ಕನ್ನಡದಲ್ಲಿ ತೀರ್ಪು: ನ್ಯಾ. ಕೃಷ್ಣ ದೀಕ್ಷಿತ್‌, ನ್ಯಾ. ಜೋಶಿ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ

ಕೃತಕ ಬುದ್ದಿಮತ್ತೆ ನೆರವಿನಿಂದ ಭಾರಿ ಪ್ರಮಾಣದಲ್ಲಿ ಇಂಗ್ಲಿಷ್‌ ತೀರ್ಪುಗಳನ್ನು ಕನ್ನಡಕ್ಕೆ ಅನುವಾದ ಮಾಡುವುದು ಮತ್ತು ಆ ಮೂಲಕ ಸಾಮಾನ್ಯ ಜನರಿಗೂ ಕನ್ನಡದಲ್ಲಿ ತೀರ್ಪುಗಳನ್ನು ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
Justices Krishna S. Dixit and C M Joshi
Justices Krishna S. Dixit and C M Joshi

ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಬಳಕೆ ಮಾಡಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಈಚೆಗೆ ಆರಂಭಿಸಲಾಗಿದೆ. ಇದರ ಭಾಗವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಸಿ ಎಂ ಜೋಶಿ ಅವರ ನೇತೃತ್ವದಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳನ್ನು ಅನುವಾದ ಮಾಡುವ ಸಲಹಾ ಸಮಿತಿ ರಚಿಸಲಾಗಿದೆ.

ಕಳೆದ ತಿಂಗಳು ಸಮಿತಿ ರಚನೆಯಾಗಿದ್ದು, ಎರಡು ಮೂರು ಸಭೆಗಳನ್ನು ನಡೆಸಲಾಗಿದೆ. ಕೃತಕ ಬುದ್ದಿಮತ್ತೆ ನೆರವಿನಿಂದ ಭಾರಿ ಪ್ರಮಾಣದಲ್ಲಿ ಇಂಗ್ಲಿಷ್‌ ತೀರ್ಪುಗಳನ್ನು ಕನ್ನಡಕ್ಕೆ ಅನುವಾದ ಮಾಡುವುದು ಮತ್ತು ಆ ಮೂಲಕ ಸಾಮಾನ್ಯ ಜನರಿಗೂ ಕನ್ನಡದಲ್ಲಿ ತೀರ್ಪುಗಳನ್ನು ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಮಷೀನ್‌ ಲರ್ನಿಂಗ್‌ ಬಳಸಿ (ಯಾಂತ್ರಿಕ ಕಲಿಕೆ) ಕನ್ನಡದ ಪದಗಳನ್ನು ಸೇರಿಸುವ ಕೆಲಸ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ.

ಹೈಕೋರ್ಟ್‌ನಲ್ಲಿ ಲಭ್ಯವಿರುವ ಕಂಪ್ಯೂಟರ್‌ಗಳಲ್ಲಿ ಸುವಾಸ್‌ (ಸುಪ್ರೀಂ ಕೋರ್ಟ್‌ ವಿಧಿಕ್‌ ಅನುವಾದ್‌ ಸಾಫ್ಟ್‌ವೇರ್‌) ಸಾಫ್ಟ್‌ವೇರ್‌ ಅಳವಡಿಸಿ, ಹಾಲಿ ಇರುವ ಅನುವಾದಕರನ್ನು ಕೆಲಸಕ್ಕೆ ನಿಯೋಜಿಸಲಾಗಿದೆ. ಮಷೀನ್‌ ಲರ್ನಿಂಗ್‌ ಬಳಸಿ ಹೇಗೆ ಕೆಲಸ ಮಾಡಬೇಕು ಎಂಬ ಕುರಿತು ಅನುವಾದಕರಿಗೆ ಈಗಾಗಲೇ ತರಬೇತಿ ಆರಂಭಿಸಲಾಗಿದ್ದು, ಕೃತಕ ಬುದ್ಧಿಮತ್ತೆ ತಜ್ಞರು ತರಬೇತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

