ಭ್ರಷ್ಟಾಚಾರ ಪ್ರಕರಣ: ಆರೋಪಿ ಪತಿಯ ಮರಣವು ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡಿದ ಪತ್ನಿಯ ವಿಚಾರಣೆಗೆ ಅಂತ್ಯ ಹಾಡದು

ಪ್ರಧಾನ ಆರೋಪಿಯ ಮರಣಕಾರಣದಿಂದ ಅವರ ವಿರುದ್ಧ ಸ್ಥಗಿತಗೊಳ್ಳುವ ವಿಚಾರಣೆಯು ಪ್ರಕರಣದಲ್ಲಿ ದುಪ್ಪ್ರೇರಣೆ ನೀಡಿದ ಸಹ ಆರೋಪಿಯ ಮೇಲಿನ ಆರೋಪಗಳ ವಿಚಾರಣೆಯನ್ನು ರದ್ದುಗೊಳಿಸಲು ಕಾರಣವಾಗದು ಎನ್ನುವ ಅಂಶವನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ.
Justice M Nagaprasanna and Karnataka HC

Justice M Nagaprasanna and Karnataka HC

ಆರೋಪಿಯ ಮರಣ ಕಾರಣದಿಂದಾಗಿ ಆತನ ವಿರುದ್ಧದ ವಿಚಾರಣೆ ಸ್ಥಗಿತಗೊಂಡ ಮಾತ್ರಕ್ಕೆ (ಅಬೇಟ್‌ಮೆಂಟ್‌ ಆಫ್‌ ಕ್ರಿಮಿನಲ್‌ ಪ್ರೊಸೀಡಿಂಗ್ಸ್‌ - ಆರೋಪಿಯ ಮರಣದಿಂದಾಗಿ ಪ್ರಾಸಿಕ್ಯೂಷನ್‌ನ ಸಮ್ಮತಿ ಇಲ್ಲದೆ ಅಥವಾ ಪ್ರಕರಣದ ಅರ್ಹತೆಯ ಆಧಾರದಿಂದಲ್ಲದೆ ಹಾಗೆಯೇ ಆರೋಪಿಯ ವಿರುದ್ಧದ ವಿಚಾರಣೆ ಸ್ಥಗಿತಗೊಳ್ಳುವ ಸಂದರ್ಭ) ಅದಕ್ಕೆ ಕಾರಣವಾದ ದುಷ್ಪ್ರೇರಣೆಯ ಆರೋಪವು ನಿರ್ಮೂಲನೆಯಾಗದು/ರದ್ದಾಗದು ಎಂದು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದೆ. ಆ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ದಷ್ಪ್ರೇರಣೆ ನೀಡಿದ ಆರೋಪದಲ್ಲಿ ಸರ್ಕಾರಿ ಅಧಿಕಾರಿಯ ಪತ್ನಿಯ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಮುಂದುವರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿದೆ.

ದುಷ್ಪ್ರೇರಣೆ ಆರೋಪದಿಂದ ತನ್ನನ್ನು ಮುಕ್ತಗೊಳಿಸುವಂತೆ ಕೋರಿ ಆರೋಪಿ ವಿ ಎಂ ಸರಸ್ವತಿ ಸಲ್ಲಿಸಿದ್ದ ಮತ್ತು ಅವರ ವಿರುದ್ಧ ಪ್ರಕರಣ ಮುಂದುವರಿಸಬೇಕು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

“ಆರೋಪ ನಿಗದಿಗೂ ಮುನ್ನ ವಿಚಾರಣೆಯ ಸಂದರ್ಭದಲ್ಲಿ ಪತಿ ಸಾವನ್ನಪ್ಪಿದರೆ ಸಹ ಆರೋಪಿಯಾದ ಪತ್ನಿಯ ವಿರುದ್ಧದ ವಿಚಾರಣೆ ಮುಕ್ತಾಯವಾಗುವುದಿಲ್ಲ” ಎಂದು ಹಲವು ತೀರ್ಪುಗಳನ್ನು ಉಲ್ಲೇಖಿಸಿ ಪೀಠವು ತೀರ್ಪು ಪ್ರಕಟಿಸಿದೆ.

ಅಲ್ಲದೇ, “ಪರಿಗಣೆನೆಗೆ ಒಳಪಟ್ಟಿರುವ ಪ್ರಕರಣದ ವಿಶೇಷ ವಾಸ್ತವಿಕ ಅಂಶಗಳ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಉತ್ತರ ಕಂಡುಕೊಳ್ಳಬೇಕಿದ್ದು, ಆರೋಪಿಯ ಮರಣಕಾರಣದಿಂದ ಆತನ ವಿರುದ್ಧದ ವಿಚಾರಣೆ ಸ್ಥಗಿತಗೊಳ್ಳುವಿಕೆಯು (ಅಬೇಟ್‌ಮೆಂಟ್‌) ದುಷ್ಪ್ರೇರಣೆಯ ಆರೋಪವನ್ನು ನಿರ್ಮೂಲನ ಮಾಡುವುದಿಲ್ಲ ಎಂಬುದು ದೃಢಪಟ್ಟಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಸಂಶೋಧನಾ ವಿಭಾಗದ ಉಪ ನಿರ್ದೇಶಕರಾಗಿದ್ದ ದಿವಂಗತ ಎಂ ಸೆಲ್ವಕುಮಾರ್‌ ಅವರು 2005-2013ರ ಅವಧಿಯಲ್ಲಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಇ) ಜೊತೆ ಸೆಕ್ಷನ್‌ 13(2)ರ ಅಡಿ ಸೆಲ್ವಕುಮಾರ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 109ರ ಅಡಿ ಪತ್ನಿ ಸರಸ್ವತಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ತನಿಖಾಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿ, ಆರೋಪ ನಿಗದಿ ಮಾಡುವುದಕ್ಕೂ ಮುನ್ನ 2017ರ ಮಾರ್ಚ್‌ 29ರಂದು ಸೆಲ್ವಕುಮಾರ್‌ ನಿಧನರಾಗಿದ್ದರು. ತಮ್ಮ ಹೆಸರಿನಲ್ಲಿ ಸ್ಥಿರ ಮತ್ತು ಚರಾಸ್ತಿ ಖರೀದಿಸುವಂತೆ ಪತಿಯ ಮೇಲೆ ಸರಸ್ವತಿ ಒತ್ತಡ ಹಾಕಿದ್ದಾರೆ. ಈ ಮೂಲಕ ಪತಿ ಸೆಲ್ವಕುಮಾರ್‌ ಅವರನ್ನು ಅಪರಾಧ ಎಸಗುವಂತೆ ಮಾಡಿದ್ದಾರೆ ಎಂಬುದು ಪ್ರಾಸಿಕ್ಯೂಸನ್‌ ವಾದವಾಗಿತ್ತು.

