ಪೋಕ್ಸೊ ದುರ್ಬಳಕೆ ಬಗ್ಗೆ ಕೇರಳ ಹೈಕೋರ್ಟ್ ಆತಂಕ: ಸುಳ್ಳು ಆರೋಪ ಹೊತ್ತವರಿಗೆ ಪರಿಹಾರ ನೀಡುವವರಾರು ಎಂದು ಪ್ರಶ್ನೆ

ಇತ್ತೀಚಿನ ದಿನಗಳಲ್ಲಿ, ಪೋಕ್ಸೊ ಕಾಯಿದೆಯ ದುರುಪಯೋಗ ಹೆಚ್ಚುತ್ತಿದ್ದು, ಇದು ಕಾನೂನಿನ ಉದ್ದೇಶವನ್ನು ದುರ್ಬಲಗೊಳಿಸುವುದಲ್ಲದೆ ನ್ಯಾಯ ವಿತರಣಾ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಹೇಳಿದೆ.
POCSO Act and Kerala High Court
POCSO Act and Kerala High Court
Published on

ಸಿಟ್ಟಿನಿಂದ ತನ್ನ ಸೋದರಸಂಬಂಧಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿರುವುದಾಗಿ ಬಾಲಕಿಯೊಬ್ಬಳು ಒಪ್ಪಿಕೊಂಡ ಪ್ರಕರಣದ ವಿಚಾರಣೆ ವೇಳೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ, 2012ರ (ಪೋಕ್ಸೊ ಕಾಯಿದೆ) ದುರುಪಯೋಗದ ಬಗ್ಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ

ಸುಳ್ಳು ಮಾಹಿತಿ ನೀಡಿದರೂ ಪೋಕ್ಸೊ ಕಾಯಿದೆ ಅಪ್ರಾಪ್ತ ದೂರುದಾರರಿಗೆ ಶಿಕ್ಷೆ ನೀಡದೆ ಇರುವುದರಿಂದ ಅಂತಹ ಸುಳ್ಳು ದೂರುಗಳಿಗೆ ಯಾರು ಹೊಣೆಗಾರರಾಗುತ್ತಾರೆ ಎಂಬ ಗಂಭೀರ ಪ್ರಶ್ನೆಯನ್ನು ನ್ಯಾಯಮೂರ್ತಿ ಸಿ ಎಸ್ ಡಯಾಸ್ ಎತ್ತಿದರು.

Also Read
ಸಂತ್ರಸ್ತೆ ವರಿಸಿದ ಯುವಕನ ವಿರುದ್ಧದ ಪೋಕ್ಸೊ ಪ್ರಕರಣ ವಜಾ; ಸಮಾಜದ ಅಪಕೀರ್ತಿ ತಪ್ಪಿಸುವುದು ಅಗತ್ಯ ಎಂದ ಹೈಕೋರ್ಟ್‌

"ಅರ್ಜಿದಾರರು (ಆರೋಪಿ ಸೋದರ ಸಂಬಂಧಿಕರು) ಯಾವ ತಪ್ಪನ್ನು ಮಾಡಿದ್ದಾರೆ ಮತ್ತು ಅವರ ಅಕ್ರಮ ಬಂಧನ, ಅವರು ಅನುಭವಿಸಿದ ಮಾನಸಿಕ ಸಂಕಟ, ಆಘಾತ ಮತ್ತು ನೋವಿಗೆ ಪರಿಹಾರವನ್ನು ಯಾರು ನೀಡುತ್ತಾರೆ? " ಎಂದು ಪೀಠ ಕೇಳಿತು.

ಪೋಕ್ಸೊಕಾಯಿದೆಯು ಮಕ್ಕಳ ಸುರಕ್ಷತೆ, ಭದ್ರತೆ ಮತ್ತು ರಕ್ಷಣೆಗಾಗಿ ಜಾರಿಗೆ ತಂದ ಕ್ರಾಂತಿಕಾರಿ ಶಾಸನವಾಗಿದ್ದರೂ ಇತ್ತೀಚಿನ ದಿನಗಳಲ್ಲಿ, ಪೋಕ್ಸೊ ಕಾಯಿದೆಯ ದುರುಪಯೋಗ ಹೆಚ್ಚುತ್ತಿದೆ. ಪ್ರಸ್ತುತ ಪ್ರಕರಣ ಅದಕ್ಕೆ ನಿದರ್ಶನ. ಈ ಬಗೆಯ ದುರುಪಯೋಗ ಕಾಯಿದೆಯ ಉದ್ದೇಶವನ್ನು ದುರ್ಬಲಗೊಳಿಸುವುದಲ್ಲದೆ ನ್ಯಾಯ ವಿತರಣಾ ವ್ಯವಸ್ಥೆಯ ಸಮಗ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಸುಳ್ಳು ಪೊಕ್ಸೊ ಪ್ರಕರಣಗಳಿಗೆ ಕಡಿವಾಣ ಹಾಕುವುದು ಪ್ರಭುತ್ವಕ್ಕೆ ಬಿಟ್ಟ ವಿಚಾರ ಎಂದು ಕೂಡ ನ್ಯಾಯಾಲಯ ಇದೇ ವೇಳೆ ನುಡಿಯಿತು. ಅರ್ನೇಶ್‌ ಕುಮಾರ್‌ ಪ್ರಕರಣದ ತೀರ್ಪಿನಲ್ಲಿ ಸೂಚಿಸಲಾಗಿರುವ ತತ್ವಗಳ ಆಧಾರದ ಮೇಲೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ಸಂಗತಿ ಎಂದು ಅದು ಹೇಳಿದೆ.

17 ವರ್ಷದ ಇಬ್ಬರು  ಸೋದರಸಂಬಂಧಿಗಳು ತನ್ನ ಮೇಲೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯೊಬ್ಬಳು ಆರೋಪಿಸಿದ್ದಳು. ಎರಡು ತಿಂಗಳ ಕಾಲ ಜೈಲಿನಲ್ಲಿದ್ದ ಇಬ್ಬರು ಸಹೋದರರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

Also Read
ಪೋಕ್ಸೊ ಪ್ರಕರಣ: ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಬಿಎಸ್‌ವೈಗೆ ತಾತ್ಕಾಲಿಕ ವಿನಾಯಿತಿ ಕಲ್ಪಿಸಿದ ಹೈಕೋರ್ಟ್‌

ಆರೋಪಿಗಳು ತಮ್ಮ ವಿರುದ್ಧದ ಆರೋಪ ಸುಳ್ಳು ಎಂದು ಪ್ರತಿಪಾದಿಸಿದ್ದರು. ಈಗ ಪ್ರಾಪ್ತ ವಯಸ್ಕಳಾಗಿರುವ ದೂರುದಾರೆ ಕೂಡ ತಾನು ಸುಳ್ಳು ದೂರು ದಾಖಲಿಸಿದ್ದಾಗಿ ಅಫಿಡವಿಟ್‌ ಸಲ್ಲಿಸಿದ್ದಳು. ತನ್ನ ಮತ್ತು ತನ್ನ ಸಹಪಾಠಿ ನಡುವಿನ ಸಂಬಂಧವನ್ನು ಸೋದರ ಸಂಬಂಧಿಗಳು ವಿರೋಧಿಸಿದ್ದರಿಂದ ಅವರ ವಿರುದ್ಧ ಸುಳ್ಳು ಲೈಂಗಿಕ ಶೋಷಣೆ ಆರೋಪ ಮಾಡಿದ್ದಾಗಿ ಹೇಳಿದ್ದಳು.

ವಾದ ಆಲಿಸಿದ ನ್ಯಾಯಾಲಯ ಪೋಕ್ಸೊ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ವೇಳೆ ಅದರಲ್ಲಿಯೂ ರಕ್ತಸಂಬಂಧಿಗಳ ವಿರುದ್ಧ ಆರೋಪಗಳನ್ನು ಮಾಡಲಾದ ಪ್ರಕರಣಗಳಲ್ಲಿ ಪೋಕ್ಸೊ ಕಾಯಿದೆಯಡಿ ಬಂಧಿಸುವ ಮೊದಲು ಎಚ್ಚರಿಕೆ ವಹಿಸುವಂತೆ ಸೂಚಿಸಿತು. ಅಂತೆಯೇ ಜಾಮೀನು ಕೋರಿದ್ದ ಅರ್ಜಿಗಳನ್ನು ಪುರಸ್ಕರಿಸಿತು.

Kannada Bar & Bench
kannada.barandbench.com