ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿ, ಪ್ರಶಾಂತ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ರಾಗಿಣಿ ಮತ್ತು ಪ್ರಶಾಂತ್‌ ಮೋಜು ಕೂಟ ಆಯೋಜಿಸಿದ್ದರು ಅಥವಾ ಅಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಭೌತಿಕ ಸಾಕ್ಷ್ಯ ಸಲ್ಲಿಸಿಲ್ಲ ಎಂದಿರುವ ನ್ಯಾಯಾಲಯ.
Actress Ragini Dwivedi & Karnataka HC
Actress Ragini Dwivedi & Karnataka HC
Published on

ನಟಿ ರಾಗಿಣಿ ದ್ವಿವೇದಿ ವಿರುದ್ಧದ ಮಾದಕವಸ್ತು ಸೇವನೆ ಹಾಗೂ ಮಾರಾಟಕ್ಕೆ ರೇವ್‌ ಪಾರ್ಟಿ ಆಯೋಜಿಸಿದ್ದರು ಎನ್ನಲಾದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಭೌತಿಕ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾದ ಕಾರಣಕ್ಕೆ ಪ್ರಕರಣದಿಂದ ಉದ್ಭವಿಸಿದ್ದ ಎಲ್ಲ ಪ್ರಕ್ರಿಯೆಯನ್ನು ರದ್ದುಪಡಿಸಿರುವುದಾಗಿ ನ್ಯಾಯಾಲಯ ಹೇಳಿದೆ. ಮತ್ತೊಬ್ಬ ಆರೋಪಿ ಪ್ರಶಾಂತ್ ರಂಕ ವಿರುದ್ಧದ ಪ್ರಕರಣವನ್ನೂ ಸಹ ರದ್ದುಪಡಿಸಲಾಗಿದೆ.

ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ ಎಂದೇ ಮಾಧ್ಯಮಗಳಲ್ಲಿ ವರದಿಯಾಗಿದ್ದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಬೆಂಗಳೂರಿನ ರಾಗಿಣಿ ದ್ವಿವೇದಿ ಅಲಿಯಾಸ್‌ ಗಿಣಿ ಅಲಿಯಾಸ್‌ ರಾಗ್ಸ್‌ ಹಾಗೂ ನಾಲ್ಕನೇ ಆರೋಪಿ ಪ್ರಶಾಂತ್‌ ರಂಕ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಸಹ ಆರೋಪಿಗಳ ಹೇಳಿಕೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷಿಗಳನ್ನು ಹೊರತುಪಡಿಸಿ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್‌ ರಂಕ ಅವರು ಮೋಜು ಕೂಟಗಳನ್ನು ಆಯೋಜಿಸಿದ್ದರು ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬುದಕ್ಕೆ ಪ್ರಾಸಿಕ್ಯೂಷನ್‌ ಯಾವುದೇ ಭೌತಿಕ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ” ಎಂದು ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ಉದ್ಭವಿಸಿದ್ದ ಎಲ್ಲ ಪ್ರಕ್ರಿಯೆಗಳನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ. ಕಳೆದ ಜೂನ್‌ನಲ್ಲಿ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿತ್ತು.

Justice Hemant Chandangoudar
Justice Hemant Chandangoudar

“05.07.2020, 17.07.2020 ಮತ್ತು 08.07.2020ರಂದು ನಡೆದಿದ್ದ ಮೋಜು ಕೂಟಗಳನ್ನು ರಾಗಿಣಿ ಮತ್ತು ಪ್ರಶಾಂತ್‌ ಅವರು ಆಯೋಜಿಸಿ, ಅಲ್ಲಿಗೆ ಬಂದವರಿಗೆ ಮಾದಕ ವಸ್ತುಗಳನ್ನು ಹಂಚಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ನಿರ್ದಿಷ್ಟ ಆರೋಪ ಮಾಡಲಾಗಿದೆ. 16ನೇ ಆರೋಪಿ ಬಿ ಕೆ ರವಿಶಂಕರ್‌ ಎಂಬಾತನ ಸ್ವಯಂ/ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ ಅರ್ಜಿದಾರರನ್ನು ಆರೋಪಿಗಳನ್ನಾಗಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

