ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಸಂತಾನೋತ್ಪತ್ತಿ ಆಯ್ಕೆ ಚಲಾಯಿಸುವ ಹಕ್ಕು ಮಹಿಳೆಯ “ವೈಯಕ್ತಿಕ ಸ್ವಾತಂತ್ರ್ಯ”ದ ಭಾಗವಾಗಿದೆ. ತನ್ನ ದೈಹಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳುವ ಪವಿತ್ರ ಹಕ್ಕನ್ನು ಅವರು ಹೊಂದಿರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಹೇಳಿದೆ.
ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದ್ದ 16 ವರ್ಷದ ಅಪ್ರಾಪ್ತೆಯು ಗರ್ಭಪಾತಕ್ಕೆ ಮನವಿ ಮಾಡಿದ್ದರು. ವೈದ್ಯಕೀಯ ಗರ್ಭಪಾತ ಕಾಯಿದೆ 1971ರ ಸೆಕ್ಷನ್ 3ರ ಅಡಿ ಗರ್ಭಧರಿಸಿ 24 ವಾರಗಳು ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದು ವೈದ್ಯಕೀಯ ಅಧಿಕಾರಿ ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.
“ಮಹಿಳೆ ತನ್ನ ದೇಹದ ಮೇಲೆ ಅನಪೇಕ್ಷಿತ ಹೇರಿಕೆ ತಡೆದುಕೊಳ್ಳುವಂತೆ ಒತ್ತಾಯಿಸುವ ಮತ್ತು ಆ ಹೇರಿಕೆಯ ಪರಿಣಾಮಗಳನ್ನು ತಡೆದುಕೊಳ್ಳುವ ಕ್ರಿಯೆಯು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ "ವೈಯಕ್ತಿಕ ಸ್ವಾತಂತ್ರ್ಯ" ದ ಉಲ್ಲಂಘಿಸಲಾಗದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಅಪರಾಧದ ಹೊರೆ ಹೊರಲು ಬಲವಂತ ಮಾಡಬಾರದು. ತನ್ನ ಇಚ್ಛೆಗೆ ವಿರುದ್ಧವಾಗಿ ಗರ್ಭ ಧರಿಸಿದ ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸಬಾರದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮೊರೆ ಇಟ್ಟಿದ್ದರು.
"ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ವೈದ್ಯಕೀಯ ಗರ್ಭಪಾತ ಕಾಯಿದೆ 1971ರಲ್ಲಿ ಕೆಲವು ಶಾಸನಬದ್ಧ ಮಿತಿಗಳಿದ್ದರೂ, ಅವು ಮೂಲಭೂತವಾಗಿ ವೈದ್ಯರಿಗೆ ಮಾತ್ರ ಅನ್ವಯಿಸುತ್ತವೆ. ಅಂಥ ಸಂದರ್ಭದಲ್ಲಿ ವೈದ್ಯಕೀಯವಾಗಿ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಅಗತ್ಯವನ್ನು ಸಾಂವಿಧಾನಿಕ ನ್ಯಾಯಾಲಯಗಳು ವಿಭಿನ್ನ ರೀತಿಯಲ್ಲಿ ಪರಿಗಣಿಸಬೇಕು ಮತ್ತು ಪರೀಕ್ಷಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
"ಅತ್ಯಾಚಾರಕ್ಕೊಳಗಾದ ಮತ್ತು ಅದರ ಕಾರಣದಿಂದಾಗಿ ಗರ್ಭಿಣಿಯಾಗಿರುವ ಅಪ್ರಾಪ್ತೆಯನ್ನು ಅಪರಾಧದ ಹೊರೆಯನ್ನು ಹೊರಲು ಬಲವಂತಪಡಿಸಿದಂತಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆಕೆಯ ಪರಿಕಲ್ಪನೆಯ ಸಂತಾನೋತ್ಪತ್ತಿ ಆಯ್ಕೆಗೆ ವಿರುದ್ದವಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡುವುದು ಸರಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಶಾಸನದಲ್ಲಿ ವಿಧಿಸಲಾದ ಶಾಸನಬದ್ಧ ಮಿತಿಗಳು ಹೈಕೋರ್ಟ್‌ಗಳ ಸಾಂವಿಧಾನಿಕ ಅಧಿಕಾರ ಚಲಾಯಿಸಲು ಅಡ್ಡಿಯಾಗುವುದಿಲ್ಲ ಅಥವಾ ನಿರ್ಬಂಧವಾಗಿರುವುದಿಲ್ಲ. ಈ ಸಾಂವಿಧಾನಿಕ ಅಧಿಕಾರದ ಚಲಾವಣೆಯನ್ನು ವಿರಳ, ಮಿತವಾಗಿ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಬಳಸಬೇಕು. ಇದು ಪ್ರತಿ ಪ್ರಕರಣದ ವಾಸ್ತವಿಕ ಅಂಶಗಳನ್ನು ಆಧರಿಸಿರುತ್ತದೆ” ಎಂದು ಪೀಠ ಹೇಳಿದೆ.
“ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಉಲ್ಲೇಖಿಸಿರುವಂತೆ 16 ವರ್ಷ ವಯಸ್ಸಿನ ಅಪ್ರಾಪ್ತೆಯ ಭವಿಷ್ಯದ ಜೀವನದಲ್ಲಿ ಗರ್ಭಾವಸ್ಥೆಯನ್ನು ಮುಂದುವರೆಸುವ ಪರಿಣಾಮಗಳು ಘನತೆಯ ಜೀವನಕ್ಕೆ ತೀವ್ರ ಹಾನಿ ಉಂಟು ಮಾಡಬಹುದು” ಎಂದು ಹೇಳಲಾಗಿದೆ.
ಸ್ತ್ರೀರೋಗ ತಜ್ಞರು, ವಿಕಿರಣಶಾಸ್ತ್ರಜ್ಞರು, ಮನೋವಿಜ್ಞಾನಿ ಮತ್ತು ಇತರೆ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ನೀಡಿರುವ ಅಭಿಪ್ರಾಯವನ್ನು ಪರಿಶೀಲಿಸಿದ ಪೀಠವು “ಮೇಲೆ ವಿವರಿಸಿದ ಸಂದರ್ಭಗಳು ಮತ್ತು ವೈದ್ಯಕೀಯ ಮಂಡಳಿಯು ನೀಡಿದ ನಿರ್ದಿಷ್ಟ ಅಭಿಪ್ರಾಯವನ್ನು ಪರಿಗಣಿಸಿದ ಬಳಿಕ ಅರ್ಜಿದಾರರು ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ನಿರ್ದೇಶನವನ್ನು ಪಡೆಯಲು ಅರ್ಹವಾಗಿದ್ದಾರೆ ಎಂದು ನನಗನ್ನಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ “ವೈದ್ಯಕೀಯ ಗರ್ಭಪಾತ ಕಾಯಿದೆ 1971ರ ನಿಬಂಧನೆಗಳು ಮತ್ತು ವೈದ್ಯಕೀಯ ಮಂಡಳಿಯ ಅಭಿಪ್ರಾಯಕ್ಕೆ ಬದ್ಧವಾಗಿ ವೈದ್ಯಕೀಯ ಗರ್ಭಪಾತ ಖಾತರಿಪಡಿಸಬೇಕು” ಎಂದು ಬೆಳಗಾವಿ ಆರೋಗ್ಯಾಧಿಕಾರಿಗೆ ನ್ಯಾಯಾಲಯವು ಆದೇಶಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಶರದ್ ವಿ ಮಗದುಮ್ ಮತ್ತು ರಾಜ್ಯ ಸರ್ಕಾರದ ಪರವಾಗಿ ವಿ ಎಸ್ ಕಳಸೂರಮಠ ಅವರು ಪ್ರಕರಣದಲ್ಲಿ ವಾದಿಸಿದ್ದರು.