ಶಸ್ತ್ರಚಿಕಿತ್ಸೆಗೆ ಒಳಗಾಗಲು ನಟ ದರ್ಶನ್‌ ವೈದ್ಯಕೀಯ ಜಾಮೀನು ಕೋರಿಕೆ: ನಾಳೆ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

“ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ವರದಿ ನೀಡಿದ್ದಾರೆ. ಇದಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪ ವ್ಯಕ್ತಪಡಿಸುತ್ತಿದೆಯೇ? ಏಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ ಎಂಬುದನ್ನು ಹೇಳಬೇಕು” ಎಂದು ಆಗ್ರಹಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌.
Darshan and Karnataka HC
Darshan and Karnataka HC
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ ಅವರು ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯಕೀಯ ಜಾಮೀನು ಕೋರಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರಕ್ಕೆ (ಅಕ್ಟೋಬರ್‌ 30) ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು. ವೈದ್ಯಕೀಯ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಾಳೆ ಆದೇಶ ಪ್ರಕಟಿಸುವುದಾಗಿ ತಿಳಿಸಿತು.

Justice S Vishwajith Shetty
Justice S Vishwajith Shetty

ಇದಕ್ಕೂ ಮುನ್ನ, ದರ್ಶನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ದರ್ಶನ್‌ ಅವರು ಬೆನ್ನುಹುರಿ/ನರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಸಾಂಪ್ರದಾಯಿಕ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಈಗ ಅವರಿಗೆ ಪಾದದಲ್ಲಿ ಜೋಮು ಕಾಣಿಸುತ್ತಿದೆ, ಇದು ಮುಂದುವರಿದರೆ ಮೂತ್ರ ಸಮಸ್ಯೆ ಉಂಟಾಗಲಿದೆ. ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರಾದ ವಿಶ್ವನಾಥ್‌ ಅವರು ವರದಿ ನೀಡಿದ್ದಾರೆ. ಹೀಗಾಗಿ, ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

“ದರ್ಶನ್‌ ಈಗಾಗಲೇ ಎರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಾದ ಅಪೊಲೊದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತಮ್ಮದೇ ಖರ್ಚಿನಲ್ಲಿ ಈಗಲೂ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈಕೋರ್ಟ್‌ ಸಾಕಷ್ಟು ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿವೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವುದರಿಂದ ಪ್ರಾಸಿಕ್ಯೂಷನ್‌ ಸಾಕ್ಷಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ನ್ಯಾಯಾಲಯವು ಯಾವುದೇ ಷರತ್ತು ವಿಧಿಸಿ, ಮೂರು ತಿಂಗಳು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ನ್ಯಾಯಾಲಯವು ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರು ನೀಡುವ ವರದಿಯನ್ನು ಆಧರಿಸಿ ದರ್ಶನ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು. ಸುಪ್ರೀಂ ಕೋರ್ಟ್‌ ಸಹ ಹಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿಯ ಶಿಫಾರಸ್ಸು ಆಧರಿಸಿ, ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ದರ್ಶನ್‌ ಅವರು ಬೆಂಗಳೂರಿಗೆ ಬಂದು ಇಲ್ಲಿ ವೈದ್ಯಕೀಯ ಮಂಡಳಿಯ ತಜ್ಞರ ತಪಾಸಣೆಗೆ ಒಳಗಾಗಲಿ. ವೈದ್ಯರು ಏನೆಲ್ಲಾ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ ಅಗತ್ಯವಿದೆ ಎಂದು ವರದಿ ನೀಡಲಿ. ಇದನ್ನು ಆಧರಿಸಿ ನ್ಯಾಯಾಲಯವು ನಿರ್ಧರಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಸಿ ವಿ ನಾಗೇಶ್‌ ಅವರು “ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ವರದಿ ನೀಡಿದ್ದಾರೆ. ಇದಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪ ವ್ಯಕ್ತಪಡಿಸುತ್ತಿದೆಯೇ? ಇದಕ್ಕೆ ಏಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ ಎಂಬುದನ್ನು ಹೇಳಬೇಕು” ಎಂದು ಆಗ್ರಹಿಸಿದರು.

ಪೀಠವು ವಿಚಾರಣೆಯ ಒಂದು ಹಂತದಲ್ಲಿ “ಸಂವಿಧಾನದ 21ನೇ ವಿಧಿಯಡಿ ಆರೋಗ್ಯ ಹಕ್ಕು ಸೇರ್ಪಡೆಯಾಗಿದೆ” ಎಂದು ಪ್ರಾಸಿಕ್ಯೂಷನ್ ಕುರಿತು ಹೇಳಿತು. ಅಲ್ಲದೇ, “ವೈದ್ಯಕೀಯ ಮಂಡಳಿಯ ತಪಾಸಣೆಗೆ ಏಕೆ ಒಳಗಾಗಬಾರದು” ಎಂದು ಸಿ ವಿ ನಾಗೇಶ್‌ ಅವರನ್ನು ಪ್ರಶ್ನಿಸಿತು.

ಆಗ ನಾಗೇಶ್‌ ಅವರು “ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ದರ್ಶನ್‌ ಬೆನ್ನು ಹುರಿ ಸಮಸ್ಯೆಗೆ ಸಾಂಪ್ರದಾಯಿಕ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ವಿಧಾನದಲ್ಲಿ ಚಿಕಿತ್ಸೆ ಪಡೆದರೆ ನೋವು ಕೊಂಚ ಕಡಿಮೆಯಾಗಬಹುದೇ ವಿನಾ ಸಂಪೂರ್ಣವಾಗಿ ಗುಣವಾಗುವುದಿಲ್ಲ. ಹೀಗಾಗಿ, ಶಸ್ತ್ರಚಿಕಿತ್ಸೆ ಅಗತ್ಯವಿದೆ. ಅಷ್ಟಕ್ಕೂ ಎಷ್ಟು ದಿನ, ಯಾವೆಲ್ಲಾ ಚಿಕಿತ್ಸೆ ಬೇಕು ಎಂಬುದಕ್ಕೆ ಮೈಸೂರಿನ ಅಪೊಲೊ ಆಸ್ಪತ್ರೆ ವೈದ್ಯರೇ ವರದಿ ನೀಡಬಹುದು” ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಾಳೆ ಮಧ್ಯಂತರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸಲಾಗುವುದು ಎಂದು ಆದೇಶಿಸಿತು.

Kannada Bar & Bench
kannada.barandbench.com