ಕನ್ನಡದಲ್ಲಿ ತೀರ್ಪು ಪ್ರಕಟಣೆ: ಕರ್ನಾಟಕ ಹೈಕೋರ್ಟ್‌ನಿಂದ ಹೊಸತೊಂದು ಅಧ್ಯಾಯ

“ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು” ಎಂದು ಪ್ರತಿವಾದಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌.
Kannada and Karnataka High Court
Kannada and Karnataka High Court
Published on

ಕನ್ನಡ ಆಡಳಿತ ಭಾಷೆಯಷ್ಟೇ ಅಲ್ಲ, ನ್ಯಾಯದಾನದ ಭಾಷೆಯೂ ಆಗಬೇಕು ಎನ್ನುವ ಕೂಗಿಗೆ ಸ್ಪಂದಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಪ್ರಕರಣವೊಂದರಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌ ಮತ್ತು ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ನೀಡಿದ ಈ ತೀರ್ಪು ಬುಧವಾರವಷ್ಟೇ ಆಚರಿಸಲ್ಪಟ್ಟಿದ್ದ ಭಾರತ ಭಾಷಾ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಿತು.

ತುಮಕೂರಿನ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ (ವರ್ಸಸ್‌ ಎಸ್‌ ಲಿಂಗಣ್ಣ ಮತ್ತು ಇತರರು) ಅವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು (ಒರಿಜನಲ್‌ ಸೈಡ್‌ ಅಪೀಲ್‌) ಪೀಠ ಪುರಸ್ಕರಿಸಿದೆ.

Justice Krishna Dixit & Justice C M Joshi
Justice Krishna Dixit & Justice C M Joshi

ಈ ಪ್ರಕರಣದ ತೀರ್ಪನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಮೂರ್ತಿಗಳು ಬರೆದಿದ್ದಾರೆ. ತೀರ್ಪಿನ ಕಾರ್ಯಕಾರಿ (ಆಪರೇಟಿವ್‌) ಭಾಗವನ್ನು ನ್ಯಾ. ದೀಕ್ಷಿತ್‌ ಅವರು ಕನ್ನಡದಲ್ಲಿ ಓದುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಹಾಡಿದರು. ಈ ಹಿಂದೆ ನ್ಯಾ. ಅರಳಿ ನಾಗರಾಜ್‌ ಅವರು ಸಹ ಕನ್ನಡದಲ್ಲಿಯೇ ತೀರ್ಪು ನೀಡುವ ಮೂಲಕ ನಾಡಿನ ಗಮನ ಸೆಳೆದಿದ್ದರು. ಆದರೆ, ಅವರ ಕನ್ನಡ ತೀರ್ಪು ಇಂಗ್ಲಿಷ್‌ ತೀರ್ಪಿನ ತರ್ಜುಮೆಯಾಗಿತ್ತು. ಎರಡೂ ತೀರ್ಪುಗಳನ್ನು ಮೂಲ ತೀರ್ಪೆಂದು ಪರಿಗಣಿಸಬೇಕೆಂದು ಅವರು ಆ ವೇಳೆ ಹೇಳಿದ್ದರು

ತೀರ್ಪನ್ನು ಓದಿದ ನಂತರ ನ್ಯಾ. ದೀಕ್ಷಿತ್‌ ಅವರು “ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು” ಎಂದು ಪ್ರತಿಪಾದಿಸಿದರು.

ತೀರ್ಪು ಓದುವುದಕ್ಕೂ ಮುನ್ನ, “ನಿನ್ನೆ (ಡಿ.11, ಬುಧವಾರ) ಭಾರತ ಭಾಷಾ ದಿನವಾದ ಹಿನ್ನೆಲೆಯಲ್ಲಿ ಇಂದು ಕನ್ನಡದಲ್ಲಿ ಆದೇಶ ಮಾಡುತ್ತಿದ್ದೇವೆ. ಭಾರತದ ಭಾಷೆಗಳಿಗೆ ಮಾನ್ಯತೆ ನೀಡುವ ದಿವಸವೇ ಭಾರತ ಭಾಷಾ ದಿನದ ಉದ್ದೇಶ. ನಿನ್ನೆ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರು ತೀರಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ರಜೆಯೂ ಇತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನಾವೇ ಎರಡು ಆದೇಶ ಬರೆದಿದ್ದೇವೆ. ಇದು ತರ್ಜುಮೆಯಲ್ಲ. ನಾವೇ ಕನ್ನಡದಲ್ಲಿ ಬರೆದಿದ್ದೇವೆ. ಕವಿ ರವೀಂದ್ರನಾಥ್‌ ಠ್ಯಾಗೋರ್‌ ಅವರು ಹೇಗೆ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಪದ್ಯ ಬರೆಯುತ್ತಿದ್ದರೋ ಹಾಗೆ” ಎಂದು ನ್ಯಾ. ದೀಕ್ಷಿತ್ ವಿವರಿಸಿದರು.

