ʼಯಾವುದೇ ಪ್ರಶಸ್ತಿಗಳ ಬಗ್ಗೆ ಆಸಕ್ತಿ ಇಲ್ಲʼ: ನ್ಯಾಯಾಧೀಶರನ್ನು ಪ್ರಶಸ್ತಿಗೆ ಪರಿಗಣಿಸುವ ಮನವಿ ವಜಾ ಮಾಡಿದ ಹೈಕೋರ್ಟ್‌

ಇಂಥವರಿಗೆ ಪ್ರಶಸ್ತಿ ನೀಡಬೇಕು ಎಂದು ಹೇಳಲು ಯಾರಿಗೂ ಹಕ್ಕಿಲ್ಲ. ಮನವಿ ಯಾವುದೇ ಅರ್ಹತೆ ಹೊಂದಿಲ್ಲದಿರುವುದರಿಂದ ವಜಾ ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ʼಯಾವುದೇ ಪ್ರಶಸ್ತಿಗಳ ಬಗ್ಗೆ ಆಸಕ್ತಿ ಇಲ್ಲʼ: ನ್ಯಾಯಾಧೀಶರನ್ನು ಪ್ರಶಸ್ತಿಗೆ ಪರಿಗಣಿಸುವ ಮನವಿ ವಜಾ ಮಾಡಿದ ಹೈಕೋರ್ಟ್‌
Chief Justice Ritu Raj Awasthi, Justice Sachin Shankar Magdum and Karnataka HC

“ಯಾವುದೇ ಪ್ರಶಸ್ತಿ ಪಡೆಯುವ ಆಸಕ್ತಿ ನಮಗೆ ಇಲ್ಲ. ಕೆಲಸ ಮಾಡುವುದು ನಮಗೆ ಇಷ್ಟ” ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಶುಕ್ರವಾರ ವಜಾ ಮಾಡಿದರು.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ಪದ್ಮ ಪ್ರಶಸ್ತಿಗಳಿಗೆ ಪರಿಗಣಿಸಬೇಕು ಮತ್ತು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಹಿರಿಯ ನ್ಯಾಯಮೂರ್ತಿಯ ಹೆಸರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲು ಆದೇಶಿಸಬೇಕು ಎಂದು ಕೋರಿ ಹುಬ್ಬಳ್ಳಿಯಲ್ಲಿ ನೆಲೆಸಿರುವ ಮನೋವಿಜ್ಞಾನಿ, ವಕೀಲ ಡಾ. ವಿನೋದ್‌ ಕುಲಕರ್ಣಿ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿತು.

ಅರ್ಜಿದಾರ ವಕೀಲ ಕುಲಕರ್ಣಿ ಅವರು “ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪುರುಷ ನ್ಯಾಯಮೂರ್ತಿಗಳಿಗೆ ʼನೈಟ್‌ ಬ್ಯಾಚಲರ್' (Knight Bachelor) ಮತ್ತು ಮಹಿಳಾ ನ್ಯಾಯಮೂರ್ತಿಗಳಿಗೆ ʼಡೇಮ್ ಕಮಾಂಡರ್‌', (Dame Commander) ಪದವಿಗಳನ್ನು ನೀಡಲಾಗುತ್ತದೆ. ಹೀಗಾಗಿ, ನಮ್ಮ ನ್ಯಾಯಮೂರ್ತಿಗಳನ್ನೂ ಪ್ರಶಸ್ತಿಗೆ ಪರಿಗಣಿಸಬೇಕು” ಎಂದರು.

