ʼಮ್ಯಾರೇಜ್‌ ಇನ್ವಿಟೇಷನ್‌ʼ ಎಪಿಕೆ ಫೈಲ್‌ ಸೃಷ್ಟಿಸಿ ₹4 ಲಕ್ಷ ವಂಚನೆ: ಲೀಗಲ್‌ಪೇ ಅಧಿಕಾರಿಗಳನ್ನು ಬಂಧಿಸದಂತೆ ಆದೇಶ

"ಸ್ಮಾರ್ಟ್‌ಫೋನ್‌ ಬಳಸುವುದು ಬಾರದೇ ಇದ್ದರೆ ಅದನ್ನು ಇಟ್ಟುಕೊಳ್ಳಬಾರದು. ಇಂದು ಪ್ಲಂಬರ್, ಕಸಗುಡಿಸುವವರು ಸೇರಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇದೆ. ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಬಳಸಲು ಅವರಿಗೆ ಸ್ಮಾರ್ಟ್‌ಫೋನ್‌ ಬೇಕು" ಎಂದ ಪೀಠ.
ʼಮ್ಯಾರೇಜ್‌ ಇನ್ವಿಟೇಷನ್‌ʼ ಎಪಿಕೆ ಫೈಲ್‌ ಸೃಷ್ಟಿಸಿ ₹4 ಲಕ್ಷ ವಂಚನೆ: ಲೀಗಲ್‌ಪೇ ಅಧಿಕಾರಿಗಳನ್ನು ಬಂಧಿಸದಂತೆ ಆದೇಶ
Published on

ಸ್ನೇಹಿತನ ವಾಟ್ಸಾಪ್‌ನಿಂದ ಬಂದ ನಕಲಿ ʼಮ್ಯಾರೇಜ್‌ ಇನ್ವಿಟೇಷನ್‌ʼ ಎಂಬ ಎಪಿಕೆ ಫೈಲ್‌ ತೆರದಿದ್ದರಿಂದ ₹4 ಲಕ್ಷ ಬ್ಯಾಂಕ್‌ ಖಾತೆಯಿಂದ ಕಡಿತವಾಗಿದೆ ಎಂದು ಪ್ಲಂಬರ್‌ (ನಲ್ಲಿ ರಿಪೇರಿ ಮಾಡುವವರು) ದೂರಿರುವ ಪ್ರಕರಣದಲ್ಲಿ ಲೀಗಲ್‌ಪೇ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌ನ ಯಾವುದೇ ಉದ್ಯೋಗಿಯನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಬೆಂಗಳೂರಿನ ಹುಳಿಮಾವು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಲೀಗಲ್‌ಪೇ ಟೆಕ್ನಾಲಜಿಯ ನಿರ್ದೇಶಕ ಕುಂದನ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ರಜಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice R Nataraj
Justice R Nataraj

“ಪೊಲೀಸರು ತನಿಖೆ ಮುಂದುವರಿಸಬಹುದಾಗಿದ್ದು, ಕಾನೂನಿನ ಅನ್ವಯ ಅಂತಿಮ ವರದಿ ಸಲ್ಲಿಸಬಹುದಾಗಿದೆ. ಆದರೆ, ಲೀಗಲ್‌ ಪೇನ ಯಾವುದೇ ಅಧಿಕಾರಿಯನ್ನು ಬಂಧಿಸುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಬೆಂಗಳೂರಿನ ಸತ್ರ ನ್ಯಾಯಾಲಯವು ಮೇ 13ರಂದು ಕುಂದನ್‌ ಕುಮಾರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನಕಲಿ ಎಪಿಕೆ ಫೈಲ್‌ ಸೃಷ್ಟಿಸಿ, ಹಂಚಿಕೆ ಮಾಡಿರುವುದರಲ್ಲಿ ಅರ್ಜಿದಾರರ ಪಾತ್ರವಲ್ಲ. ಆ ಫೈಲ್‌ ತೆಗೆಯುವಂತೆಯೂ ದೂರುದಾರರಿಗೆ ಅರ್ಜಿದಾರ ಸೂಚಿಸಿಲ್ಲ. ಪ್ರಕರಣದಲ್ಲಿನ ಸಾಕ್ಷಿಯು ಬಹುತೇಕ ದಾಖಲೆ ಮತ್ತು ವಿದ್ಯುನ್ಮಾನ ರೂಪದಲ್ಲಿರುವುದರಿಂದ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

“ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ, ಹಣವನ್ನು ದೂರುದಾರರಿಗೆ ಮರಳಿಸುವ ಎಲ್ಲಾ ಪ್ರಯತ್ನದಲ್ಲಿ ಸಹಕರಿಸುವುದಾಗಿ ತಿಳಿಸಿರುವುದರಿಂದ ಪೊಲೀಸರು ತನಿಖೆ ಮುಗಿಯುವವರೆಗೆ ಲೀಗಲ್‌ಪೇನ ಯಾವುದೇ ಉದ್ಯೋಗಿಯನ್ನು ಬಂಧಿಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ.

M S Shyamsundar
M S Shyamsundar

ಕುಂದನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ ಸುಂದರ್‌ ಅವರು “ಲೀಗಲ್‌ಪೇಯು ಭಾರತ್‌ಪೇ ಮತ್ತು ಪೇಟಿಎಂ ರೀತಿಯಲ್ಲಿಯೇ ಕೆಲಸ ಮಾಡುತ್ತಿದ್ದು, ತನ್ನ ವೇದಿಕೆಯಿಂದ ಹಣ ವಂಚನೆಯಾವುದಕ್ಕೆ ಸಂಬಂಧಿಸಿದಂತೆ ಸಂಸ್ಥೆಗೆ ಯಾವುದೇ ನಿಯಂತ್ರಣ ಇರುವುದಿಲ್ಲ. ಸೈಬರ್‌ ವಂಚನೆಗೆ ಸಂಬಂಧಿಸಿದಂತೆ ದೂರು ದಾಖಲಾದ ತಕ್ಷಣ ಲೀಗಲ್‌ಪೇ ಕ್ರಮಕೈಗೊಂಡಿದೆ. ತನಿಖಾಧಿಕಾರಿಗೆ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಒದಗಿಸಿದೆ. ಕುಂದರ್‌ ಹೆಸರು ಎಫ್‌ಐಆರ್‌ನಲ್ಲಿ ಇಲ್ಲದಿದ್ದರೂ ಮೇಲ್ನೋಟಕ್ಕೆ ವಂಚನೆಯಾಗಿದೆ ಎಂಬ ಏಕೈಕ ಆಧಾರದಲ್ಲಿ ವಿಚಾರಣಾಧೀನ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಕುಂದನ್‌ ಬಂಧಿಸಿದರೆ ಕಂಪನಿಯ ವರ್ಚಸ್ಸು ಮತ್ತು ಲೀಗಲ್‌ಪೇನ ಷೇರು ಮೌಲ್ಯಕ್ಕೆ ಹೊಡೆತ ನೀಡಲಿದೆ” ಎಂದರು.

ರಾಜ್ಯ ಸರ್ಕಾರದ ಪರ ವಕೀಲೆಯು “ಲೀಗಲ್‌ಪೇ ವಿರುದ್ಧ ಹಲವಾರು ಪ್ರಕರಣ ದಾಖಲಾಗಿದ್ದು, ವಿಸ್ತೃತ ತನಿಖೆಯಾಗಬೇಕಿದೆ. ತಾನು ಈ ವಂಚನೆಯಲ್ಲಿ ₹10 ಲಕ್ಷ ಕಳೆದುಕೊಂಡಿದ್ದು, ತನಿಖೆ ನಡೆಯುತ್ತಿದೆ” ಎಂದರು.

