ಜನ ಸಾಮಾನ್ಯರು ಮತ್ತು ದಾವೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನ ಒಟ್ಟು 197 ಪ್ರಮುಖ ತೀರ್ಪುಗಳನ್ನು ಕನ್ನಡೀಕರಿಸಿ, ಪ್ರಕಟಿಸಿರುವ ಜಾಲತಾಣದ ಪೇಜ್‌ಗಳನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಆರಂಭಿಸುವ ಮೂಲಕ ಐತಿಹಾಸಿಕ ಮಹತ್ವದ ಹೆಜ್ಜೆ ಇರಿಸಿದೆ. ಆ ಮೂಲಕ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ಪ್ರಮುಖ ತೀರ್ಪುಗಳು ಕನ್ನಡದಲ್ಲಿ ಲಭ್ಯವಾಗಬೇಕು ಎನ್ನುವ ಬಹುದಿನದ ಬೇಡಿಕೆಯ ಈಡೇರಿಕೆಗೆ ಮೊದಲ ಹೆಜ್ಜೆ ಇರಿಸಿದಂತಾಗಿದೆ.
ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರ ಹೈಕೋರ್ಟ್‌ಗಳು ಈಗಾಗಲೇ ಸ್ಥಳೀಯ ಭಾಷೆಯಲ್ಲಿ ತೀರ್ಪುಗಳನ್ನು ಪ್ರಕಟಿಸಲು ಆರಂಭಿಸಿವೆ. ಆದರೆ, ಅತಿ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸಿರುವುದು ಕರ್ನಾಟಕ ಹೈಕೋರ್ಟ್ ಎನ್ನಲಾಗಿದೆ.
ಮೊದಲ ಹಂತದಲ್ಲಿ ವೆಬ್‌ಪೇಜ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ 169 (https://karnatakajudiciary.kar.nic.in/hck_judgments.php) ಮತ್ತು ಸುಪ್ರೀಂ ಕೋರ್ಟ್‌ನ 28 (https://karnatakajudiciary.kar.nic.in/sci_judgments.php) ಕನ್ನಡೀಕರಿಸಿದ ತೀರ್ಪುಗಳನ್ನು ಪ್ರಕಟಿಸಲಾಗಿದೆ. ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಸಹಾಯದಿಂದ ತೀರ್ಪುಗಳು ಮತ್ತು ನ್ಯಾಯಾಂಗದ ದಾಖಲೆಗಳನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವ ಮೂಲಕ ನ್ಯಾಯದಾನ ಪಡೆಯುವಿಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಇದರ ಭಾಗವಾಗಿ ಕನ್ನಡೀಕರಿಸಿದ ತೀರ್ಪುಗಳ ವೆಬ್‌ಪೇಜ್ ಅನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಬಾಲಚಂದ್ರ ವರಾಳೆ ಅವರು ಅನಾವರಣಗೊಳಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ತೀರ್ಪುಗಳು ವೆಬ್‌ಪೇಜ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ʼಸುವಾಸ್ʼ ಕೃತಕ ಬುದ್ದಿಮತ್ತೆ ಟೂಲ್ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳು ಮತ್ತು ತೀರ್ಪುಗಳನ್ನು ಕನ್ನಡೀಕರಿಸಲಾಗುತ್ತಿದೆ. ದೇಶದ ಸ್ಥಳೀಯ ಭಾಷೆಗಳಲ್ಲಿ ನ್ಯಾಯಾಂಗ ದಾಖಲೆ ಮತ್ತು ತೀರ್ಪುಗಳನ್ನು ಜನಸಾಮಾನ್ಯರಿಗೆ ಒದಗಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ನೇತೃತ್ವದಲ್ಲಿ ʼಎಐ ಸಹಾಯದ ಕಾನೂನು ಅನುವಾದ ಸಲಹಾ ಸಮಿತಿʼಯನ್ನು ಈಚೆಗೆ ಸರ್ವೋಚ್ಚ ನ್ಯಾಯಾಲಯ ರಚಿಸಿತ್ತು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಕರ್ನಾಟಕ ಹೈಕೋರ್ಟ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜನಸಾಮಾನ್ಯರಲ್ಲಿ ಕಾನೂನು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಕನ್ನಡದಲ್ಲೇ ತೀರ್ಪುಗಳು ಲಭ್ಯವಾಗುವಂತೆ ಮಾಡುತ್ತಿರುವುದು ಜನಜಾಗೃತಿ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ.
ಎನ್ ಜಿ ದಿನೇಶ್, ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ (ಕಂಪ್ಯೂಟರ್ಸ್ ವಿಭಾಗ)
ರಾಜ್ಯಮಟ್ಟದಲ್ಲಿ ಈ ಉದ್ದೇಶ ಸಾಧಿಸಲು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದಲ್ಲಿ ಕರ್ನಾಟಕ ಹೈಕೋರ್ಟ್ ಸಮಿತಿ ರಚಿಸಿದೆ. ಸದರಿ ಸಮಿತಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಸಿ ಎಂ ಜೋಶಿ ಅವರು ಸದಸ್ಯರಾಗಿದ್ದಾರೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಹಾಲಿ ಇರುವ ಅನುವಾದಕರ ಸಹಾಯದಿಂದ ಅನುವಾದ ಪ್ರಾಜೆಕ್ಟ್ ಅನ್ನು ಆರಂಭಿಸಲಾಗಿದೆ.
“ಕರ್ನಾಟಕ ಹೈಕೋರ್ಟ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜನಸಾಮಾನ್ಯರಲ್ಲಿ ಕಾನೂನು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಕನ್ನಡದಲ್ಲೇ ತೀರ್ಪುಗಳು ಲಭ್ಯವಾಗುವಂತೆ ಮಾಡುತ್ತಿರುವುದು ಜನಜಾಗೃತಿ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ. ನಿರ್ದಿಷ್ಟ ವಲಯಗಳು ಉದಾಹರಣೆಗೆ ಪೊಲೀಸ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇತ್ಯಾದಿಗಳನ್ನು ಕೇಂದ್ರೀಕರಿಸಿ, ಜನ ಸಾಮಾನ್ಯರಿಗೆ ಅನುಕೂಲವಾಗುವ ತೀರ್ಪುಗಳನ್ನು ಕನ್ನಡೀಕರಿಸಿ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ (ಕಂಪ್ಯೂಟರ್ಸ್ ವಿಭಾಗ) ಎನ್ ಜಿ ದಿನೇಶ್ ಅವರು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದರು.