ ಮೊಕದ್ದಮೆ ಹೂಡಿದ್ದ ಹರ್ಷೇಂದ್ರಕುಮಾರ್‌ ಪರ ವಕೀಲರು ಮೆಮೊ ಆಧಾರದಲ್ಲಿ ಮೊಕದ್ದಮೆ ವರ್ಗಾಯಿಸುವಂತಿಲ್ಲ ಎಂದು ವಾದಿಸಿದ್ದರು.

ತಾನು ಕಾಲೇಜಿನ ವಿದ್ಯಾರ್ಥಿಯಾಗಿದ್ದುದು ಸತ್ಯ ಎಂದು ನುಡಿದಿರುವ ನ್ಯಾಯಾಧೀಶರು ಆದರೆ ಮೊಕದ್ದಮೆದಾರರನ್ನು ತಾವು ಯಾವುದೇ ಸಂದರ್ಭದಲ್ಲಿ ನೇರ ಇಲ್ಲವೇ ಪರೋಕ್ಷವಾಗಿ ಮಾತನಾಡಿಸಿಲ್ಲ ಎಂದಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರೆಯುವಂತಾಗಲು ನ್ಯಾಯ ಒದಗಿಸಿದರಷ್ಟೇ ಸಾಲದು, ಅದು ಕಾಣುವಂತಿರಬೇಕು ಎಂದಿರುವ ಅವರು  ನಾನು ಈ ಮೊಕದ್ದಮೆಯಲ್ಲಿ ಪಕ್ಷಕಾರನಲ್ಲದಿದ್ದರೂ ಅಥವಾ ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲದಿದ್ದರೂ ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ ಕಾಯಿದೆ 1979 ರ ಸೆಕ್ಷನ್ 13(2)(b) ಪ್ರಕಾರ OS No.5185/2025 ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಪ್ರಧಾನ ನಗರ ಸಿವಿಲ್‌ ಸೆಷನ್ಸ್ ನ್ಯಾಯಾಧೀಶರಿಗೆ ವಿನಂತಿ ಸಲ್ಲಿಸುವುದು ಸೂಕ್ತಎಂದಿದ್ದಾರೆ. ಅದಕ್ಕೆ ಅನುಗುಣವಾಗಿ ಪತ್ರ ಸಲ್ಲಿಸಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ. ​

ಪ್ರಕರಣದ ಹಿನ್ನೆಲೆ: ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯ ಹಾಗೂ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್ ಅವರು 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳು ಸೇರಿದಂತೆ 8,842 ಲಿಂಕ್‌ಗಳ ಪಟ್ಟಿಯನ್ನು ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಮೂಲ ದಾವೆ ಹೂಡಿದ್ದರು.

Also Read
ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಮಹೇಶ್‌ ತಿಮರೋಡಿಗೆ ಹೈಕೋರ್ಟ್‌ ನಿರ್ಬಂಧ

ಧರ್ಮಸ್ಥಳ ಠಾಣೆಯಲ್ಲಿ ಸ್ವಚ್ಛತಾ ಕಾರ್ಮಿಕ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧ ಆರೋಪಗಳು ಇಲ್ಲದಿದ್ದರೂ ತಮ್ಮ ಕುಟುಂಬ, ದೇವಾಲಯ ಹಾಗೂ ಸಂಸ್ಥೆಗಳ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್‌ ಆಕ್ಷೇಪಿಸಿದ್ದರು.

ವಾದ ಆಲಿಸಿದ್ದ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಇಲ್ಲವೇ ಹಂಚದಂತೆ ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳಿಗೆ ನಿರ್ಬಂಧಿಸಿ ಜುಲೈ 8ರಂದು ಏಕಪಕ್ಷಕೀಯ ಪ್ರತಿಬಂಧಕಾದೇಶ ಹೊರಡಿಸಿದ್ದರು. ಇದನ್ನು ಹೈಕೋರ್ಟ್‌ ಆಗಸ್ಟ್‌ 1ರಂದು ರದ್ದುಪಡಿಸಿತ್ತು.

Kannada Bar & Bench
kannada.barandbench.com