ಪತಿ ನಿಧನರಾಗಿರುವುದರಿಂದ ಅವರ ವಿರುದ್ದದ ಆರೋಪಗಳು ರದ್ದಾಗಿದ್ದು, ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುವಂತೆ ಸರಸ್ವತಿ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. “ತಮ್ಮ ವಿರುದ್ಧದ ದುಷ್ಪ್ರೇರಣೆ ಆರೋಪವು ಸ್ವತಂತ್ರದ್ದಾಗಿದ್ದರೂ ಸಹ ಪ್ರಮುಖ ಆರೋಪಿಯಾದ ಪತಿ ಸೆಲ್ವಕುಮಾರ್‌ ನಿಧನರಾಗಿದ್ದು, ಅವರ ವಿರುದ್ಧದ ಆರೋಪಗಳು ರದ್ದಾಗಿರುವುದರಿಂದ ತಮ್ಮ ವಿರುದ್ದ ಪ್ರಕರಣ ಮುಂದುವರಿಸಲಾಗದು” ಎಂದು ವಾದಿಸಿದ್ದರು.

Also Read
[ಭೂಹಗರಣ] ಸಚಿವ ಬೈರತಿ ಬಸವರಾಜ್, ಎಂಎಲ್‌ಸಿ ಶಂಕರ್ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯ ಹೇಳಿದ್ದೇಕೆ?

ಹೆಚ್ಚುವರಿ ಆರೋಪ ನಿಗದಿಪಡಿಸಿದ್ದ ಸಿಬಿಐ ನ್ಯಾಯಾಲಯ

ಸಿಬಿಐ ವಿಶೇಷ ನ್ಯಾಯಾಲಯವು 2018ರ ಜೂನ್‌ 6ರಂದು ಆರೋಪಿ ಸರಸ್ವತಿ ಅವರ ವಾದವನ್ನು ಪುರಸ್ಕರಿಸಿತ್ತಾದರೂ ಭ್ರಷ್ಟಾಚಾರ ನಿಗ್ರಹ ದಳ ಕಾಯಿದೆಯ ಸೆಕ್ಷನ್‌ 13 (1)(ಇ) ಅಡಿ ಆರೋಪಿ ಸರಸ್ವತಿ ವಿರುದ್ಧ ಆರೋಪ ನಿಗದಿ ಮಾಡಲು ನಿರ್ದೇಶಿಸಿತ್ತು.

ಹೆಚ್ಚುವರಿ ಆರೋಪಗಳನ್ನು ಮಾಡಿರುವುದನ್ನು ಪ್ರಶ್ನಿಸಿ ಸರಸ್ವತಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದಕ್ಕೆ ತಕರಾರು ವ್ಯಕ್ತಪಡಿಸಿ ಸಿಬಿಐ ಸಹ ಸರಸ್ವತಿ ವಿರುದ್ಧದ ದುಷ್ಟ್ರೇರಣೆ ಆರೋಪವನ್ನು ಕೈಬಿಡಲಾಗದು ಎಂದು ಕ್ರಿಮಿನಲ್‌ ಮನವಿ ಸಲ್ಲಿಸಿತ್ತು.

ಸರಸ್ವತಿ ವಿರುದ್ಧ ಹೆಚ್ಚುವರಿಯಾಗಿ ಆರೋಪ ನಿಗದಿ ಮಾಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ವಜಾ ಮಾಡಿರುವ ಹೈಕೋರ್ಟ್‌, ಸರಸ್ವತಿ ಮತ್ತು ಸಿಬಿಐ ಇಬ್ಬರ ಅರ್ಜಿಯನ್ನೂ ಭಾಗಶಃ ಎತ್ತಿ ಹಿಡಿದಿದೆ. ಐಪಿಸಿ ಸೆಕ್ಷನ್‌ 109ರ ಅಡಿ ಸರಸ್ವತಿ ವಿರುದ್ದ ದಾಖಲಾಗಿರುವ ಪ್ರಕರಣವು ವಿಚಾರಣಾಧೀನ ನ್ಯಾಯಾಲಯದಲ್ಲಿ ಮುಂದುವರಿಯಲಿದೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.

Attachment
PDF
CBI versus Saraswathy.pdf
Preview

Related Stories

No stories found.
Kannada Bar & Bench
kannada.barandbench.com