ಮಾದಕ ದ್ರವ್ಯ: ಐದು ಜಿಲ್ಲೆಗಳಲ್ಲಿ ಎನ್‌ಡಿಪಿಎಸ್ ನ್ಯಾಯಾಲಯ ಸ್ಥಾಪಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮಾದಕ ವಸ್ತು ಪ್ರಕರಣಗಳ ಬಾಕಿ ಉಳಿಯುವಿಕೆ ತಪ್ಪಿಸಲು 1985ರ ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ ಕಾಯಿದೆಯಡಿಯ ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸಲು ಕೇರಳದ ಐದು ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ [ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ಮತ್ತು ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೇರಳ ರಾಜಧಾನಿ ತಿರುವನಂತಪುರ ಮತ್ತು ಎರ್ನಾಕುಲಂನಲ್ಲಿ ಮಾತ್ರವೇ ಈ ಬಗೆಯ ನ್ಯಾಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದು ಸಾಲದು ಎಂದು ಅಭಿಪ್ರಾಯಪಟ್ಟ ಪೀಠ ತ್ರಿಶೂರ್, ಪಾಲಕ್ಕಾಡ್ ಹಾಗೂ ಮಂಜೇರಿಯಲ್ಲಿ ಕೂಡ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂಥೇ ಆದೇಶಿಸಿದೆ.
ಸರ್ಕಾರದ ನಿರ್ಧಾರ ಎರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಬಾರದಿತ್ತು. ತ್ರಿಶೂರ್, ಪಾಲಕ್ಕಾಡ್ ಮತ್ತು ಮಂಜೇರಿ ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಗೂ ಸಂಪೂರ್ಣವಾಗಿ ಎನ್‌ಡಿಪಿಎಸ್ ಪ್ರಕರಣಗಳನ್ನಷ್ಟೇ ಆಲಿಸಲು ನ್ಯಾಯಾಲಯ ಸ್ಥಾಪಿಸುವ ತುರ್ತು ಅಗತ್ಯವಿದೆ ಎಂದು ಅದು ಹೇಳಿತು.
ಸಂಪೂರ್ಣ ಮೂಲಸೌಕರ್ಯಗಳೊಂದಿಗೆ ಈ ನ್ಯಾಯಾಲಯಗಳನ್ನು ಎಂಟು ವಾರಗಳೊಳಗೆ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಮುಖ್ಯ ನ್ಯಾಯಮೂರ್ತಿ ಸೌಮ್ಯ ಸೇನ್ ಮತ್ತು ನ್ಯಾಯಮೂರ್ತಿ ಸಿ ಜಯಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶಿಸಿದೆ.
ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್) ಸಿಬ್ಬಂದಿ ಕೊರತೆ ಇರುವುದರಿಂದ ಮಾದಕ ದ್ರವ್ಯ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕೇರಳ ಕಾನೂನು ಸೇವಾ ಪ್ರಾಧಿಕಾರ ವಿಚಾರಣೆ ವೇಳೆ ಆತಂಕ ವ್ಯಕ್ತಪಡಿಸಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರು ಪ್ರಸ್ತಾವಿಸಿದ 31 ಹುದ್ದೆಗಳ ಪೈಕಿ ಕೇವಲ 12 ಹುದ್ದೆಗಳಿಗೆ ಮಾತ್ರ ಅನುಮೋದನೆ ದೊರೆತಿದ್ದು, ಉಳಿದ 19 ಹುದ್ದೆಗಳ ಸೃಷ್ಟಿಗೆ ಹಣಕಾಸು ಇಲಾಖೆಯ ಅನುಮೋದನೆ ಬಾಕಿ ಇದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.
ಅಂತೆಯೇ ಅನುಮೋದಿತ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಹಾಗೂ ಉಳಿದ ಹುದ್ದೆಗಳ ಕುರಿತು ಹಣಕಾಸು ಇಲಾಖೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಅದು ನಿರ್ದೇಶಿಸಿತು.
ಸ್ವಯಂಪ್ರೇರಿತ ಪ್ರಕರಣವನ್ನು 2026ರ ಮಾರ್ಚ್ 24ರಂದು ಹಾಗೂ ಕೆಇಎಲ್‌ಎಸ್‌ಎ ಸಲ್ಲಿಸಿದ್ದ ಅರ್ಜಿಯನ್ನು 2026ರ ಫೆಬ್ರವರಿ 17ರಂದು ವಿಚಾರಣೆ ನಡೆಸಲಾಗುವುದು ಎಂದು ಪೀಠ ಇದೇ ವೇಳೇ ತಿಳಿಸಿತು.