“ಅರ್ಜಿದಾರರು ಮೋಜು ಕೂಟ ಆಯೋಜಿಸಿದ್ದರು ಅಥವಾ ಅಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಭೌತಿಕ ಸಾಕ್ಷ್ಯಾಧಾರ ಸಲ್ಲಿಸಿಲ್ಲ. ಸಹ ಆರೋಪಿಯ ಸ್ವಯಂ ಹೇಳಿಕೆ ಮತ್ತು ಆರೋಪ ಪಟ್ಟಿಯಲ್ಲಿನ ಸಾಕ್ಷಿಯನ್ನು ಪ್ರಾಸಿಕ್ಯೂಷನ್‌ ಆಧರಿಸಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಮೊದಲನೇ ಆರೋಪಿ ಶಿವಪ್ರಕಾಶ್‌ ಅಲಿಯಾಸ್‌ ಚಿಪ್ಪಿಯು ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು, ರಾಗಿಣಿ ದ್ವಿವೇದಿ ಅವರ ಸ್ನೇಹಿತನಾಗಿದ್ದಾನೆ. ಆಕೆಯು ಚಿಪ್ಪಿಯನ್ನು ಮಾದಕ ವಸ್ತುಗಳನ್ನು ಪೂರೈಸಲಾಗುತ್ತಿದ್ದ ಮೋಜು ಕೂಟದಲ್ಲಿನ ಉದ್ಯಮಿಗಳು ಹಾಗೂ ಯುವಕರಿಗೆ ಪರಿಚಯಿಸಿದ್ದರು. ಚಿಪ್ಪಿ, ರಾಗಿಣಿ ಮತ್ತು 16ನೇ ಆರೋಪಿ ರವಿಶಂಕರ್‌ ಅವರು ಮೋಜು ಕೋಟದಲ್ಲಿ ಮಾದಕ ವಸ್ತು (ಎಕ್ಸ್‌ಟೆಸಿ ಪಿಲ್ಸ್‌) ಸೇವಿಸಿದ್ದರು. ಚಿಪ್ಪಿಯು ಈ ಮೋಜು ಕೂಟದಲ್ಲಿ ಇತರರಿಗೂ ಮಾದಕ ವಸ್ತುಗಳನ್ನು ಸೇವಿಸುವಂತೆ ಪ್ರಚೋದಿಸಿದ್ದ ಎಂದು ಆರೋಪಿಸಲಾಗಿತ್ತು.

Also Read
ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ವೀರಣ್ಣ ಜಿ. ತಿಗಡಿ ಮತ್ತು ಅರ್ಜಿದಾರರ ಪರವಾಗಿ ವಕೀಲ ಎ ಮಹಮ್ಮದ್‌ ತಾಹೀರ್ ಮತ್ತು ವಿ ಭರತ್‌ ಕುಮಾರ್‌ ವಾದಿಸಿದ್ದರು.

ಕಳೆದ ಜೂನ್‌ನಲ್ಲಿ ಚಿಪ್ಪಿ, ಸಂಜನಾ ಗಲ್ರಾನಿ, ಮತ್ತು ಆದಿತ್ಯ ಮೋಹನ್‌ ಅಗರ್ವಾಲ್‌ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿತ್ತು.