“ನಾವು ಹೊಸ ಟ್ರೆಂಡ್‌ ಆರಂಭಿಸಲು ನಿರ್ಧರಿಸಿದ್ದೇವೆ. ಈಗ ನಮ್ಮೆಲ್ಲಾ ತೀರ್ಪುಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ನೀಡುತ್ತಿದ್ದೇವೆ. ಹೀಗೆ ಮಾಡಿದರೆ ಜನಸಾಮಾನ್ಯರಿಗೆ ಅರ್ಥವಾಗುವುದು ಹೇಗೆ? ಇಂಗ್ಲೆಂಡ್‌ನಲ್ಲಿ 1730ರವರೆಗೆ ಲ್ಯಾಟಿನ್‌ ಭಾಷೆಯಲ್ಲಿ ನ್ಯಾಯಾಲಯದ ಕಲಾಪ ನಡೆಯುತ್ತಿತ್ತು. ಹೀಗಾಗಿ, ಇಂಗ್ಲೆಂಡ್‌ ನ್ಯಾಯಾಲಯದ ಆದೇಶ/ತೀರ್ಪು ಸ್ಥಳೀಯ ಭಾಷೆಯಲ್ಲಿ ನೀಡಬೇಕು ಎಂದು ಶಾಸನ ರೂಪಿಸಿದ್ದರು. ಹೀಗಾಗಿ, 1730ರಿಂದ ಇಂಗ್ಲೆಂಡ್‌ನಲ್ಲಿ ಇಂದಿನವರಿಗೆ ಆಂಗ್ಲ ಭಾಷೆಯಲ್ಲಿಯೇ ಕಲಾಪ ನಡೆಯುತ್ತಿದೆ” ಎಂದರು.

“ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಹಾಗೆ ಮಾಡಲಾಗಿದೆ. ಆದರೆ, ನಮ್ಮಲ್ಲಿ ಕೇಶವಾನಂದ ಭಾರತಿ ತೀರ್ಪು ನಮಗೇ ತಿಳಿಯುವುದಿಲ್ಲ. ನಿಮಗೆ (ವಕೀಲರನ್ನು ಕುರಿತು) ತಿಳಿಯಬಹುದು. ಆದೇಶದ ಸಕಾರಣಗಳನ್ನು ಒಳಗೊಂಡ ಭಾಗ ತಿಳಿಯಲಿ, ಬಿಡಲಿ, ಆಪರೇಟಿವ್‌ ಭಾಗವನ್ನಾದರೂ ಕನ್ನಡದಲ್ಲಿ ನೀಡಬೇಕು. ಆಗ ದಾವೆದಾರರಿಗೆ ತೀರ್ಪು ಅರ್ಥವಾಗುತ್ತದೆ” ಎಂದರು.

“ಸಂವಿಧಾನದ 348ನೇ ವಿಧಿಯ ಪ್ರಕಾರ ಇಂಗ್ಲಿಷ್‌ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ಭಾಷೆಯಾಗಿದೆ. ಆದರೆ, ಅಲ್ಲಿ ಇಂಗ್ಲಿಷ್‌ ಮಾತ್ರ ಎಂದು ಹೇಳಿಲ್ಲ. 348(1)ನೇ ವಿಧಿಯ ಅಡಿ ಸರ್ಕಾರವು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ರಾಜ್ಯಪಾಲರ ಮೂಲಕ ಕಾನೂನು ಮಾಡಬಹುದು ಎಂದು ಹೇಳಿದೆ. ಆದರೆ, ಸಂಬಂಧಪಟ್ಟವರು ಅದರ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ, ಅವರಾರೂ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ನಾವು ಕಾಯಲಾಗದು. ಕನ್ನಡದಲ್ಲಿ ತೀರ್ಪು ಬರುವುದು ಆರಂಭವಾಗಬೇಕು. ಅದಕ್ಕಾಗಿ ನಾವು ಆರಂಭಿಸಿದ್ದೇವೆ” ಎಂದರು.

