ಕಿರುಕುಳ ನೀಡಲು ಶಾಸನದ ನಿಬಂಧನೆಗಳನ್ನು ಅಸ್ತ್ರ ಮಾಡಿಕೊಳ್ಳಲಾಗದು: ಮಹೇಶ್ವರಿ ಮನವಿ ನಿರ್ವಹಣೆಗೆ ಅರ್ಹ ಎಂದ ಹೈಕೋರ್ಟ್‌

ಉತ್ತರ ಪ್ರದೇಶ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 41ಎ ಅನ್ನು ಬೆದರಿಕೆಯ ವಿಧಾನವಾಗಿ ಬಳಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಜಿ ನರೇಂದರ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
Manish Maheshwari, Twitter
Manish Maheshwari, Twitter

ಗಾಜಿಯಾಬಾದ್‌ ವಿಡಿಯೊ ದಾಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 41ಎ ಅಡಿ ತಮಗೆ ನೀಡಿರುವ ನೋಟಿಸ್‌ ಪ್ರಶ್ನಿಸಿ ಟ್ವಿಟರ್‌ನ ಮನೀಶ್‌ ಮಹೇಶ್ವರಿ ಸಲ್ಲಿಸಿದ್ದ ಮನವಿಯು ನಿರ್ವಹಣೆಗೆ ಅರ್ಹ ಎಂದು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ಮೊದಲಿಗೆ ನೀಡಿದ್ದ ನೋಟಿಸ್‌ಗೆ ಮಹೇಶ್ವರಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರನ್ನು ಬೆದರಿಸುವ ತಂತ್ರದ ಭಾಗವಾಗಿ ಸೆಕ್ಷನ್‌ 41ಎ ಅಡಿ ನೋಟಿಸ್‌ ನೀಡಲಾಗಿದೆ ಎಂದು ನ್ಯಾಯಮೂರ್ತಿ ಜಿ ನರೇಂದರ್‌ ನೇತೃತ್ವದ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.

“ಕಿರುಕುಳ ನೀಡಲು ಶಾಸನದ ನಿಬಂಧನೆಗಳನ್ನು ಅಸ್ತ್ರ ಮಾಡಿಕೊಳ್ಳಲು ಅನುಮತಿಸಲಾಗದು. ಕನಿಷ್ಠ ಪಕ್ಷ ಮೇಲ್ನೋಟಕ್ಕಾದರೂ ಅರ್ಜಿದಾರರು (ಮಹೇಶ್ವರಿ) ಭಾಗಿಯಾಗಿದ್ದಾರೆ ಎಂಬುದನ್ನು ತೋರ್ಪಡಿಸಲು ಅಗತ್ಯವಾದ ದಾಖಲೆಗಳನ್ನು ಉತ್ತರ ಪ್ರದೇಶ ಪೊಲೀಸರು ಪೀಠದ ಮುಂದೆ ಇಟ್ಟಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ದುರುದ್ದೇಶದಿಂದ ಸೆಕ್ಷನ್‌ 41ಎ ಅಸ್ತ್ರ ಜಳಪಿಸಲಾಗಿದ್ದು, ಮಹೇಶ್ವರಿಗೆ ನೀಡಲಾಗಿರುವ ನೋಟಿಸ್‌ ಅನ್ನು ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ಜಾರಿ ಮಾಡಲಾಗಿದೆ ಎಂದು ಪರಿಗಣಿಸಬೇಕು ಎಂದಿರುವ ನ್ಯಾಯಾಲಯವು ತನಿಖೆಗೆ ಸಹಕರಿಸುವಂತೆ ಮಹೇಶ್ವರಿಗೆ ಸೂಚಿಸಿದೆ.

