ಕರ್ನಾಟಕ ಹೈಕೋರ್ಟ್‌ನ ಹಿರಿಯ ನಿವೃತ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರನ್ನು ಖಾಲಿ ಇರುವ ಎರಡನೇ ಉಪಲೋಕಾಯುಕ್ತ ಹುದ್ದೆಗೆ ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಉನ್ನತಾಧಿಕಾರ ಸಮಿತಿ ನಿರ್ಧರಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಬೀಳಬೇಕಿದೆ.
ಸಿಎಂ ಸಿದ್ದರಾಮಯ್ಯ, ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರನ್ನು ಒಳಗೊಂಡ ಸಮಿತಿಯು ಸೋಮವಾರ ಸಭೆ ನಡೆಸಿದ್ದು, ನ್ಯಾ. ವೀರಪ್ಪ ಅವರ ಹೆಸರಿಗೆ ಎಲ್ಲರೂ ಸಹಮತ ಸೂಚಿಸಿದರು ಎಂದು ಗೊತ್ತಾಗಿದೆ.
ಲೋಕಾಯುಕ್ತದ ಅಧಿಕಾರ ಮೊಟಗೊಳಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆಕ್ಷೇಪಾರ್ಹವಾದ ಆದೇಶಗಳನ್ನು ವಜಾಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿದ್ದ ನ್ಯಾಯಮೂರ್ತಿ ಬಿ ವೀರಪ್ಪ ಅವರು “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸ್ವತಂತ್ರ ಸಂಸ್ಥೆಯು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಕೆಲಸ ಮಾಡಲು ಅನುಮತಿಸುವ ಅಥವಾ ಬೆಂಬಲಿಸುವ ಇಚ್ಛೆಯನ್ನು ಯಾವುದೇ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ” ಎಂದಿದ್ದರು. ಈಗ ಅವರೇ ಉಪಲೋಕಾಯುಕ್ತದ ಹುದ್ದೆಗೆ ನೇಮಕಗೊಳ್ಳುವ ಸಾಧ್ಯತೆ ಇರುವುದರಿಂದ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿದೆ.
ಲೋಕಾಯುಕ್ತದಲ್ಲಿ ಎರಡು ಉಪ ಲೋಕಾಯುಕ್ತ ಹುದ್ದೆಗಳಿದ್ದು, ಒಂದರಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಇದ್ದಾರೆ. ಇನ್ನೊಬ್ಬರು ಉಪಲೋಕಾಯುಕ್ತರಾಗಿದ್ದ ಬಿ ಎಸ್ ಪಾಟೀಲ್ ಅವರಿಗೆ ಲೋಕಾಯುಕ್ತ ಹುದ್ದೆಗೆ ಬಡ್ತಿ ನೀಡಿದ ಹಿನ್ನೆಲೆಯಲ್ಲಿ ಆ ಹುದ್ದೆ ತೆರವಾಗಿತ್ತು. ಈಗ ಆ ಹುದ್ದೆಗೆ ವೀರಪ್ಪ ಅವರ ನೇಮಕಾತಿಯೊಂದಿಗೆ ಎಲ್ಲಾ ಹುದ್ದೆಗಳೂ ಭರ್ತಿಯಾದಂತಾಗಲಿದೆ.
2023ರ ಮೇನಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನ್ಯಾ. ವೀರಪ್ಪ ನಿವೃತ್ತರಾಗಿದ್ದರು. 2023ರ ಜುಲೈನಲ್ಲಿ ರಾಜ್ಯ ಸರ್ಕಾರವು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಸಲು ನಿವೃತ್ತ ನ್ಯಾ. ವೀರಪ್ಪ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿತ್ತು.
2015ರ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಬೀರಪ್ಪ ಅವರು 2016 ಡಿಸೆಂಬರ್‌ನಲ್ಲಿ ಕಾಯಂಗೊಂಡಿದ್ದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಕಾರ್ಯಕಾರಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ವೀರಪ್ಪ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಆಸ್ತಿ ವಿವರ ಸಾರ್ವಜನಿಕಗೊಳಿಸುವ ಮೂಲಕ ಪಾರದರ್ಶಕ ನಡೆ ಅನುಸರಿಸಿದ್ದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ವೀರಪ್ಪ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, 1988ರಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಕೀಲರಾಗಿಯೂ ಅವರು ಕೆಲಸ ಮಾಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನಕ್ಕಾಗಿ ಜಾಗ ಕಲ್ಪಿಸುವ ವಿಚಾರದಲ್ಲಿ ಅತ್ಯಂತ ಆಸ್ಥೆವಹಿಸಿದ್ದ ಅವರು ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.