ಮೊದಲಿಗೆ ಸಂವಿಧಾನದಲ್ಲಿ ಹೇಳಿರುವಂತೆ ಇಂಗ್ಲಿಷ್‌ನಲ್ಲಿ ತೀರ್ಪು ಓದಿದ ನ್ಯಾ. ದೀಕ್ಷಿತ್‌. ಆನಂತರ ಕನ್ನಡದಲ್ಲಿ “ಮೇಲ್ಕಾಣಿಸಿದ ಕಾರಣಗಳಿಂದಾಗಿ ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಏಕಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ತತ್‌ಪರಿಣಾಮವಾಗಿ ಟಿಒಎಸ್‌ ಸಂಖ್ಯೆ ೧/೨೦೨೩ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತ್ಯಾ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚವನ್ನು ಭರಿಸುವಂತಿಲ್ಲ” ಎಂದು ಓದಿದರು.

ಆನಂತರ ವಕೀಲರೊಬ್ಬರು “ಇದು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ನ್ಯಾಯಮೂರ್ತಿಗಳ ಈ ತೀರ್ಪು ಇತರ ನ್ಯಾಯಮೂರ್ತಿಗಳು ಉತ್ತಮ ಸಂದೇಶ ರವಾನಿಸಲಿದೆ” ಎಂದರು.

ಇದಕ್ಕೆ ನ್ಯಾ. ದೀಕ್ಷಿತ್‌ ಅವರು “ಹೌದು, ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಇಂಗ್ಲಿಷ್‌ ಅಥವಾ ಅವರಿಗೆ ತಿಳಿಯದ ಭಾಷೆಯಲ್ಲಿ ಹೇಳಿದರೆ ಆಗದು. ನಾವು ನಮ್ಮ ಕೆಲಸ ಮಾಡಿದ್ದೇವೆ” ಎಂದರು.

Also Read
ಕನ್ನಡದಲ್ಲಿ ತೀರ್ಪು: ನ್ಯಾ. ಕೃಷ್ಣ ದೀಕ್ಷಿತ್‌, ನ್ಯಾ. ಜೋಶಿ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ

ಈ ಮಧ್ಯೆ, ನ್ಯಾಯಮೂರ್ತಿ ಸಿ ಎಂ ಜೋಶಿ ಅವರು “ಸುಪ್ರೀಂ ಕೋರ್ಟ್‌ ಸಹ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ತೀರ್ಪುಗಳನ್ನು ಅನುವಾದ ಮಾಡಬೇಕು ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ 2,400 ತೀರ್ಪುಗಳು ಸದ್ಯ ಕನ್ನಡಕ್ಕೆ ಅನುವಾದಗೊಂಡಿದ್ದು, ಲಭ್ಯ ಇವೆ. 1,400 ಹೈಕೋರ್ಟ್‌ ತೀರ್ಪುಗಳು ಕನ್ನಡಕ್ಕೆ ಅನುವಾದವಾಗಿವೆ” ಎಂದರು.

ವಿಶೇಷವೆಂದರೆ ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌) ಬಳಕೆ ಮಾಡಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಈಚೆಗೆ ಆರಂಭಿಸಲಾಗಿದೆ. ಇದರ ಭಾಗವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಸಿ ಎಂ ಜೋಶಿ ಅವರ ನೇತೃತ್ವದಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳನ್ನು ಅನುವಾದ ಮಾಡುವ ಸಲಹಾ ಸಮಿತಿಯನ್ನು 2023ರ ಫೆಬ್ರವರಿಯಲ್ಲಿ ರಚಿಸಲಾಗಿದೆ.

Kannada Bar & Bench
kannada.barandbench.com