“ಇಂಗ್ಲಿಷ್‌ನಂತೆಯೇ ಕನ್ನಡದಲ್ಲಿಯೂ 'ವರದೀಕರಿಸುವ ತೀರ್ಪುಗಳು' ಎಂದು ಈಗಾಗಲೇ ಹೈಕೋರ್ಟ್‌ನಲ್ಲಿ ಇದೆ. ಅದು ಚಂದಾದಾರರಿಗೆ ಮಾತ್ರ ಲಭ್ಯವಿದೆ. ಅದನ್ನು ಆನ್‌ಲೈನ್‌ ಮಾಡಿ, ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಇದೇ ಸಂದರ್ಭದಲ್ಲಿ ಇಂಗ್ಲಿಷ್‌ ತೀರ್ಪುಗಳನ್ನು ಕೃತಕ ಬುದ್ಧಿಮತ್ತೆ ಮೂಲಕ ಕನ್ನಡಕ್ಕೆ ಅನುವಾದಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ತರಬೇತಿ ಆರಂಭವಾಗಿದೆ. ಇದಕ್ಕೆ ಮಷೀನ್‌ ಲರ್ನಿಂಗ್‌ ಆಗಬೇಕಿದ್ದು, ಅದನ್ನು ವ್ಯಾಪಕಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಹೇಗೆ ಮುನ್ನಡೆಯಬೇಕು ಎಂಬುದರ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಕುರಿತು ನೀತಿ-ನಿರೂಪಣೆಯ ತೀರ್ಮಾನವಾಗಬೇಕು” ಎಂದು ಕರ್ನಾಟಕ ಹೈಕೋರ್ಟ್‌ನ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಎನ್‌ ಜಿ ದಿನೇಶ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

Also Read
ಕೃತಕ ಬುದ್ಧಿಮತ್ತೆ ನ್ಯಾಯಿಕ ವರ್ಗಕ್ಕೆ ಪರ್ಯಾಯವಲ್ಲ, ಕೆಲ ಪ್ರಕರಣಗಳ ವಿಚಾರಣೆಗೆ ಅದನ್ನು ಬಳಸಬಹುದು: ನ್ಯಾ. ಕೊಹ್ಲಿ

ಮಾರ್ಚ್‌ನಿಂದ ನ್ಯೂಟ್ರಲ್‌ ಸೈಟೇಷನ್‌

ಪ್ರತಿಯೊಂದು ತೀರ್ಪು ಹೊರಬಿದ್ದಾಗ ಅದಕ್ಕೆ ವಿಶಿಷ್ಟ ಗುರುತು ನೀಡುವುದಕ್ಕೆ ತಟಸ್ಥ ಉಲ್ಲೇಖ (ನ್ಯೂಟ್ರಲ್‌ ಸೈಟೇಷನ್‌) ಎನ್ನಲಾಗುತ್ತದೆ. ಎಸ್‌ಸಿಸಿ ಆನ್‌ಲೈನ್‌, ಐಎಲ್‌ಆರ್‌, ಕೆಎಲ್‌ಜಿ ರೀತಿಯಲ್ಲಿ ಸ್ವತಂತ್ರವಾಗಿ ಪ್ರತಿಯೊಂದು ತೀರ್ಪಿಗೂ ವಿಶಿಷ್ಟ ಗುರುತು ನೀಡಲಾಗುತ್ತದೆ. ಇದರಿಂದ ಹೈಕೋರ್ಟ್‌ನ ಯಾವುದೇ ತೀರ್ಪನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಇದರಲ್ಲಿ ನಾವು ತೀರ್ಪನ್ನು ಲಭ್ಯವಾಗಿಸುವುದಲ್ಲದೆ, ಅದರ ಸ್ವಾಮಿತ್ವವನ್ನು ನಾವೇ ಹೊಂದಿದಂತಾಗುತ್ತದೆ. ಇದರಿಂದ ಮುಕ್ತವಾಗಿ, ಯಾವುದೇ ವೆಚ್ಚವಿಲ್ಲದೆ ಎಲ್ಲರಿಗೂ ತೀರ್ಪುಗಳು ಲಭ್ಯವಾಗಲಿವೆ. ಈ ಯೋಜನೆಯ ಶೇ. 80ರಷ್ಟು ಕೆಲಸ ಮುಗಿದಿದೆ. ಮಾರ್ಚ್‌ನಲ್ಲಿ ಇದು ಸಾರ್ವಜನಿಕವಾಗಿ ಲಭ್ಯವಾಗಲಿದೆ ಎಂದು ದಿನೇಶ್‌ ಅವರು ವಿವರಿಸಿದರು.

Related Stories

No stories found.
Kannada Bar & Bench
kannada.barandbench.com