ವಿಚಾರಣೆಯ ಕೊನೆಯಲ್ಲಿ ಪೀಠವು ಸರ್ಕಾರಿ ವಕೀಲೆಯನ್ನು ಕುರಿತು “ನೀವು ಕೇಳದಿದ್ದರೂ ಒಂದು ಸಲಹೆ ನೀಡುತ್ತೇನೆ. ಸ್ಮಾರ್ಟ್‌ಫೋನ್‌ ಇಟ್ಟುಕೊಳ್ಳಬೇಡಿ. ಸ್ಮಾರ್ಟ್‌ಫೋನ್‌ನಿಂದ ಈ ಸಮಸ್ಯೆಯಾಗುತ್ತದೆ… ಸ್ಮಾರ್ಟ್‌ಫೋನ್‌ ಬಳಸುವುದು ಬಾರದೇ ಇದ್ದರೆ ಅದನ್ನು ಇಟ್ಟುಕೊಳ್ಳಬಾರದು. ಇಂದು ಪ್ಲಂಬರ್, ಕಸಗುಡಿಸುವವರು ಸೇರಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇದೆ. ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಬಳಸಲು ಅವರಿಗೆ ಸ್ಮಾರ್ಟ್‌ಫೋನ್‌ ಬೇಕು… ಲಿಂಕ್‌ ಆಗಿರದ ಒಂದು ಬ್ಯಾಂಕ್‌ ಖಾತೆಯನ್ನು ಮಾತ್ರ ಹೊಂದಿರಬೇಕು. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು” ಎಂದಿತು.

ಆಗ ಶ್ಯಾಮ್‌ ಸುಂದರ್‌ ಅವರು “ಭಿಕ್ಷುಕರೂ ಪೇಟಿಎಂ ಕ್ಯೂರ್‌ ಕೋಡ್‌ ಹೊಂದಿದ್ದಾರೆ. ಅವರಿಗೆ ನಗದು ಬೇಕಿಲ್ಲ” ಎಂದು ಲಘುದಾಟಿಯಲ್ಲಿ ಹೇಳಿದರು.

ಪ್ರಕರಣದ ಹಿನ್ನೆಲೆ: ಹುಳಿಮಾವು ನಿವಾಸಿಯಾಗಿರುವ ಸಿದ್ದರಾಜುವಿಗೆ ಮಾರ್ಚ್‌ ೨೭ರಂದು ಸ್ನೇಹಿತ ನಾಗರಾಜು ಎಂಬವರಿಂದ ವಾಟ್ಸಾಪ್‌ಗೆ ಮ್ಯಾರಿಯೇಜ್‌ ಇನ್ವಿಟೇಶನ್‌ ಎಂಬ ಎಪಿಕೆ ಫೈಲ್‌ ಬಂದಿತ್ತು. ಸದರಿ ಫೈಲ್‌ ಅನ್ನು ಸಿದ್ದರಾಜು ಕ್ಲಿಕ್‌ ಮಾಡಿದ ತಕ್ಷಣ, ಮೊಬೈಲ್‌ ಹ್ಯಾಕ್‌ ಆಗಿ ಮಾರ್ಚ್‌ ೩೧ರಂದು ಹಲವು ಅಪರಿಚಿತ ಸಂದೇಶಗಳು ನಿರಂತರವಾಗಿ ಬಂದಿದ್ದವು. ಸಂದೇಶವನ್ನು ಪರಿಶೀಲಿಸಲಾಗಿ ಹಂತ ಹಂತವಾಗಿ ಒಟ್ಟು ₹4 ಲಕ್ಷ ಕಡಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಜು ಅವರು ಎಪಿಕೆ ಫೈಲ್‌ ಸೃಷ್ಟಿಸಿ, ಅಮಾಯಕರಿಗೆ ಮೋಸ ಮಾಡುತ್ತಿರುವವರನ್ನು ಪತ್ತೆ ಮಾಡಿ, ಹಣ ವಾಪಸ್‌ ಕೊಡಿಸುವಂತೆ ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಅನಾಮಿಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66 (C), 66 (D), ಬಿಎನ್‌ಎಸ್‌ ಸೆಕ್ಷನ್‌ 318(4), 319(2) ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com