ಇದಕ್ಕೆ ಪೀಠವು “ನಮ್ಮ ಸಂವಿಧಾನದ ಅಡಿ ಅದಕ್ಕೆ ಅವಕಾಶವಿಲ್ಲ. ನ್ಯಾಯಮೂರ್ತಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಮಗೆ ಬೇರೆ ವಿಷಯ ಸಿಗಲಿಲ್ಲವೇ? ಪ್ರಶಸ್ತಿ ಪಡೆಯಲು ನಮಗೆ ಇಷ್ಟವಿಲ್ಲ. ಕೆಲಸ ಮಾಡಲು ನಮಗೆ ಇಷ್ಟ. ನಮಗೆ ಯಾವುದೇ ಪ್ರಶಸ್ತಿ ಬೇಡ. ಸಂಪೂರ್ಣವಾಗಿ ನಾವು ಪ್ರಶಸ್ತಿಗಳಿಗೆ ವಿರುದ್ಧವಾಗಿದ್ದೇವೆ” ಎಂದು ಪೀಠವು ಹೇಳಿತು.

“ತಮ್ಮ ಕೋರಿಕೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಲ್ಪಿಸುವ ಕುರಿತು ಅರ್ಜಿದಾರರು ನ್ಯಾಯಾಲಯದ ಮನವೊಲಿಸಲು ವಿಫಲರಾಗಿದ್ದಾರೆ. ಪದ್ಮ ಪ್ರಶಸ್ತಿಗಳು ಅಥವಾ ರಾಜ್ಯ ಪ್ರಶಸ್ತಿಗಳನ್ನು ನೀಡುವುದು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟಿರುವ ವಿಚಾರ. ಇಂಥವರಿಗೆ ಪ್ರಶಸ್ತಿ ನೀಡಬೇಕು ಎಂದು ಹೇಳಲು ಯಾರಿಗೂ ಹಕ್ಕಿಲ್ಲ. ಮನವಿ ಯಾವುದೇ ಅರ್ಹತೆ ಹೊಂದಿಲ್ಲದಿರುವುದರಿಂದ ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ನ್ಯಾಯಮೂರ್ತಿಗಳಿಗೆ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಕೊಡಮಾಡುವುದರಿಂದ ಅವರ ಮನೋಬಲ ಹೆಚ್ಚಾಗಲಿದ್ದು, ಅವರ ಕಾರ್ಯನಿರ್ವಹಣೆಯೂ ವೃದ್ಧಿಸಲಿದೆ. ಇದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತುರ್ತಾಗಿ ಪ್ರಕರಣಗಳ ವಿಲೇವಾರಿ ಮಾಡಲು ಅನುಕೂಲ ಮಾಡಿಕೊಡಬಹುದು” ಎಂದು ವಿನಯ್‌ ಕುಲಕರ್ಣಿ ಮನವಿಯಲ್ಲಿ ಹೇಳಿದ್ದಾರೆ.

Also Read
ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ ಪ್ರಶಸ್ತಿ ವಿವಾದ: ಪಿಐಎಲ್ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

“ಸರ್ಕಾರಿ ವೈದ್ಯರಿಗೆ ಈ ಪ್ರಶಸ್ತಿಗಳನ್ನು ನೀಡಿ ಹಾಲಿ ನ್ಯಾಯಮೂರ್ತಿಗಳಿಗೆ ನೀಡದಿರುವುದು ಸಂವಿಧಾನದ ಮೂಲರಚನೆಗೆ ವಿರುದ್ಧವಾಗಿದೆ. ವೈದ್ಯ ಮತ್ತು ಕಾನೂನು ಎರಡೂ ವೃತ್ತಿಗಳೂ ಅತ್ಯಂತ ಗೌರವಯುತವಾದ ವೃತ್ತಿಗಳಾಗಿವೆ” ಎಂದು ಮನವಿಯಲ್ಲಿ ಹೇಳಲಾಗಿತ್ತು.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನ್ಯಾಯಾಧೀಶರನ್ನು ಪ್ರತ್ಯೇಕವಾಗಿ, ಏಕಾಂತವಾದ ಸಾಮಾಜಿಕ ಜೀವನ ನಡೆಸುವಂತೆ ಮಾಡುವುದು 'ಭಾರತೀಕರಣದ ವಿರುದ್ಧವಾಗಿದೆ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಹೇಳಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com