ಕಾನೂನು ಸಂಸ್ಥೆಗಳ ವಕೀಲೆಯರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಕೊಲಿಜಿಯಂಗೆ ಕಪಿಲ್ ಸಿಬಲ್ ಒತ್ತಾಯ

ಪುರುಷ ವಕೀಲರಿಗೆ ಅವಕಾಶವಿತ್ತಿರುವಂತೆ ವಕೀಲೆಯರನ್ನೂ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
Seniour Advocate Kapil Sibal
Seniour Advocate Kapil Sibal
Published on

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಿಸಬೇಕೆಂದು ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ ​​ಅಧ್ಯಕ್ಷ ಕಪಿಲ್ ಸಿಬಲ್ ಶುಕ್ರವಾರ ಕೊಲಿಜಿಯಂಗೆ ಒತ್ತಾಯಿಸಿದ್ದಾರೆ.

ಸೆಪ್ಟೆಂಬರ್ 1 ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿಗೆ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಬಲ್‌ ಮಾತನಾಡಿದರು.

Also Read
ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕಿ ನ್ಯಾ. ಹಿಮಾ ಕೊಹ್ಲಿಗೆ ವಿದಾಯ ಹೇಳಿದ ಸುಪ್ರೀಂ ಕೋರ್ಟ್‌

ವಾಣಿಜ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣಿತರಾಗಿರುವ ಕಾನೂನು ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ವಕೀಲರು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆಯಬೇಕು ಎಂದು ಅವರು ನಿರ್ದಿಷ್ವವಾಗಿ ಸೂಚಿಸಿದರು.

ಸಿಬಲ್‌ ಅವರ ಭಾಷಣದ ಪ್ರಮುಖಾಂಶಗಳು

  • ವಾಣಿಜ್ಯ ಸಂಕೀರ್ಣತೆಗಳ ಬಗ್ಗೆ ತಿಳಿದಿರುವ ಮಹಿಳಾ ನ್ಯಾಯಮೂರ್ತಿಗಳ ಅವಶ್ಯಕತೆ ಇದೆ.

  • ಭಾರತೀಯ ಮಹಿಳೆ ಪೆಪ್ಸಿ ಕಂಪೆನಿಯ ಸಿಇಒ ಆಗಲು ಸಾಧ್ಯವಿದೆ ಎಂದಾದರೆ, ಕಾನೂನು ಸಂಸ್ಥೆಗಳಲ್ಲಿರು ಪ್ರತಿಭಾನ್ವಿತ ಮಹಿಳೆಯರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಏಕೆ ನೇಮಿಸಬಾರದು?

  • ಸಿಜೆಐ ಅವರು  ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಮಾಡುವ ಅಸಾಧಾರಣ ಮಹಿಳಾ ವಕೀಲರ ಕಾರ್ಯಕ್ಷಮತೆಯನ್ನು ಗಮನಿಸಬೇಕು.

  • ಪುರುಷ ವಕೀಲರಿಗೆ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುತ್ತಿರುವಾಗ ಮಹಿಳಾ ವಕೀಲರನ್ನು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಮೂರ್ತಿಗಳನ್ನಾಗಿ ಏಕೆ ನೇಮಕ ಮಾಡಬಾರದು?

  • ಸುಪ್ರೀಂ ಕೋರ್ಟ್‌ನಲ್ಲಿ ಉತ್ತಮ ಮಹಿಳಾ ವಕೀಲರಿದ್ದರೂ ವ್ಯಾಪಾರ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರಿಣತಿ ಪಡೆದವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುತ್ತಿಲ್ಲ.  

Also Read
ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಲಿಂಗ ವೈವಿಧ್ಯತೆಯ ಕೊರತೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ

ನ್ಯಾ. ಕೊಹ್ಲಿ ಅವರ ಸಾಧನೆಗಳನ್ನು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಶ್ಲಾಘಿಸಿದರು.  ಇದೇ ವೇಳೆ ಮಾತನಾಡಿದ ಸಿಜೆಐ ಡಿ ವೈ ಚಂದ್ರಚೂಡ್‌, ವಕೀಲ ವರ್ಗ ಮತ್ತು ನ್ಯಾಯಾಮೂರ್ತಿಗಳ ವಿಚಾರದಲ್ಲಿ ಸಮಾನ ಅವಕಾಶ ಇದ್ದಾಗ ಮಾತ್ರ ಲಿಂಗ ಅನುಪಾತದಲ್ಲಿ ಸುಧಾರಣೆ ಸಾಧ್ಯ ಎಂದರು.

ಇದಕ್ಕೂ ಮುನ್ನ, ತಮ್ಮ ಕೊನೆಯ ಕರ್ತವ್ಯದ ದಿನವಾದ ಶುಕ್ರವಾರ ನ್ಯಾ. ಹಿಮಾ ಅವರು  ಮುಖ್ಯ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಮನೋಜ್‌ ಮಿಶ್ರಾ ಅವರೊಂದಿಗೆ ಔಪಚಾರಿಕವಾಗಿ ಪೀಠ ಹಂಚಿಕೊಂಡಿದ್ದರು.

Kannada Bar & Bench
kannada.barandbench.com