ಕಾನೂನು ವಿದ್ಯಾರ್ಥಿಯು ವಿಷಯವೊಂದರಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಕಲ್ಪಿಸಲು ನಿರಾಕರಿಸಿದ್ದ ರಾಷ್ಟ್ರೀಯ ವಿಶ್ವವಿದ್ಯಾಲಯದ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಆದೇಶವನ್ನು ಬುಧವಾರ ಕರ್ನಾಟಕ ಹೈಕೋರ್ಟ್ ಬದಿಗೆ ಸರಿಸಿದೆ.
ಪ್ರಾಜೆಕ್ಟ್ ಒಂದರ ಸಲ್ಲಿಕೆಗೆ ಸಂಬಂಧಿಸಿದಂತೆ ಕೃತಿಚೌರ್ಯ ಎಸಗಿದ್ದಾರೆ ಎಂದು ಕಾನೂನು ವಿದ್ಯಾರ್ಥಿಗೆ ಎನ್‌ಎಲ್‌ಎಸ್‌ಐಯು ʼಎಫ್ʼ ಶ್ರೇಣಿ ನೀಡಿತ್ತು. ಅರ್ಜಿದಾರರಿಗೆ ವೈಯಕ್ತಿಕ ವಿವರಣೆ ನೀಡಲು ಅವಕಾಶ ಕಲ್ಪಿಸಬೇಕಾಗಿತ್ತು ಎಂದಿರುವ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ವಿಶವಿದ್ಯಾಲಯದ ಆದೇಶವನ್ನು ವಜಾಗೊಳಿಸಿದೆ.
ಪ್ರಾಜೆಕ್ಟ್ ವರ್ಕ್‌ನಲ್ಲಿ ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ಮಾರ್ಚ್ 13ರಂದು ನಡೆದಿದ್ದ ಮಕ್ಕಳ ಹಕ್ಕುಗಳ ಕಾನೂನು ಪರೀಕ್ಷೆಯಲ್ಲಿ ಕರ್ನಾಟಕ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಪಿ ಬಿ ಭಜಂತ್ರಿ ಅವರ ಪುತ್ರನಾದ ಅರ್ಜಿದಾರನಿಗೆ ವಿಶ್ವವಿದ್ಯಾಲಯವು ʼಎಫ್ʼ ಶ್ರೇಣಿ ನೀಡಿತ್ತು.
ಇದರ ಜೊತೆಗೆ ನಾಲ್ಕನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯುವ ದೃಷ್ಟಿಯಿಂದ ಅವರಿಗೆ ಮೂರನೇ ಟ್ರೈಮೆಸ್ಟರ್ ವಿಶೇಷ ಪೂರಕ ಪರೀಕ್ಷೆ ಬರೆಯಲೂ ಅವಕಾಶ ನೀಡಿರಲಿಲ್ಲ. ಇದರಿಂದ ನೊಂದು ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಇಮೇಲ್‌ನಲ್ಲಿ ಅರ್ಜಿದಾರರು ತಾನು ಕೃತಿ ಚೌರ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಉಲ್ಲೇಖಿಸಿ ಅಕ್ಟೋಬರ್ 17ರಂದು ಎನ್‌ಎಲ್‌ಎಸ್‌ಐಯು ಆಕ್ಷೇಪಣಾ ಮನವಿ ಸಲ್ಲಿಸಿತ್ತು.
ಕೃತಿಚೌರ್ಯ ಗಂಭೀರ ವಿಚಾರ ಎಂಬುದನ್ನು ಒಪ್ಪಿಕೊಂಡಿರುವ ನ್ಯಾಯಾಲಯವು ಕೃತಿ ಚೌರ್ಯವಾಗಿದೆ ಎಂಬುದನ್ನು ಸಾಬೀತುಪಡಿಸಲು ವಿಷಯದ ಬೋಧಕರು ಏನನ್ನೂ ದಾಖಲೆ ರೂಪದಲ್ಲಿ ನೀಡಿಲ್ಲ ಎಂದಿದೆ. ಇದರ ಜೊತೆಗೆ ಪರೀಕ್ಷಾ ನಿಬಂಧನೆಗಳ ಅನ್ವಯ ವಿಷಯದ ಬೋಧಕರು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮುಖ್ಯಸ್ಥರಿಗೆ ಪತ್ರ ಮುಖೇನ ವಿಚಾರ ತಿಳಿಸಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
“…ಬೈಬಲ್ ನ ಸಾಹಿತ್ಯದ ಪ್ರಕಾರ ಆಡಮ್ ಮತ್ತು ಈವ್ ಅವರು ಈಡನ್ ಗಾರ್ಡನ್‌ನಲ್ಲಿ ನಿಷೇಧಿಸಲ್ಪಟ್ಟ ಹಣ್ಣು ತಿಂದದ್ದಕ್ಕೆ ಅವರಿಗೆ ಶಿಕ್ಷೆ ವಿಧಿಸುವುದಕ್ಕೂ ಮುನ್ನ ದೇವರು ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿಲು ಅವಕಾಶ ಮಾಡಿಕೊಟ್ಟಿದ್ದ ಎಂದು ಉಲ್ಲೇಖಿಸಲಾಗಿದೆ. ವೈಯಕ್ತಿಕವಾಗಿ ತಮ್ಮ ಅಭಿಪ್ರಾಯ ದಾಖಲಿಸಲು ವಿದ್ಯಾರ್ಥಿಗೆ ತರ್ಕಬದ್ಧವಾದ ಅವಕಾಶ ಕಲ್ಪಿಸಿಕೊಟ್ಟಿದ್ದರೆ ದೇವಲೋಕ ಕುಸಿಯುತ್ತಿತ್ತೇ ಎಂಬುದು ಒಗಟಾಗಿಯೇ ಉಳಿದಿದೆ. ಇದೆಲ್ಲಕ್ಕೂ ಮಿಗಿಲಾಗಿ ನ್ಯಾಯಸಮ್ಮತ ಕಾರ್ಯವಿಧಾನವು ಸಾಂವಿಧಾನಿಕ ಬದ್ಧತೆಯಾಗಿದ್ದು, ಪ್ರತಿಕ್ರಿಯಿಸುವ ಪ್ರತಿವಾದಿಯು ಸಂವಿಧಾನದ 12ನೇ ವಿಧಿ ಅನ್ವಯ ಪ್ರಭುತ್ವದ ಅಂಗ ಸಂಸ್ಥೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಹೊಂದಿರುವ ವಿಶ್ವವಿದ್ಯಾಲಯಕ್ಕೆ ತಾನು ವ್ಯವಹರಿಸುತ್ತಿರುವುದು ನಮ್ಮ ವಿದ್ಯಾರ್ಥಿಗಳ ಜೊತೆಗೇ ವಿನಾ ಮತ್ತೊಬ್ಬರ ಚರಾಸ್ತಿಯ ಜೊತೆಗಲ್ಲ ಎಂಬುದನ್ನು ನೆನೆಪಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ…”
ಕರ್ನಾಟಕ ಹೈಕೋರ್ಟ್