ಪ್ರಕರಣದ ಹಿನ್ನೆಲೆ: ನಟಿ ರಾಗಿಣಿ ಮತ್ತು ಇತರರು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಮೋಜು ಕೂಟಗಳನ್ನು ಆಯೋಜಿಸಿ, ಅನೇಕ ಗ್ರಾಹಕರನ್ನು ಕರೆಸಿ ಡ್ರಗ್‌ ಪೆಡ್ಲರ್‌ಗಳ ಮೂಲಕ ಕೂಟಕ್ಕೆ ಬರುವ ಉದ್ಯಮಿಗಳು, ಸೆಲೆಬ್ರಿಟಿಗಳು, ನಟ-ನಟಿಯರು, ಡಿಜೆಗಳು, ಸಾಫ್ಟ್‌ವೇರ್‌ ಉದ್ಯೋಗಿಗಳು ಇತರರಿಗೆ ಮಾದಕ ವಸ್ತುಗಳನ್ನು ಪೂರೈಸಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ಸಿಸಿಬಿಯ ಎಸಿಪಿ ಕೆ ಸಿ ಗೌತಮ್‌ ಅವರು ಕಾಟನ್‌ ಪೇಟೆ ಠಾಣೆಯಲ್ಲಿ 2020ರ ಸೆಪ್ಟೆಂಬರ್‌ 4ರಂದು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ಮಾಡುವಾಗ ಬಿ ಕೆ ರವಿಶಂಕರ್‌ ಎಂಬಾತನನ್ನು ವಶಕ್ಕೆ ಪಡೆದಿದ್ದ ಗೌತಮ್‌ ಅವರು ಮಾಹಿತಿ ಸಂಗ್ರಹಿಸಿದ್ದರು. ಈ ಮಾಹಿತಿ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದರು.

Also Read
ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

ಇದರ ಬೆನ್ನಿಗೇ, ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 21, 21(ಸಿ), 22(ಸಿ), 27ಎ, 27-ಬಿ ಮತ್ತು 29, ಐಪಿಸಿ ಸೆಕ್ಷನ್‌ಗಳಾದ 120(ಬಿ) ಮತ್ತು 201 ಅಡಿ ಪ್ರಕರಣ ದಾಖಲಿಸಲಾಗಿದೆ. ಮೊದಲಿಗೆ ಶಿವಪ್ರಕಾಶ್‌, ರಾಗಿಣಿ ದ್ವಿವೇದಿ, ವೀರೇನ್‌ ಖನ್ನಾ, ಪ್ರಶಾಂತ್‌ ರಂಕ, ವೈಭವ್‌ ಜೈನ್‌, ಆದಿತ್ಯ ಆಳ್ವ, ಲೂಮ್‌ ಪೆಪ್ಪರ್‌, ಪ್ರಶಾಂತ್‌ ರಾಜು, ಅಶ್ವಿನ್‌, ಅಭಿಸ್ವಾಮಿ, ರಾಹುಲ್‌ ತೋನ್ಸೆ ಮತ್ತು ವಿನಯ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆನಂತರ ನಿಯಾಸ್‌ ಅಹ್ಮದ್‌, ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಅಲಿಯಾಸ್‌ ಕುಮಾರಿ ಅರ್ಚನಾ ಗಲ್ರಾನಿ, ಪ್ರತೀಕ್‌ ಅಲಿಯಾಸ್‌ ಪ್ರತೀಕ್‌ ಶೆಟ್ಟಿ, ಬಿ ಕೆ ರವಿಶಂಕರ್‌, ಬೆಲಾನ್ಡ್‌ ಉದೀನಾ, ಶ್ರೀನಿವಾಸ್‌ ಅಲಿಯಾಸ್‌ ಶ್ರೀ, ಶರೀಫ್‌ ಹಸನ್‌ ಮಸೂರಿ, ಫಿಲಿಪ್‌, ಆಂಬ್ರೋಸ್‌, ಆದಿತ್ಯ ಮೋಹನ್‌ ಅಗರ್ವಾಲ್‌, ಕಿರಣ್‌ ಕಾರ್ತಿಕ್‌, ಸುಮಿತ್‌ ಸಾಗರ್‌, ಅಪೇಕ್ಷಾ ಅಶೋಕ್‌ ನಾಯಕ್‌, ಹ್ಯಾರಿಸನ್‌ ಮತ್ತು ಜೋಹೆಬ್‌ ಅಹ್ಮದ್‌ ಅವರನ್ನು ಆರೋಪಿಗಳನ್ನಾಗಿಸಲಾಗಿತ್ತು.

Attachment
PDF
Ragini Dwivedi Vs State of Karnataka
Preview
Kannada Bar & Bench
kannada.barandbench.com