ಸಾರ್ವಜನಿಕ ವೇದಿಕೆಯಲ್ಲಿ ಲಭ್ಯವಿರುವ ಮಾಹಿತಿ ಪಡೆಯಲು ಉತ್ತರ ಪ್ರದೇಶ ಪೊಲೀಸರು ವಿಫಲವಾಗಿರುವುದು ಮಾತ್ರವಲ್ಲದೇ ಪ್ರಕರಣದ ಅರ್ಹತೆ ವಿಚಾರದಲ್ಲಿ ತಾಳಿರುವ ದಿವ್ಯಮೌನ ಮತ್ತು ನ್ಯಾಯವ್ಯಾಪ್ತಿಯಲ್ಲಿ ಅರ್ಜಿಯನ್ನು ರದ್ದುಗೊಳಿಸಲು ಪೀಠವನ್ನು ಒತ್ತಾಯಿಸಿರುವ ಪ್ರಯತ್ನದ ಬಗ್ಗೆಯೂ ನ್ಯಾ. ನರೇಂದರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಐರ್ಲೆಂಡ್‌ ಮತ್ತು ಟ್ವಿಟರ್‌ ನೆದರ್ಲೆಂರ್ಡ್ಸ್‌ನ ಬಿವಿಯಲ್ಲಿರುವ ಟ್ವಿಟರ್‌ ಇಂಟರ್‌ನ್ಯಾಷನಲ್‌ ಕಂಪೆನಿಯ ನಿಯಂತ್ರಣಕ್ಕೆ ಒಳಪಟ್ಟಿರುವ ಟ್ವಿಟರ್‌ ಇಂಡಿಯಾವು ಸ್ವತಂತ್ರ ಸಂಸ್ಥೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿನ ವಿಷಯ ಮೇಲೆ ಅದು ಯಾವುದೇ ನಿಯಂತ್ರಣ ಹೊಂದಿಲ್ಲ. ಅಮೆರಿಕಾದಲ್ಲಿರುವ ಟ್ವಿಟರ್‌ ಇಂಕ್‌ ವಿಷಯದ ಮೇಲೆ ನಿಯಂತ್ರಣ ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ. ಎರಡು ದಿನಗಳಲ್ಲಿ ಸತತ ಐದು ತಾಸು ನ್ಯಾಯಾಲಯವು ಆದೇಶ ಹೊರಡಿಸಿದೆ.

Also Read
ಟ್ವಿಟರ್‌ ಇಂಡಿಯಾದಲ್ಲಿ ಟ್ವಿಟರ್‌ ಇಂಕ್‌ ಯಾವುದೇ ಷೇರು ಹೊಂದಿಲ್ಲ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಮನೀಶ್‌ ಪರ ವಕೀಲರು

ಉತ್ತರ ಪ್ರದೇಶ ಪೊಲೀಸರ ತನಿಖೆಗೆ ಅಡ್ಡಿಪಡಿಸುವ ಯಾವುದೇ ಉದ್ದೇಶವನ್ನು ತಮ್ಮ ಕಕ್ಷಿದಾರ ಮನೀಶ್‌ ಮಹೇಶ್ವರಿ ಹೊಂದಿಲ್ಲ ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಹೇಳಿದ್ದರು. ವಿಡಿಯೊ ಕಾನ್ಫರೆನ್ಸ್‌ ಮೂಲಕ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಾಗಿ ಮಹೇಶ್ವರಿ ಹೇಳಿದ್ದರು. ಆದರೆ, ಅದಕ್ಕೆ ಪೊಲೀಸರು ನಿರಾಕರಿಸಿದ್ದರು.

ವಿಷಯದ ಮೇಲೆ ನಿಯಂತ್ರಣ ಹೊಂದಿರುವ ಟ್ವಿಟರ್‌ ಇಂಕ್‌, ಟ್ವಿಟರ್‌ ಇಂಡಿಯಾದಲ್ಲಿ ಯಾವುದೇ ಷೇರು ಹೊಂದಿಲ್ಲ ಎಂದು ನಾಗೇಶ್‌ ವಾದಿಸಿದ್ದರು. ಉತ್ತರ ಪ್ರದೇಶ ಪೊಲೀಸರನ್ನು ವಕೀಲ ಪ್ರಸನ್ನ ಕುಮಾರ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com